ಭಾನುವಾರ, ಅಕ್ಟೋಬರ್ 24, 2021
21 °C

ರಾಷ್ಟ್ರ ರಾಜಕಾರಣ ನಿರಾಕರಣೆ ಸಿದ್ದರಾಮಯ್ಯ ಬಗ್ಗೆ ಸೋನಿಯಾ ಗಾಂಧಿ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಇರಿಸಿದ್ದ ಪ್ರಸ್ತಾಪವನ್ನು ಸಿದ್ದರಾಮಯ್ಯ ಅವರು ತಿರಸ್ಕರಿಸಿರುವುದು  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬೇಸರ ತರಿಸಿದೆ. ಸಿದ್ದರಾಮಯ್ಯ ಅವರಿಂದ ಇಂತಹ ಪ್ರಬಲ ಪ್ರತಿಕ್ರಿಯೆಯನ್ನು ಸೋನಿಯಾ ಗಾಂಧಿ ನಿರೀಕ್ಷಿಸಿರಲಿಲ್ಲ ಮತ್ತು ಅವರ ಹಟಮಾರಿ ಧೋರಣೆಯು ನಾಯಕತ್ವವನ್ನು ಅಚ್ಚರಿಗೊಳಿಸಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. 

ಸೋನಿಯಾ ಗಾಂಧಿ ಅವರು ಎರಡು ಉದ್ದೇಶಗಳನ್ನು ಇಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆತರಲು ಪ್ರಯತ್ನಿಸಿದ್ದರು. ಕರ್ನಾಟಕ ಕಾಂಗ್ರೆಸ್ ಘಟಕದ ಮುಖ್ಯಸ್ಥ ಡಿ.ಕೆ. ಶಿವಕುಮಾರ್ ಅವರೊಂದಿಗಿನ ಮುಸುಕಿನ ಗುದ್ದಾಟ ಕೊನೆಗೊಳಿಸುವುದು ಹಾಗೂ ಪಕ್ಷದ ಹಿರಿಯರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆತಂದು ರಾಜ್ಯ ನಾಯಕತ್ವವನ್ನು ಯುವಕರಿಗೆ ಬಿಟ್ಟುಕೊಡುವ ರಾಹುಲ್ ಗಾಂಧಿ ಅವರ ಯೋಜನೆಯನ್ನು ಸಾಕಾರಗೊಳಿಸುವ ಉದ್ದೇಶ ಅವರದ್ದಾಗಿತ್ತು. 

ಸಿದ್ದರಾಮಯ್ಯ ಅವರಿಗೆ ಒಂದು ಪ್ರಮುಖ ರಾಜ್ಯದ ಉಸ್ತುವಾರಿಯೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಕೇಳಿಕೊಳ್ಳಲಾಗಿತ್ತು. ಪಕ್ಷದ ಕಾರ್ಯಾಧ್ಯಕ್ಷರಲ್ಲಿ ಒಬ್ಬರನ್ನಾಗಿ ನೇಮಿಸುವ ಪ್ರಸ್ತಾಪವನ್ನೂ ಇರಿಸಿದ್ದರು.  

ಪಕ್ಷದ ಪುನರುಜ್ಜೀವನ ಯೋಜನೆಯ ಪ್ರಕಾರ, ದೇಶದ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುವ ಮೂರ್ನಾಲ್ಕು ಕಾರ್ಯಾಧ್ಯಕ್ಷರೊಂದಿಗೆ ರಾಹುಲ್ ಗಾಂಧಿ ಅವರನ್ನು ಮತ್ತೆ ರಾಷ್ಟ್ರೀಯ ಅಧ್ಯಕ್ಷರಾಗಿ ನಿಯೋಜಿಸುವ ಉದ್ದೇಶವಿತ್ತು. 

ಮತ್ತೆ ಮುಖ್ಯಮಂತ್ರಿ ಹುದ್ದೆಯ ಮಹತ್ವಾಕಾಂಕ್ಷೆ ಹೊಂದಿರುವ ಸಿದ್ದರಾಮಯ್ಯ ಅವರು, ಪ್ರಸ್ತುತ ರಾಷ್ಟ್ರೀಯ ಮಟ್ಟದಲ್ಲಿ ದುರ್ಬಲವಾಗಿರುವ ಪಕ್ಷದ ಕೆಲಸವನ್ನು ಕೈಗೆತ್ತಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು