ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾಗೆ ತಮಿಳುನಾಡು ಬಾಲಕಿಯ ನೆರವು; ಉಳಿತಾಯದ ಹುಂಡಿಯ ₹4,400 ದೇಣಿಗೆ

ಅಕ್ಷರ ಗಾತ್ರ

ನವದೆಹಲಿ: ಏರಿದ ವಸ್ತುಗಳ ಬೆಲೆ, ಆರ್ಥಿಕ ಬಿಕ್ಕಟ್ಟು, ಅಧ್ಯಕ್ಷರ ವಿರುದ್ಧ ಪ್ರತಿಭಟನೆ, ಬೀದಿಗಿಳಿದಿರುವ ಜನ,...ಈ ನಡುವೆ ಮತ್ತೆ ತುರ್ತು ಪರಿಸ್ಥಿತಿ! ನಿತ್ಯದ ಬದುಕು ಅಯೋಮಯವಾಗಿರುವ ಶ್ರೀಲಂಕಾದ ಜನರಿಗೆ ತಮಿಳುನಾಡಿನ ಪುಟಾಣಿಯೊಬ್ಬಳು ಸಹಾಯಹಸ್ತ ಚಾಚಿದ್ದಾಳೆ. ಹುಂಡಿಯಲ್ಲಿ ಕೂಡಿಟ್ಟಿದ್ದ ಅಷ್ಟೂ ಹಣವನ್ನು ಲಂಕಾ ಜನರಿಗೆ ನೀಡಿದ್ದಾಳೆ.

ರಾಮನಾಥಪುರಂನ ಹುಡುಗಿ ತಾನು ಈವರೆಗೂ ಉಳಿಸಿದ್ದ ₹4,400 ಹಣವನ್ನು ಜಿಲ್ಲಾಧಿಕಾರಿ ಶಂಕರ್‌ ಲಾಲ್‌ ಕುಮಾವತ್‌ ಅವರಿಗೆ ಕೊಟ್ಟು, ಸಂಕಷ್ಟದಲ್ಲಿರುವ ಶ್ರೀಲಂಕಾದ ಜನರಿಗೆ ತಲುಪಿಸುವಂತೆ ಕೋರಿದ್ದಾಳೆ. ಈ ಕುರಿತು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಹುಡುಗಿಯ ಕಾರ್ಯಕ್ಕೆ ಕೊಲಂಬೊದಲ್ಲಿರುವ ಭಾರತದ ಹೈ ಕಮಿಷನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದು, 'ಭಾರತ ಮತ್ತು ಶ್ರೀಲಂಕಾ ಜನರ ನಡುವಿನ ಬಾಂಧವ್ಯದ ದೃಢತೆಯ ಅನಾವರಣ...' ಎಂದು ಟ್ವೀಟಿಸಿದೆ.

ಡಿಎಂಕೆ ಪಕ್ಷದಿಂದ ಶ್ರೀಲಂಕಾಗೆ ಒಂದು ಕೋಟಿ ರೂಪಾಯಿ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಇತ್ತೀಚೆಗೆ ಘೋಷಿಸಿದ್ದರು.

ಡಿಎಂಕೆಯ ಸಂಸದರು ಒಂದು ತಿಂಗಳ ವೇತನವನ್ನು ತಮಿಳುನಾಡು ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ಲಂಕಾದ ಜನರಿಗೆ ಆಹಾರ ಮತ್ತು ಔಷಧಗಳಂತಹ ಅಗತ್ಯ ವಸ್ತುಗಳ ಖರೀದಿಗೆ ಅನುವಾಗುವ ನಿಟ್ಟಿನಲ್ಲಿ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಸ್ಟಾಲಿನ್‌ ಸಾರ್ವಜನಿಕರನ್ನು ಕೋರಿದ್ದರು.

ತೀವ್ರ ಇಂಧನ ಕೊರತೆ ಎದುರಿಸುತ್ತಿರುವ ಶ್ರೀಲಂಕಾಗೆ ಭಾರತದಿಂದ 40,000 ಮೆಟ್ರಿಕ್‌ ಟನ್‌ ಪೆಟ್ರೋಲ್‌ ಪೂರೈಕೆ ಮಾಡಲಾಗಿದೆ.

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಶುಕ್ರವಾರ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಐದು ವಾರಗಳಲ್ಲಿ ಎರಡನೇ ಬಾರಿಗೆ ಕಠಿಣ ಕಾನೂನನ್ನು ಜಾರಿಗೊಳಿಸಲಾಗಿದೆ. ಏಪ್ರಿಲ್ 1 ರಂದು ಮೊದಲ ಬಾರಿಗೆ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಬಳಿಕ, ಏಪ್ರಿಲ್ 14ರಂದು ರದ್ದುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT