ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ಆತ್ಮಹತ್ಯೆ ಹೊರತುಪಡಿಸಿ ಕೋವಿಡ್ ಮರಣಪತ್ರ: ಮಾರ್ಗಸೂಚಿ ಮರು ಪರಿಶೀಲನೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌-19 ನಿಂದಾಗಿ ಸಾವಿಗೀಡಾದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ನೀಡಲಾಗುವ ಮರಣಪತ್ರಗಳಲ್ಲಿ ಆತ್ಮಹತ್ಯೆಯಿಂದಾದ ಸಾವನ್ನು ಸೇರಿಸದಿರುವ ಕುರಿತ ತನ್ನ ಮಾರ್ಗಸೂಚಿಯನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೋಮವಾರ ಸಲಹೆ ನೀಡಿದೆ.

ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಎ.ಎಸ್. ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠವು, ‘ಕೋವಿಡ್‌ ಸೋಂಕಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ಅಂಥವರಿಗೆ ಕೋವಿಡ್ ಮರಣಪತ್ರಗಳನ್ನು ನೀಡಲಾಗದು ಎಂದು ನೀವು ನಿರ್ದಿಷ್ಟವಾಗಿ ಹೇಳಿದ್ದೀರಿ. ಆದರೆ, ಇದನ್ನು ಮರುಪರಿಶೀಲಿಸುವ ಅಗತ್ಯವಿದೆ’ ಎಂದು ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ ಅವರು, ‘ಸಾವಿನ ಕಾರಣ ಆತ್ಮಹತ್ಯೆ ಎಂದಾಗಿರುತ್ತದೆಯೇ ಹೊರತು ಕೋವಿಡ್–19 ಅಲ್ಲ’ ಎಂದು ಹೇಳಿದರು.

‘ಈ ಬಗ್ಗೆ ಕೇಂದ್ರ ಸರ್ಕಾರವು ಸಲ್ಲಿಸಿರುವ ಅಫಿಡವಿಟ್‌ ಮೇಲ್ನೋಟಕ್ಕೆ ಸರಿ ಎನಿಸುತ್ತದೆ. ಆದರೆ, ಕೊರೊನಾ ಪೀಡಿತರಾಗಿ ಅದರಿಂದಲೇ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಏನೂ ಹೇಳಿಲ್ಲ. ಕೇಂದ್ರದ ಈ ನಿಯಮವನ್ನು ರಾಜ್ಯಗಳು ಹೇಗೆ ಪಾಲಿಸುತ್ತಿವೆ’ ಎಂದೂ ನ್ಯಾಯಪೀಠವು ಪ್ರಶ್ನಿಸಿತು. 

ಕೋವಿಡ್‌ನಿಂದಾಗಿ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಆತ್ಮಹತ್ಯೆ ಎನ್ನುವ ಕಾರಣಕ್ಕಾಗಿ ಅವರಿಗೆ ಪರಿಹಾರ ನೀಡದಿರುವುದು ಅಸಮಂಜಸ ಮತ್ತು ತಾರತಮ್ಯ ಧೋರಣೆಯಾಗಿದೆ’ ಎಂದು ಪ್ರಶ್ನಿಸಿ ವಕೀಲರಾದ ರೀಪಕ್ ಕನ್ಸಲ್ ಮತ್ತು ಗೌರವ್ ಕುಮಾರ್ ಬನ್ಸಲ್ ಎಂಬುವರು ಅರ್ಜಿ ಸಲ್ಲಿಸಿದ್ದರು.

ಈ ಕುರಿತು ನಿಮ್ಹಾನ್ಸ್‌ನ ಸಂಶೋಧನಾ ಪ್ರಬಂಧ ಹಾಗೂ ಕೇಂದ್ರದ ರಾಷ್ಟ್ರೀಯ ಮಾನಸಿಕ ಆರೋಗ್ಯ ನೀತಿಯನ್ನು ಉಲ್ಲೇಖಿಸಿರುವ ವಕೀಲರು, ‘ಕೋವಿಡ್ ಇರುವ ವ್ಯಕ್ತಿಯ ಆತ್ಮಹತ್ಯೆಯನ್ನು ಕೋವಿಡ್‌–19ನಿಂದಾದ ಆತ್ಮಹತ್ಯೆ ಎಂದು ನಿಮ್ಹಾನ್ ಉಲ್ಲೇಖಿಸಿದೆ. ಹಾಗಾಗಿ, ಕೋವಿಡ್–19 ಮರಣಪತ್ರ ನೀಡುವಾಗ ಆತ್ಮಹತ್ಯೆಯಿಂದಾದ ಸಾವು ಎಂದು ಉಲ್ಲೇಖಿಸುವುದು ತರ್ಕಹೀನ. ಇದನ್ನು ಮರುಪರಿಶೀಲಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಜಂಟಿಯಾಗಿ ಹೊರಡಿಸಿರುವ  ಮಾರ್ಗಸೂಚಿಗಳ ಪ್ರಕಾರ, ವಿಷಸೇವನೆ, ಆತ್ಮಹತ್ಯೆ, ನರಹತ್ಯೆ ಅಥವಾ ಅಪಘಾತದಿಂದಾಗಿ ಜೀವಹಾನಿಯನ್ನು ಕೋವಿಡ್-19 ಸಾವು ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು