ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ನಿಷೇಧ ಆದೇಶದ ಉಲ್ಲಂಘನೆ; ದೆಹಲಿಯಲ್ಲಿ ಕುಸಿದ ಗಾಳಿಯ ಗುಣಮಟ್ಟ

Last Updated 15 ನವೆಂಬರ್ 2020, 6:10 IST
ಅಕ್ಷರ ಗಾತ್ರ

ನವದೆಹಲಿ: ಪಟಾಕಿ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸಿ ಹೊರಡಿಸಲಾದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದ ದೆಹಲಿಯ ಜನ, ಎಗ್ಗಿಲ್ಲದೇ ಪಟಾಕಿ ಹೊಡೆಯುವ ಮೂಲಕವೇ ಶಬ್ಧಾಡಂಬರದ ದೀಪಾವಳಿ ಆಚರಣೆಗೆ ಒತ್ತು ನೀಡಿದ್ದಾರೆ.

ಶನಿವಾರ ಮಧ್ಯರಾತ್ರಿ ಕಳೆದರೂ ಮುಗಿಯದ ಪಟಾಕಿ ಅಬ್ಬರದಿಂದಾಗಿ ರಾಷ್ಟ್ರ ರಾಜಧಾನಿ ವಲಯಯ ಗಾಳಿಯ ಗುಣಮಟ್ಟವು ‘ತೀವ್ರ’ ಸ್ವರೂಪದಲ್ಲಿ ಹದಗೆಟ್ಟಿದ್ದು, ಇಲ್ಲಿನ ಐಟಿಒ ಮತ್ತು ಆನಂದ ವಿಹಾರ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ)ವು ಕ್ರಮವಾಗಿ 461 ಮತ್ತು 478ರಷ್ಟು ದಾಖಲಾಗಿದೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ತಿಳಿಸಿದೆ.

ಭಾನುವಾರ ಮತ್ತು ಸೋಮವಾರ ಪಟಾಕಿ ಸುಡುವ ಪ್ರಕ್ರಿಯೆ ಮುಂದುವರಿದಲ್ಲಿ ಮಾಲಿನ್ಯ ಪ್ರಮಾಣ ಮತ್ತಷ್ಟು ಹೆಚ್ಚಲಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಸಮಿತಿ ಎಚ್ಚರಿಕೆ ನೀಡಿದೆ.

ದೆಹಲಿ, ನೊಯ್ಡಾ, ಗ್ರೇಟರ್‌ ನೊಯ್ಡಾ, ಗುರುಗ್ರಾಂ, ಗಾಜಿಯಾಬಾದ್‌ ಒಳಗೊಂಡಿರುವ ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್)ದಲ್ಲಿ ಇದೇ 30ರವರೆಗೆ ಪಟಾಕಿ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನವೆಂಬರ್‌ 9ರಂದು ಆದೇಶ ಹೊರಡಿಸಿತ್ತು.

ಅದಕ್ಕೂ ಮೊದಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರು ಪಟಾಕಿ ನಿಷೇಧಿಸಿ ಆದೇಶ ಹೊರಡಿಸಿದ್ದಲ್ಲದೆ, ಎಲ್ಲರೂ ಒಂದಾಗಿ ಏಕಕಾಲಕ್ಕೆ ಲಕ್ಷ್ಮೀ ಪೂಜೆ ಮಾಡುವ ಮೂಲಕ ನಿಶ್ಯಬ್ಧ ದೀಪಾವಳಿಗೆ ಆದ್ಯತೆ ನೀಡುವಂತೆ ಕೋರಿದ್ದರು.

ಅಂತೆಯೇ ಶನಿವಾರ ಆಚರಿಸಲಾದ ಛೋಟಿ (ಚಿಕ್ಕ) ದೀಪಾವಳಿಯಂದು ಇಲ್ಲಿನ ಮಯೂರ್‌ ವಿಹಾರದ ಬಳಿ ಇರುವ ಅಕ್ಷರಧಾಮ ಮಂದಿರದಲ್ಲಿ ಅವರು ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಲಕ್ಷ್ಮೀ ಪೂಜೆ ನೆರವೇರಿಸಿದ್ದರು.

ತಮ್ಮ ತಮ್ಮ ಮನೆಗಳಲ್ಲೇ ಇದ್ದುಕೊಂಡು ಮುಖ್ಯಮಂತ್ರಿ ಜೊತೆ ಸಾಮೂಹಿಕ ಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಿದ್ದ ಜನತೆ, ನಂತರ ಪಟಾಕಿಯನ್ನೂ ಸುಡುವ ಮೂಲಕ ಶಬ್ಧ ಸಂಭ್ರಮದತ್ತಲೇ ಒಲವು ತೋರಿರುವುದು ಕಂಡುಬಂತು.

ಆದರೆ, ಸರ್ಕಾರ ಹಾಗೂ ನ್ಯಾಯ ಮಂಡಳಿಯ ಆದೇಶ ಉಲ್ಲಂಘನೆಯ ಮೇಲೆ ನಿಗಾ ಇರಿಸಿ ಕ್ರಮ ಕೈಗೊಳ್ಳಬೇಕಿರುವ ಸಂಬಂಧಿಸಿದ ಅಧಿಕಾರಿಗಳು, ಪೊಲೀಸ್‌ ಸಿಬ್ಬಂದಿಯ ಸುಳಿವೇ ಇಲ್ಲದಿರುವುದು ಪರಿಸರ ಪ್ರೇಮಿಗಳ ಚಿಂತೆಯನ್ನು ಹೆಚ್ಚಿಸಿದೆ.

ಅಸ್ತಮಾ, ಉಸಿರಾಟದ ತೊಂದರೆಯಂತಹ ಆರೋಗ್ಯ ಸಂಬಂಧಿ ಸಮಸ್ಯೆ ಎದುರಿಸುತ್ತಿರುವವರಿಗೆ ಹಾಗೂ ಕೊರೊನಾ ಸೋಂಕಿತರಿಗೆ ಪಟಾಕಿಯು ಸಾಕಷ್ಟು ಸಮಸ್ಯೆ ತಂದೊಡ್ಡಿದೆ.

ಶನಿವಾರ ಮಧ್ಯರಾತ್ರಿ ಕಳೆದರೂ ಪಟಾಕಿಯ ಸದ್ದು ಕೇಳುತ್ತಲೇ ಇತ್ತಲ್ಲದೆ, ವಾಯು ಮಾಲಿನ್ಯ ಹೆಚ್ಚುವುದಕ್ಕೂ ಕಾರಣವಾಗಿದೆ. ಭಾನುವಾರ ಬೆಳಿಗ್ಗೆಯಿಂದಲೇ ದೆಹಲಿಯ ಆಗಸಕ್ಕೆ ದಪ್ಪ ಹೊದಿಕೆಯನ್ನು ಹೊಚ್ಚಿದಂತೆ ಭಾಸವಾಗುತ್ತಿದ್ದು, ಹೊಂಜು ಅನೇಕ ಕಡೆ ಆವರಿಸಿ, ಕಣ್ಣಳತೆಯ ದೂರವೂ ಗೋಚರವಾಗದಂತೆ ತಡೆದಿದೆ.

ಛೋಟಿ ದೀಪಾವಳಿಯಂದು ನಗರದಲ್ಲಿ ಕಂಡುಬಂದ ಪಟಾಕಿಗಳ ಆರ್ಭಟವು ಭಾನುವಾರ ಮತ್ತು ಸೋಮವಾರ ಆಚರಿಸಲಾಗುವ ಪೂರ್ಣ ಪ್ರಮಾಣದ ಹಬ್ಬದ ವೇಳೆ ಮತ್ತಷ್ಟು ಹೆಚ್ಚುವ ಸಾಧ್ಯತೆಯೂ ಇರುವುದರಿಂದ ವಾಯುಮಾಲಿನ್ಯದ ಪ್ರಮಾಣ ದುಪ್ಪಟ್ಟಾಗುವುದರಲ್ಲಿ ಸಂಶಯವೇ ಇಲ್ಲ.

ಎಕ್ಯೂಐ ಪ್ರಮಾಣವು ಇಲ್ಲಿನ ಪೂಸಾ ಪ್ರದೇಶದಲ್ಲಿ 460, ಪಡ್‌ಪಡ್‌ಗಂಜ್‌ನಲ್ಲಿ 475, ಲೋಧಿ ರಸ್ತೆಯಲ್ಲಿ 450, ಅಶೋಕ್ ವಿಹಾರದಲ್ಲಿ 491, ಜಹಾಂಗೀರ್‌ ಪುರಿಯಲ್ಲಿ 500 ಮತ್ತು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 442 ರಷ್ಟು ದಾಖಲಾಗಿದ್ದು, ಅಪಾಯಕಾರಿ ಹಂತ ತಲುಪಿದೆ.

ಎನ್‌ಸಿಆರ್‌ ಸುತ್ತಲಿನ ಪ್ರದೇಶದಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ರೈತರು ಕೃಷಿ ತ್ಯಾಜ್ಯಕ್ಕೆ ಬೆಂಕಿ ಇಡುವುದರ ಮೇಲೆ ನಿಯಂತ್ರಣ ಹೇರಲಾಗಿದೆ. ಆದರೂ, ಪಟಾಕಿ ಆರ್ಭಟದಿಂದಾಗಿ ಗಾಳಿಯ ಗುಣಮಟ್ಟ ಹದಗೆಟ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT