ಗುರುವಾರ , ಮಾರ್ಚ್ 4, 2021
26 °C

ಆಕ್ಸ್‌ಫರ್ಡ್‌ ಲಸಿಕೆಗೆ ಮುಂದಿನ ವಾರವೇ ಅನುಮತಿ ಸಾಧ್ಯತೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್‌ ಯುನಿವರ್ಸಿಟಿಯು ಕೋವಿಡ್‌–19 ತಡೆಗಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯ ತುರ್ತು ಬಳಕೆಗೆ ಭಾರತವು ಮುಂದಿನ ವಾರ ಅನುಮತಿ ನೀಡುವ ಸಾಧ್ಯತೆ ಇದೆ. 

ಭಾರತದ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ) ಕೇಳಿದ್ದ ವಿವಿಧ ದತ್ತಾಂಶಗಳನ್ನು ಔಷಧ ತಯಾರಿಕಾ ಸಂಸ್ಥೆ ಸೆರಂ ಇನ್ಸ್‌ಟಿಟ್ಯೂಟ್‌ ನೀಡಿದೆ. ಹಾಗಾಗಿ ಅನುಮತಿಯು ಶೀಘ್ರವೇ ದೊರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಲಸಿಕೆಯ ಮನುಷ್ಯನ ಮೇಲಿನ ಪ್ರಯೋಗಗಳ ದತ್ತಾಂಶ ವಿಶ್ಲೇಷಣೆಯನ್ನು ಬ್ರಿಟನ್‌ನ ಔಷಧ ನಿಯಂತ್ರಣ ಸಂಸ್ಥೆಯು ನಡೆಸುತ್ತಿದೆ. ಅದು ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ಹಾಗಾಗಿ, ಬ್ರಿಟನ್‌ಗಿಂತ ಮೊದಲೇ ಭಾರತದಲ್ಲಿ ಈ ಲಸಿಕೆಗೆ ಅನುಮೋದನೆ ದೊರೆಯಬಹುದು ಎನ್ನಲಾಗಿದೆ. 

ಮುಂದಿನ ತಿಂಗಳಿನಿಂದಲೇ ಜನರಿಗೆ ಲಸಿಕೆ ನೀಡಿಕೆ ಆರಂಭಿಸಲು ಭಾರತ ಬಯಸಿದೆ. ಆಕ್ಸ್‌ಫರ್ಡ್‌ ಲಸಿಕೆಗೆ ಅನುಮತಿ ದೊರೆಯಬಹುದು ಎನ್ನಲು ಇದು ಇನ್ನೊಂದು ಕಾರಣ ಎನ್ನಲಾಗಿದೆ. ಫೈಜರ್‌ ಮತ್ತು ಭಾರತ್ ಬಯೊಟೆಕ್‌‌ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಲಸಿಕೆಗಳ ತುರ್ತು ಬಳಕೆಯ ಅನುಮತಿ ಅರ್ಜಿಗಳನ್ನೂ ಪರಿಶೀಲಿಸಲಾಗುತ್ತಿದೆ. ಭಾರತವು ಜಗತ್ತಿನಲ್ಲಿಯೇ ಅತಿ ಹೆಚ್ಚು ಲಸಿಕೆ ತಯಾರಿಸುವ ದೇಶ. 

ಆಕ್ಸ್‌ಫರ್ಡ್‌ನ ಲಸಿಕೆಯು ಕಡಿಮೆ ವರಮಾನದ ದೇಶಗಳು ಮತ್ತು ಹೆಚ್ಚು ತಾಪಮಾನ ಇರುವ ದೇಶಗಳಿಗೆ ಅತ್ಯುತ್ತಮ ಎಂದು ಹೇಳಲಾಗುತ್ತಿದೆ. ಏಕೆಂದರೆ, ಈ ಲಸಿಕೆಯ ದರ ಕಡಿಮೆ, ಇದನ್ನು ಸಾಗಿಸುವುದು ಸುಲಭ ಹಾಗೂ ಸಾಮಾನ್ಯ ಫ್ರಿಜ್‌ನ ತಾಪಮಾನದಲ್ಲಿ ದೀರ್ಘಕಾಲ ಇರಿಸಬಹುದು. 

ಆಸ್ಟ್ರಾಜೆನೆಕಾ ಸಂಸ್ಥೆಯ ಅಧಿಕಾರಿಗಳ ಜತೆಗೆ ಭಾರತದ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಮುಂದಿನ ವಾರದಲ್ಲಿ ಅನುಮತಿ ದೊರೆಯಬಹುದು ಎಂಬ ಸ್ಪಷ್ಟ ಸುಳಿವುಗಳು ದೊರೆತಿವೆ. 

ಎರಡು ಡೋಸ್‌ಗೆ ಒಲವು?
ಬ್ರಿಟನ್‌ ಮತ್ತು ಬ್ರೆಜಿಲ್‌ನಲ್ಲಿ ಮನುಷ್ಯನ ಮೇಲೆ ನಡೆಸಿದ ಪ್ರಯೋಗಗಳ ಫಲಿತಾಂಶವನ್ನು ಆಸ್ಟ್ರಾಜೆನೆಕಾ ಕಂಪನಿಯು ಈ ತಿಂಗಳ ಆರಂಭದಲ್ಲಿ ಬಹಿರಂಗಪಡಿಸಿದೆ. ಎರಡು ಪೂರ್ಣ ಡೋಸ್‌ ಪಡೆದವರಲ್ಲಿ ಲಸಿಕೆ ಪರಿಣಾಮವು ಶೇ 62ರಷ್ಟಿದ್ದರೆ, ಮೊದಲಿಗೆ ಅರ್ಧ ಮತ್ತು ನಂತರ ಪೂರ್ಣ ಡೋಸ್‌ ಪಡೆದವರಲ್ಲಿ ಪರಿಣಾಮ ಶೇ 90ರಷ್ಟಿತ್ತು ಎಂದು ಈ ಫಲಿತಾಂಶವು ಹೇಳಿತ್ತು. 

ಎರಡು ಪೂರ್ಣ ಡೋಸ್‌ನಲ್ಲಿ ಪರಿಣಾಮ ಕಡಿಮೆ ಇದ್ದರೂ ಈ ವಿಧಾನವನ್ನು ಮಾತ್ರ ಸಿಡಿಎಸ್‌ಸಿಒ ಪರಿಶೀಲಿಸುತ್ತಿದೆ. ಸಿಡಿಎಸ್‌ಪಿಒ ಮುಖ್ಯಸ್ಥ ವಿ.ಜಿ. ಸೊಮಾನಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

6 ಕೋಟಿ ಡೋಸ್‌ ಸಿದ್ಧ?
ಮೊದಲ ಹಂತದಲ್ಲಿ ಐದರಿಂದ ಆರು ಕೋಟಿ ಡೋಸ್ ಲಸಿಕೆಗಳು‌ ದೊರೆಯಬಹುದು ಎಂದು ಮೂಲಗಳು ಹೇಳಿವೆ. ಮಾತುಕತೆಯು ಇನ್ನೂ ನಡೆಯುತ್ತಿರುವುದರಿಂದ ಲಸಿಕೆ ನೀಡಿಕೆ ಯಾವಾಗ ಆರಂಭವಾಗಬಹುದು ಎಂಬುದನ್ನು ಮೂಲಗಳು ಸ್ಪಷ್ಟಪಡಿಸಿಲ್ಲ. 

ಸೆರಂ ಸಂಸ್ಥೆಯು 5 ಕೋಟಿ ಡೋಸ್‌ಗಳನ್ನು ಸಿದ್ಧವಾಗಿ ಇರಿಸಿದೆ. ಜುಲೈ ಹೊತ್ತಿಗೆ 40 ಕೋಟಿ ಡೋಸ್‌ ಸಿದ್ಧವಾಗಲಿದೆ. ಭಾರತವು ಯಾವುದೇ ಕಂಪನಿ ಜತೆಗೆ ಲಸಿಕೆ ಪೂರೈಕೆಯ ಒಪ್ಪಂದವನ್ನು ಇನ್ನೂ ಮಾಡಿಕೊಂಡಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು