ಶನಿವಾರ, ಜುಲೈ 2, 2022
20 °C
‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ದಾಳಿಗಾಗಿ ಈ ಮಾಧ್ಯಮಗಳ ದುರ್ಬಳಕೆ’

ದೇಶದ ಪ್ರಜಾಪ್ರಭುತ್ವದ ಮೇಲೆ ದಾಳಿಗೆ ಫೇಸ್‌ಬುಕ್‌, ಟ್ವಿಟರ್ ದುರ್ಬಳಕೆ: ಸೋನಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ದಾಳಿ ನಡೆಸುವ ಸಲುವಾಗಿ ಫೇಸ್‌ಬುಕ್‌ ಹಾಗೂ ಟ್ವಿಟರ್‌ನಂತಹ ಜಾಗತಿಕ ಮಟ್ಟದ ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಹೇಳಿದರು.

ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ದೇಶದ ಚುನಾವಣಾ ರಾಜಕಾರಣದ ಮೇಲೆ ಈ ಮಾಧ್ಯಮಗಳಿಂದಾಗುತ್ತಿರುವ ‘ವ್ಯವಸ್ಥಿತ ಪ್ರಭಾವ ಬೀರುವ ಯತ್ನ ಹಾಗೂ ಹಸ್ತಕ್ಷೇಪ’ವನ್ನು ಕೊನೆಗಾಣಿಸಬೇಕು ಎಂದು ಒತ್ತಾಯಿಸಿದರು.

‘ಕೆಲ ರಾಜಕೀಯ ಪಕ್ಷಗಳು, ಮುಖಂಡರು ಹಾಗೂ ಅವರ ಪರವಾಗಿರುವವರ ಬಗ್ಗೆ ಅಭಿಪ್ರಾಯ ರೂಪಿಸಲು, ಅವರನ್ನು ವೈಭವೀಕರಿಸುವ ಕಾರ್ಯಕ್ಕೆ ಈ ಮಾಧ್ಯಮಗಳ ಬಳಕೆ ಹೆಚ್ಚುತ್ತಿದೆ’ ಎಂದರು.

‘ಈ ಸಾಮಾಜಿಕ ಮಾಧ್ಯಮಗಳು ಎಲ್ಲ  ರಾಜಕೀಯ ಪಕ್ಷಗಳನ್ನು ಸಮಾನವಾಗಿ ಕಾಣುತ್ತಿಲ್ಲ ಎಂಬುದನ್ನು ದೇಶದ ಜನತೆ ಹಲವು ಸಂದರ್ಭಗಳಲ್ಲಿ ಗಮನಿಸಿದ್ದಾರೆ. ಪ್ರಜಾತಂತ್ರ ಮೇಲಿನ ದಾಳಿಗೆ ಅವುಗಳನ್ನು ಬಳಸಿಕೊಳ್ಳುವ ಅಪಾಯವೂ ಹೆಚ್ಚುತ್ತಿದೆ. ಹೀಗಾಗಿ, ಇದು ಗಂಭೀರ ವಿಷಯ’ ಎಂದು ಅವರು ಪ್ರತಿಪಾದಿಸಿದರು.

‘ಚುನಾವಣೆ ಸಂದರ್ಭದಲ್ಲಿ, ಇತರ ಪಕ್ಷಗಳಿಗಿಂತ ಬಿಜೆಪಿಯ ಜಾಹೀರಾತುಗಳಿಗೆ ಫೇಸ್‌ಬುಕ್ ಕಡಿಮೆ ದರ ವಿಧಿಸಿತ್ತು ಎಂಬುದಾಗಿ ಅಲ್‌ ಜಝೀರಾ ಹಾಗೂ ‘ದಿ ರಿಪೋರ್ಟ್ಸ್ ಕಲೆಕ್ಟಿವ್’ ಸುದ್ದಿಸಂಸ್ಥೆಗಳ ವರದಿಗಳು ಹೇಳುತ್ತವೆ’ ಎಂದು ಸೋನಿಯಾ ಗಾಂಧಿ ಸಭೆಯ ಗಮನಕ್ಕೆ ತಂದರು.

‘ಆಡಳಿತಾರೂಢ ಪಕ್ಷ, ಕಾರ್ಪೋರೇಟ್‌ ಕಂಪನಿಗಳು ಹಾಗೂ ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತಿರುವುದನ್ನು ಈ ವರದಿಗಳು ತೋರಿಸುತ್ತವೆ’ ಎಂದರು.

ಇದೇ ವಿಷಯವಾಗಿ ಮಾತನಾಡಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ‘ಐಟಿ ಕಾಯ್ದೆಯಲ್ಲಿ ಸೆಕ್ಷನ್‌ 66ಎ ಸೇರಿಸುವ ಮೂಲಕ ಕಾಂಗ್ರೆಸ್‌ ಪಕ್ಷವು ವಾಕ್‌ಸ್ವಾತಂತ್ರ್ಯವನ್ನು ಹತ್ತಿಕ್ಕಲು ಯತ್ನಿಸಿತ್ತು’ ಎಂದರು.

‘ಕಾಶ್ಮೀರದಲ್ಲಿ ಭಾರತೀಯ ವಾಯುಪಡೆ ಅಧಿಕಾರಿಗಳನ್ನು ಹತ್ಯೆ ಮಾಡಿರುವ ಯಾಸಿನ್‌ ಮಲಿಕ್‌, ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೊಂದಿಗಿದ್ದ ಚಿತ್ರಗಳನ್ನು ಈಗ ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ರೀತಿ ಚಿತ್ರಗಳನ್ನು ಹಂಚಿಕೊಳ್ಳುವುದನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾವ ರೀತಿ ದಮನ ಮಾಡಲಾಗಿತ್ತು ಎಂಬ ಬಗ್ಗೆ ಪರಿಶೀಲನೆ ನಡೆಸಲು ಹಾಗೂ ಶ್ವೇತಪತ್ರ ಹೊರಡಿಸುವ ಸಲುವಾಗಿ ಸಮಿತಿ ರಚನೆ ಮಾಡಬೇಕು ಎಂದು ಅವರು ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದರು.

* ಭಾವನಾತ್ಮಕ ವಿಷಯ ಹಾಗೂ ತಪ್ಪು ಮಾಹಿತಿಗಳ ಪ್ರಚಾರದಿಂದ ಯುವ ಜನರ ಮನಸುಗಳಲ್ಲಿ ದ್ವೇಷ ತುಂಬುವ ಮೂಲಕ ಫೇಸ್‌ಬುಕ್‌ನಂತಹ ಕಂಪನಿಗಳು ಲಾಭ ಮಾಡಿಕೊಳ್ಳುತ್ತಿವೆ.

-ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷೆ

‘ಪ್ರಜಾಪ್ರಭುತ್ವಕ್ಕೆ ಫೇಸ್‌ಬುಕ್‌ ಅಪಾಯಕಾರಿ’

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ವಿರುದ್ಧ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರೂ ಬುಧವಾರ ವಾಗ್ದಾಳಿ ನಡೆಸಿದ್ದು, ‘ಪ್ರಜಾಪ್ರಭುತ್ವಕ್ಕೆ ಫೇಸ್‌ಬುಕ್‌ ಅಪಾಯಕಾರಿ’ ಎಂದು ಆರೋಪಿಸಿದ್ದಾರೆ.

ಚುನಾವಣೆ ವೇಳೆ ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ಬಿಜೆಪಿಗೆ ಫೇಸ್‌ಬುಕ್‌ ನೆರವು ನೀಡಿತ್ತು ಎಂಬ ಮಾಧ್ಯಮ ವರದಿಗಳನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಲ್‌ಜಝೀರಾ ಹಾಗೂ ‘ದಿ ರಿಪೋರ್ಟರ್ಸ್‌ ಕಲೆಕ್ಟಿವ್’ಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಸಹ ಅವರು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು