ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣಕ್ಕೆ ಬಂದ ಪಿಎಂ ಮೋದಿ: ದೇವೇಗೌಡರ ಮನೆಯಲ್ಲಿ ಸಿಎಂ ಕೆಸಿಆರ್‌!

Last Updated 26 ಮೇ 2022, 10:26 IST
ಅಕ್ಷರ ಗಾತ್ರ

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್‌ ತಲುಪುವುದಕ್ಕೆ ಕೆಲವೇ ಗಂಟೆಗಳ ಮುನ್ನ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್‌ (ಕೆಸಿಆರ್‌) ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಕಳೆದ ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ಕೆಸಿಆರ್‌ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವುದರಿಂದ ತಪ್ಪಿಸಿದ್ದಾರೆ.

ಬೇಗಂಪೇಟ್‌ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಕೆಸಿಆರ್‌ ಬೆಂಗಳೂರಿಗೆ ತೆರಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಎರಡೂವರೆ ಗಂಟೆಗಳ ಹೈದರಾಬಾದ್‌ ಭೇಟಿಗೆ ಬಂದಿಳಿದರು.

ಇಂಡಿಯನ್‌ ಸ್ಕೂಲ್‌ ಆಫ್‌ ಬಿಸಿನೆಸ್‌ನ (ಐಎಸ್‌ಬಿ) 20ನೇ ವಾರ್ಷಿಕೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾದರು.

ರಾಷ್ಟ್ರ ರಾಜಕೀಯದಲ್ಲಿ ಕೆಸಿಆರ್‌ ಪ್ರಮುಖ ಪಾತ್ರ ವಹಿಸಲು ಎದುರು ನೋಡುತ್ತಿದ್ದು, ಜೆಡಿಎಸ್‌ ಮುಖಂಡ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ.

ಟಿಆರ್‌ಎಸ್‌ ಮುಖಸ್ಥ ಕೆಸಿಆರ್‌ ಜೊತೆಗೆ ಸಂಸದ ಜೆ.ಸಂತೋಷ್‌ ಕುಮಾರ್‌, ನಾಲ್ವರು ಶಾಸಕರು ಹಾಗೂ ಪಕ್ಷದ ಇತರೆ ಮುಖಂಡರು ಬೆಂಗಳೂರಿನಲ್ಲಿದ್ದಾರೆ.

ಫೆಬ್ರುವರಿ 5ರಂದು ಪ್ರಧಾನಿ ಹೈದರಾಬಾದ್‌ಗೆ ಭೇಟಿ ನೀಡಿದ್ದಾಗಲೂ ಕಾರ್ಯಕ್ರಮಗಳಲ್ಲಿ ಕೆಸಿಆರ್‌ ಭಾಗಿಯಾಗಿರಲಿಲ್ಲ. ರಾಮಾನುಜಾಚಾರ್ಯರ ಪ್ರತಿಮೆ ಅನಾವರಣ ಹಾಗೂ ಐಸಿಆರ್‌ಐಎಸ್‌ಎಟಿ (ICRISAT) 50ನೇ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಮೋದಿ ಭಾಗಿಯಾಗಿದ್ದರು. ಕೆಸಿಆರ್‌ ಪ್ರಧಾನಿಗೆ ಅವಮಾನ ಮಾಡಿರುವುದಾಗಿ ಬಿಜಿಪಿ ತೀವ್ರವಾಗಿ ಟೀಕಿಸಿದೆ.

ತೆಲಂಗಾಣಕ್ಕೆ ಪ್ರಧಾನಿ ಮೋದಿ ಅವರ ತಾರತಮ್ಯವನ್ನು ವಿರೋಧಿಸುವ ನಿಟ್ಟಿನಲ್ಲಿ ಕೆಸಿಆರ್‌ ಈ ನಡೆ ಅನುಸರಿಸುತ್ತಿರುವುದಾಗಿ ವಿಶ್ಲೇಷಿಸಲಾಗಿದೆ.

ದೆಹಲಿ ಮತ್ತು ಚಂಡೀಗಡಕ್ಕೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದ ಕೆಸಿಆರ್‌ ಸೋಮವಾರ ಹೈದರಾಬಾದ್‌ಗೆ ಮರಳಿದ್ದರು. ದೇಶದಾದ್ಯಂತ ಹಲವು ರಾಜಕೀಯ ಪಕ್ಷಗಳು ಹಾಗೂ ಮುಖಂಡರನ್ನು ಭೇಟಿ ಮಾಡಿ, ಮುಂದಿನ ಚುನಾವಣೆಗಾಗಿ ಒಗ್ಗೂಡಿಸುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ರಾಷ್ಟ್ರೀಯ ಪಕ್ಷವನ್ನು ಸ್ಥಾಪಿಸುವ ಸೂಚನೆಯನ್ನು ಟಿಆರ್‌ಎಸ್‌ನ 20ನೇ ಸಂಸ್ಥಾಪನಾ ದಿನದ ಆಚರಣೆಯ ಸಂದರ್ಭದಲ್ಲಿ ನೀಡಿದ್ದರು.

ಪ್ರಧಾನಿ ಅವರನ್ನು ಎದುರುಗೊಳ್ಳುವ ಧೈರ್ಯವಿಲ್ಲದೆ ಕೆಸಿಆರ್‌ ಬೇರೆ ರಾಜ್ಯಕ್ಕೆ ತೆರಳಿದ್ದಾರೆ ಎಂದು ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್‌ ಕುಮಾರ್‌ ಆರೋಪಿಸಿದ್ದಾರೆ. ಆರೋಪಗಳನ್ನು ತಳ್ಳಿ ಹಾಕಿರುವ ಟಿಆರ್‌ಎಸ್‌ ಮುಖಂಡರು, ಬೆಂಗಳೂರಿಗೆ ಕೆಸಿಆರ್‌ ಅವರ ಭೇಟಿಯು ಪೂರ್ವನಿಗದಿಯಂತೆ ನಡೆದಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT