ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್ ಮನೆ ಎದುರು ಬಿಜೆಪಿ ದಾಂದಲೆ: ಇದು ಕೇಜ್ರಿವಾಲ್ ಹತ್ಯೆ ಯತ್ನ ಎಂದ ಎಎಪಿ

ಸಂಸದ ತೇಜಸ್ವಿ ಸೂರ್ಯ ನೇತೃತ್ವದ ಪ್ರತಿಭಟನೆ ವೇಳೆ ಗದ್ದಲ l ಬ್ಯಾರಿಯರ್, ಸಿ.ಸಿ.ಟಿ.ವಿ. ಕ್ಯಾಮೆರಾಗಳ ಧ್ವಂಸ
Last Updated 30 ಮಾರ್ಚ್ 2022, 17:00 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಸಂಸದ ಮತ್ತು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮನೆಮುಂದೆ ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ಬ್ಯಾರಿಯರ್ ಮತ್ತು ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಧ್ವಂಸ ಮಾಡಿದ್ದಾರೆ. ಜತೆಗೆ ಮುಖ್ಯಮಂತ್ರಿಗಳ ಮನೆಯ ಕಬ್ಬಿಣದ ಗೇಟಿಗೆ ಕೇಸರಿ ಬಣ್ಣ ಬಳಿದಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್‌’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದಕ್ಕಿಂತ, ಅದನ್ನು ಯುಟ್ಯೂಬ್‌ಗೆ ಹಾಕಿಬಿಟ್ಟರೆ ಎಲ್ಲಾ ಜನ ಉಚಿತವಾಗಿ ನೋಡುತ್ತಾರೆ’ ಎಂದು ಕೇಜ್ರಿವಾಲ್ ಹಿಂದಿನ ವಾರ ಹೇಳಿಕೆ ನೀಡಿ ದ್ದರು. ಈ ಹೇಳಿಕೆಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬಿಜೆಪಿಯ ಹಲವು ಕಾರ್ಯಕರ್ತರು ಪೊಲೀಸ್ ಭದ್ರತೆ ಯನ್ನು ಬೇಧಿಸಿ, ದಾಂದಲೆ ನಡೆಸಿದ್ದಾರೆ.

ಕೇಸರಿ ಮಾಸ್ಕ್‌ಗಳಿಂದ ಮುಖ ಮುಚ್ಚಿಕೊಂಡ ಹಲವು ಕಾರ್ಯಕರ್ತರು ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ಹೊರಗೆ ಜಮಾಯಿಸುವ ಮತ್ತು ಅಲ್ಲಿದ್ದ ಭದ್ರತಾ ಸಿಬ್ಬಂದಿ ಜತೆಗೆ ವಾಗ್ವಾದ ನಡೆ ಸುವ ದೃಶ್ಯಗಳು ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಹೀಗೆ ಜಮಾಯಿಸಿದ ಕಾರ್ಯಕರ್ತರ ಸಂಖ್ಯೆ ಹೆಚ್ಚಾದ ತಕ್ಷಣ ಅವರೆಲ್ಲಾ ಭದ್ರತಾ ಸಿಬ್ಬಂದಿ ಮೇಲೆ ಮುಗಿಬಿದಿದ್ದಾರೆ. ಅವರನ್ನು ತಳ್ಳಿ, ಕಬ್ಬಿಣದ ಗೇಟನ್ನು ಬೀಳಿಸಲು ಯತ್ನಿಸಿದ್ದಾರೆ. ಅದೇ ವೇಳೆ ಅಲ್ಲಿದ್ದ ಬ್ಯಾರಿಕೇಡ್‌ ಅನ್ನು ಮುರಿದಿದ್ದಾರೆ. ನಂತರ ಸಿ.ಸಿ.ಟಿ.ವಿ. ವಿಡಿಯೊ ಬಂದ್ ಆಗಿದೆ. ಈ ವೇಳೆ ತೇಜಸ್ವಿ ಸೂರ್ಯ ಅವರೂ ಅಲ್ಲಿದ್ದರೆ ಎಂಬುದು ಈ ವಿಡಿಯೊದಲ್ಲಿ ಗೊತ್ತಾಗಿಲ್ಲ.

ಬಿಜೆಪಿ ಕಾರ್ಯಕರ್ತರ ಮತ್ತೊಂದು ಗುಂಪು ಭಾರಿ ಸಂಖ್ಯೆಯಲ್ಲಿ ಕೇಜ್ರಿವಾಲ್‌ ನಿವಾಸದ ಎದುರಿನ ರಸ್ತೆಯಲ್ಲಿ ಜಮಾಯಿಸಿದ್ದಾರೆ. ಅಲ್ಲಿದ್ದ ಪೊಲೀಸರು ಬ್ಯಾರಿಕೇಡ್‌ಗಳಿಂದ ಅವರನ್ನು ತಡೆದಿದ್ದಾರೆ. ಆದರೆ ಹಲವರು ಪೊಲೀಸರನ್ನು ತಳ್ಳಿಕೊಂಡು ಹೋಗಿದ್ದಾರೆ. ಮನೆಯ ಗೇಟಿನ ಮುಂದೆ ಜಮಾಯಿಸಿದ್ದ ಹಲವರು, ಅಲ್ಲಿದ್ದ ಭದ್ರತಾ ಕೊಠಡಿಯ ಗೋಡೆಯ ಮೇಲೆ ಕೇಸರಿ ಬಣ್ಣದ ಹಸ್ತದ ಮುದ್ರೆಯನ್ನು ಹಾಕಿದ್ದಾರೆ.

ಕೇಜ್ರಿವಾಲ್ ಹತ್ಯೆಗೆ ಯತ್ನ: ಎಎಪಿ

‘ಚುನಾವಣೆಗಳಲ್ಲಿ ಎಎಪಿಯನ್ನು ಸೋಲಿಸಲು ಬಿಜೆಪಿಗೆ ಸಾಧ್ಯವಿಲ್ಲ. ಹೀಗಾಗಿ ಬಿಜೆಪಿಯ ಕಾರ್ಯಕರ್ತರು ಅರವಿಂದ ಕೇಜ್ರಿವಾಲ್ ಅವರನ್ನು ಕೊಲ್ಲಲು ಯತ್ನಿಸಿದ್ದಾರೆ’ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.

‘ದೆಹಲಿ ಪೊಲೀಸರ ನೆರವಿನೊಂದಿಗೆ ಬಿಜೆಪಿ ಕಾರ್ಯಕರ್ತರು, ಕೇಜ್ರಿವಾಲ್ ಅವರನ್ನು ಕೊಲ್ಲುವ ಉದ್ದೇಶದಿಂದ ಇಲ್ಲಿಗೆ ನುಗ್ಗಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು, ಪೊಲೀಸರು ರಸ್ತೆಯಲ್ಲೇ ತಡೆಯುವ ಬದಲು ಮನೆಯ ಗೇಟಿನವರೆಗೂ ಕರೆತಂದಿದ್ದಾರೆ. ಇದು ಪೂರ್ವಯೋಜಿತ ಕೊಲೆ ಸಂಚು. ಇದರ ವಿರುದ್ಧ ನಾವು ದೂರು ದಾಖಲಿಸುತ್ತೇವೆ’ ಎಂದು ಹೇಳಿದ್ದಾರೆ.

***

ಎಎಪಿಯ ಆರೋಪ ಕಪೋಲಕಲ್ಪಿತವಾದದ್ದು. ಕೇಜ್ರಿವಾಲ್ ಅವರ ನೀತಿ ಮತ್ತು ಯೋಜನೆಗಳೆಲ್ಲವೂ ಭಯೋತ್ಪಾದಕರನ್ನೇ ಓಲೈಸುತ್ತವೆ
- ತೇಜಸ್ವಿ ಸೂರ್ಯ, ಬಿಜೆಪಿ ಸಂಸದ ಮತ್ತು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ

ಬಿಜೆಪಿ ಹೆದರುವುದು ಎಎಪಿ ಮತ್ತು ಕೇಜ್ರಿವಾಲ್ ಅವರಿಗೆ ಎಂಬುದು ಸಾಬೀತಾಗಿದೆ.ಚುನಾವಣೆಯಲ್ಲಿ ಎದುರಿಸಲಾಗದೆ ಹೇಡಿಗಳಂತೆ ದಾಳಿ ನಡೆಸಿದ್ದಾರೆ</p>

- ಭಗವಂತ್ ಮಾನ್, ಪಂಜಾಬ್ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT