‘ದೇಶದ್ರೋಹ’ ಸೆಕ್ಷನ್ ಪ್ರಶ್ನಿಸಿದ್ದ ಅರ್ಜಿ: ಪ್ರತಿಕ್ರಿಯೆಗೆ ಸುಪ್ರೀಂ ಕಾಲಾವಕಾಶ

ನವದೆಹಲಿ: ‘ದೇಶದ್ರೋಹ’ಕ್ಕೆ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರಕ್ಕೆ ಎರಡು ವಾರಗಳ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್ ನೀಡಿದೆ.
ಪತ್ರಕರ್ತ ಕಿಶೋರ್‌ಚಂದ್ರ ವಾಂಗ್ಕೆಂಚಾ ಮತ್ತು ವ್ಯಂಗ್ಯಚಿತ್ರಕಾರರೊಬ್ಬರು ಈ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಉತ್ತರಿಸಲು ಹೆಚ್ಚಿನ ಸಮಯಾವಕಾಶ ನೀಡಬೇಕು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್‌ಅನ್ನು ಕೋರಿದ್ದರು. ಅದರಂತೆ ನ್ಯಾಯಮೂರ್ತಿಯರಾದ ಯು.ಯು. ಲಲಿತ್ ಮತ್ತು ಅಜಯ್ ರಸ್ತೋಗಿ ನೇತೃತ್ವದ ಪೀಠ ಈ ಅರ್ಜಿ ವಿಚಾರಣೆಯನ್ನು ಇದೇ 27ಕ್ಕೆ ನಿಗದಿಪಡಿಸಿದೆ.
ಏ.30ರಂದೇ ಈ ಅರ್ಜಿಗೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಕೋರ್ಟ್ ನೋಟಿಸ್ ನೀಡಿತ್ತು.
ಈ ಸೆಕ್ಷನ್‌ನ ಸಾಂವಿಧಾನಿಕ ಸಿಂಧುತ್ವವನ್ನು ಕೇದಾರನಾಥ ಪ್ರಕರಣದಲ್ಲಿ (1962) ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಮರುಪರಿಶೀಲಿಸಬೇಕು ಎಂದು ಕೋರಲಾಗಿದೆ.
ಮಣಿಪುರ ಮೂಲದ ಪತ್ರಕರ್ತ ವಾಂಗ್ಕೆಂಚ ವಿರುದ್ಧ 2018ರಲ್ಲಿ ಹಲವಾರು ಮೊಕದ್ದಮೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. 210 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದರಿಂದ ಅವರು ಉದ್ಯೋಗ ಕಳೆದುಕೊಂಡಿದ್ದರು. ಚಂಡೀಗಡದ ವ್ಯಂಗ್ಯಚಿತ್ರಕಾರ ಕನ್ಹಯ್ಯ ಲಾಲ್ ಶುಕ್ಲ ಅವರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.