ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ವಿಧಾನಸಭಾ ಚುನಾವಣೆ - ಸೀಟು ಹಂಚಿಕೆ: ಡಿಎಂಕೆಗೆ ತಲೆನೋವು

ಸ್ವಂತ ಬಲದಲ್ಲೇ ಅಧಿಕಾರಕ್ಕೆ ಏರಲು ಸ್ಟಾಲಿನ್ ನೇತೃತ್ವದ ಪಕ್ಷದ ಹಂಬಲ l ಮಿತ್ರಪಕ್ಷಗಳ ಮನವೊಲಿಕೆಗೆ ಯತ್ನ
Last Updated 3 ಮಾರ್ಚ್ 2021, 20:22 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಕಾವೇರುತ್ತಿದ್ದು, ಡಿಎಂಕೆ ಮೈತ್ರಿಕೂಟದಲ್ಲಿ ಸೀಟು ಹೊಂದಾಣಿಕೆ ಬಿಕ್ಕಟ್ಟು ತಲೆದೋರಿದೆ.

ಸೀಟು ಹೊಂದಾಣಿಕೆ ಕುರಿತಂತೆ ಡಿಎಂಕೆ ಜೊತೆ ಮಿತ್ರಪಕ್ಷಗಳು ಮುನಿಸಿಕೊಂಡಿವೆ. 10 ವರ್ಷಗಳಿಂದ ಅಧಿಕಾರ ಕಾಣದ ಡಿಎಂಕೆ, ಈ ಬಾರಿ 180ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎಐಎಡಿಎಂಕೆ ಮೈತ್ರಿಕೂಟಕ್ಕೆ ಬಲವಾದ ಪೆಟ್ಟುಕೊಟ್ಟು, ಸ್ವಂತ ಬಲದಲ್ಲಿಯೇ ಸರ್ಕಾರ ರಚಿಸುವ ಇರಾದೆ ಹೊಂದಿದೆ.

ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ತೆಗೆದುಕೊಂಡಿದ್ದ ನಿಲುವಿಗೆ ಇದು ವಿರುದ್ಧವಾಗಿದೆ. 39 ಕ್ಷೇತ್ರಗಳ ಪೈಕಿ 20 ಸೀಟುಗಳನ್ನು ಡಿಎಂಕೆ ಮಿತ್ರಪಕ್ಷಗಳಿಗೆ ಹಂಚಿಕೆ ಮಾಡಿತ್ತು.

‘ನಾವು 2021ರ ಚುನಾವಣೆಯನ್ನು ವಿಭಿನ್ನ ಆಟ ಎಂದು ಮಿತ್ರ ಪಕ್ಷಗಳಿಗೆ ತಿಳಿಸಿದ್ದೇವೆ. ಎಐಎಡಿಎಂಕೆ ಮಾತ್ರವಲ್ಲ ನಾವು ಬಿಜೆಪಿಯ ವಿರುದ್ಧವೂ ಹೋರಾಡುತ್ತಿದ್ದೇವೆ. ಆದ್ದರಿಂದ, ನಾವು ಗರಿಷ್ಠ ಕ್ಷೇತ್ರಗಳಲ್ಲಿ ಮತ್ತು ಮಿತ್ರಪಕ್ಷಗಳು ಕಡಿಮೆ ಸಂಖ್ಯೆಯಲ್ಲಿ ಸ್ಪರ್ಧಿಸಿದರೆ ಮೈತ್ರಿಕೂಟಕ್ಕೆ ಒಳಿತಾಗುತ್ತದೆ ಎಂದು ನಾವು ಅವರಿಗೆ ತಿಳಿಸಿದ್ದೇವೆ’ ಎಂದು ಡಿಎಂಕೆ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಡಿಎಂಕೆ ಮೇಲೆ ಕಾಂಗ್ರೆಸ್ ಮುನಿಸು

ಬೇಡಿಕೆ ಇಟ್ಟಿದ್ದ ಸ್ಥಾನಗಳು ಹಾಗೂ ಕೊಡಲು ಪ್ರಸ್ತಾವಿಸಿರುವ ಸ್ಥಾನಗಳ ನಡುವೆ ಸಾಕಷ್ಟು ಅಂತರ ಇದೆ ಎಂದು ಕಾಂಗ್ರೆಸ್ ವಾದಿಸಿದೆ.

‘ಮೈತ್ರಿ ಎಂಬುದು ಕೇವಲ ಸ್ಥಾನಗಳನ್ನು ಆಧರಿಸಿಲ್ಲ. ಬದಲಾಗಿ, ಬಿಜೆಪಿ–ಎಐಎಡಿಎಂಕೆ ಮೈತ್ರಿಕೂಟವನ್ನು ಒಗ್ಗಟ್ಟಿನಿಂದ ಸೋಲಿಸುವ ಸಾಮಾನ್ಯ ಗುರಿಯನ್ನು ಆಧರಿಸಿದೆ’ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.

ಸೀಟು ಹಂಚಿಕೆ ಬಗ್ಗೆ ಪಕ್ಷದ ನಿಲುವನ್ನು ಈಗಾಗಲೇ ಡಿಎಂಕೆಗೆ ತಿಳಿಸಲಾಗಿದೆ ಎಂದು ತಮಿಳುನಾಡು ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಎಸ್. ಅಳಗಿರಿ ಹೇಳಿದ್ದಾರೆ.

ಎರಡೂ ಪಕ್ಷಗಳು ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಮಂಗಳವಾರ ನಡೆದ ಎರಡನೇ ಹಂತದ ಸೀಟುಹಂಚಿಕೆ ಸಭೆ ಅನಿಶ್ಚಿತೆಯಲ್ಲಿ ಮುಕ್ತಾಯವಾಯಿತು. ಮೂಲಗಳ ಪ್ರಕಾರ ಕಾಂಗ್ರೆಸ್‌ಗೆ 24 ಸ್ಥಾನಗಳನ್ನು ನೀಡಲು ಡಿಎಂಕೆ ಚಿಂತನೆ ನಡೆಸಿದೆ. ಡಿಎಂಕೆ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್, ಗೌರವಾರ್ಹ ಸೀಟುಗಳು ಬೇಕು ಎಂದು ದನಿ ಎತ್ತಿದೆ. ಗುರುವಾರ ಮೂರನೇ ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದೆ.

‘ಮೊದಲ ಸುತ್ತಿನ ಮಾತುಕತೆಯಲ್ಲಿ ಡಿಎಂಕೆ ಕೇವಲ 18 ಸೀಟುಗಳನ್ನು ನೀಡಲು ಮುಂದಾಗಿತ್ತು. ಇದು ಅವಮಾನ. 40 ಸೀಟುಗಳಿಗಿಂತ ಕಡಿಮೆ ಒಪ್ಪಬಾರದು ಎಂಬ ಅಭಿಪ್ರಾಯ ಪಕ್ಷದೊಳಗೆ ಇದೆ. ಆದರೂ 35 ಸೀಟುಗಳನ್ನು ಒಪ್ಪಿಕೊಳ್ಳುತ್ತೇವೆ. ಅದಕ್ಕಿಂತ ಕಡಿಮೆ ನೀಡಿದರೆ ಒಪ್ಪಲು ಕಷ್ಟವಾಗುತ್ತದೆ. ಡಿಎಂಕೆಯು ನಮ್ಮ ಭಾವನೆಗಳನ್ನು ಗೌರವಿಸಬೇಕು’ ಎಂದು ಅಳಗಿರಿ ಹೇಳಿದ್ದಾರೆ

ಪುದುಚೇರಿ: ಎನ್‌ಡಿಎ ಮೈತ್ರಿಯಲ್ಲಿ ಒಡಕು

ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟವು ಚುನಾವಣೆಯನ್ನು ಬಿಜೆಪಿ ನೇತೃತ್ವದಲ್ಲಿ ಎದುರಿಸಲಿದೆ ಎಂದು ಬಿಜೆಪಿ ಘೋಷಿಸಿರುವುದಕ್ಕೆ ಮಿತ್ರಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಪ್ರಮುಖ ವಿರೋಧ ಪಕ್ಷವಾಗಿದ್ದ ಎನ್‌.ಆರ್‌.ಕಾಂಗ್ರೆಸ್ ಈ ಸಂಬಂಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಚುನಾವಣೆಯನ್ನು ಬಿಜೆಪಿ ನೇತೃತ್ವದಲ್ಲೇ ಎದುರಿಸಲಾಗುತ್ತದೆ ಎಂದು ಬಿಜೆಪಿ ಏಕಪಕ್ಷೀಯವಾಗಿ ಘೋಷಿಸಿದೆ. ಪ್ರಬಲ ವಿರೋಧಪಕ್ಷವಾಗಿದ್ದ ನಮ್ಮನ್ನು ಕಡೆಗಣಿಸಲಾಗಿದೆ. ಈ ಸಂಬಂಧ ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜತೆ ಮಾತುಕತೆ ನಡೆಸುತ್ತಿದ್ದೇವೆ. ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸಬೇಕೇ ಅಥವಾ ಮೈತ್ರಿಯಲ್ಲಿ ಮುಂದುವರಿಯಬೇಕೇ ಎಂಬುದರ ಬಗ್ಗೆ ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಎನ್‌.ಆರ್‌.ಕಾಂಗ್ರೆಸ್‌ನ ಸಂಸ್ಥಾಪಕ ಅಧ್ಯಕ್ಷ ಎನ್‌.ರಂಗಸ್ವಾಮಿ ಅವರು ಹೇಳಿದ್ದಾರೆ.

11ಕ್ಕೆ ಡಿಎಂಕೆ ಪ್ರಣಾಳಿಕೆ ಬಿಡುಗಡೆ

ಏಪ್ರಿಲ್ 6ರಂದು ನಿಗದಿಯಾಗಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಡಿಎಂಕೆ ಬಿರುಸಿನ ಸಿದ್ಧತೆ ನಡೆಸುತ್ತಿದ್ದು, ಇದೇ 11ರಂದು ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ಮಾರ್ಚ್ 7ರಂದು ತಿರುಚಿನಾಪಳ್ಳಿಯಲ್ಲಿ ನಡೆಯಲಿರುವ ಬೃಹತ್ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಮುಂದಿನ 10 ವರ್ಷಗಳ ಮುನ್ನೋಟ ಹೊಂದಿರುವ ‘ವಿಷನ್ ಡಾಕ್ಯುಮೆಂಟ್’ ಬಿಡುಗಡೆ ಮಾಡಲಿದ್ದಾರೆ. ಪ್ರಣಾಳಿಕೆಯನ್ನು ಪಕ್ಷದ ಹೀರೋ ಎಂದು ಸ್ಟಾಲಿನ್ ಕರೆದಿದ್ದಾರೆ. ಉದ್ಯೋಗ ಸೃಷ್ಟಿಗೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ನುಡಿ-ಕಿಡಿ

ಬಂಗಾಳದ ಪುತ್ರ ಶ್ಯಾಂ ಪ್ರಸಾದ್ ಮುಖರ್ಜಿ ಅವರು ಜನಸಂಘವನ್ನು ಸ್ಥಾಪಿಸಿದ್ದರು. ಜನಸಂಘದ ಸಿದ್ಧಾಂತಗಳ ಆಧಾರದಲ್ಲೇ ಬಿಜೆಪಿಯನ್ನು ಸ್ಥಾಪಿಸಲಾಗಿತ್ತು. ಆದರೆ, ಮಮತಾ ಬ್ಯಾನರ್ಜಿ ಅವರು ಬಿಜೆಪಿಯನ್ನು ಹೊರಗಿನವರು ಎಂದು ಅವಹೇಳನ ಮಾಡುತ್ತಾರೆ

- ನಿತಿನ್ ಗಡ್ಕರಿ, ಕೇಂದ್ರ ಸಚಿವ

***

ಟಿಎಂಸಿ ಆಡಳಿತದಲ್ಲಿ ಪಶ್ಚಿಮ ಬಂಗಾಳದ ಅಭಿವೃದ್ಧಿಯು ಅಧೋಗತಿಗೆ ಇಳಿದಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಜ್ಯವನ್ನು ಮತ್ತೆ ಅಭಿವೃದ್ಧಿಯ ಪಥಕ್ಕೆ ತರುತ್ತೇವೆ

- ಪಶ್ಚಿಮ ಬಂಗಾಳ ಬಿಜೆಪಿ ಘಟಕ

***

ಪ್ರಧಾನಿ ನರೇಂದ್ರ ಮೋದಿ ಅವರು 20 ಅಥವಾ ಅದಕ್ಕಿಂತಲೂ ಹೆಚ್ಚಿನ ಬಾರಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿ, ಪ್ರಚಾರ ನಡೆಸಲಿ. ರಾಜ್ಯವು ಎಷ್ಟು ಅಭಿವೃದ್ಧಿಯಾಗಿದೆ ಎಂಬುದು ಅವರಿಗೆ ಮನವರಿಕೆಯಾಗುತ್ತದೆ

- ಬ್ರತ್ಯ ಬಸು, ಟಿಎಂಸಿ ವಕ್ತಾರ

***

ಚುನಾವಣೆ ಹತ್ತಿರವಾಗುತ್ತಿರು ವಂತೆಯೇ ಕೇಂದ್ರ ಸರ್ಕಾರವು ಕೇರಳ ಸರ್ಕಾರದ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯವನ್ನು (ಇ.ಡಿ) ಛೂಬಿಟ್ಟಿದೆ. ಇ.ಡಿ ದಾಳಿಯು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ

- ಥಾಮಸ್ ಐಸೆಕ್, ಕೇರಳದ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT