ಸೋಮವಾರ, ಆಗಸ್ಟ್ 8, 2022
22 °C
ಮಾಹಿತಿ ತಂತ್ರಜ್ಞಾನ ನಿಯಮ

ಟ್ವಿಟರ್‌ ವಿರುದ್ಧ ಕ್ರಮಕ್ಕೆ ಅವಕಾಶ: ದೆಹಲಿ ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಹಿತಿ ತಂತ್ರಜ್ಞಾನ ಹೊಸ ನಿಯಮಗಳನ್ನು ಪಾಲಿಸದ ಟ್ವಿಟರ್‌ ಸಂಸ್ಥೆಯನ್ನು ದೆಹಲಿ ಹೈಕೋರ್ಟ್‌ ಗುರುವಾರ ಮತ್ತೆ ತರಾಟೆಗೆ ತೆಗೆದುಕೊಂಡಿದೆ. ಸಂಸ್ಥೆಗೆ ಯಾವುದೇ ರೀತಿಯ ಮಧ್ಯಂತರ ರಕ್ಷಣೆ ಒದಗಿಸುವುದು ಸಾಧ್ಯವಿಲ್ಲ. ಭಾರತದ ಕಾನೂನನ್ನು ಟ್ವಿಟರ್‌ ಉಲ್ಲಂಘಿಸಿದ್ದರೆ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಮುಕ್ತ ಅವಕಾಶ ಇದೆ ಎಂದೂ ಹೈಕೋರ್ಟ್‌ ಗುರುವಾರ ಸ್ಪಷ್ಟಪಡಿಸಿದೆ. 

ಮಧ್ಯಂತರ ಕಾನೂನು ಪಾಲನೆ ಅಧಿಕಾರಿಯನ್ನು ಇದೇ 6ರಿಂದ ಅನ್ವಯ ಆಗುವಂತೆ ನೇಮಕ ಮಾಡಲಾಗಿದೆ. ಕಾಯಂ ನೇಮಕಾತಿಗೆ ಎಂಟು ವಾರಗಳ ಕಾಲಾವಕಾಶ ನೀಡಬೇಕು ಎಂದು ಟ್ವಿಟರ್‌ ಮನವಿ ಮಾಡಿಕೊಂಡಿದೆ.

ನಿವಾಸಿ ಕುಂದುಕೊರತೆ ಅಧಿಕಾರಿ, ಮುಖ್ಯ ಕಾನೂನು ಪಾಲನೆ ಅಧಿಕಾರಿ ಹುದ್ದೆಯ ಹಿಂದೆ ‘ಮಧ್ಯಂತರ’ ಎಂದು ಟ್ವಿಟರ್‌ ಸಂಸ್ಥೆಯು ಉಲ್ಲೇಖಿಸಿದ್ದು ಏಕೆ ಎಂದು ನ್ಯಾಯಮೂರ್ತಿ ರೇಖಾ ಪಲ್ಲಿ ಅವರ ಏಕಸದಸ್ಯ ಪೀಠವು ಪ್ರಶ್ನಿಸಿದೆ. 

ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಸಂಬಂಧಿಸಿ ಟ್ವಿಟರ್‌ನ ವರ್ತನೆಗೆ ಈ ಮಧ್ಯಂತರ ಅಧಿಕಾರಿಗಳೇ ಪೂರ್ಣ ಹೊಣೆಗಾರರು ಮತ್ತು ಅವರಿಗೆ ವಹಿಸಿರುವ ಹೊಣೆಯನ್ನು ಅವರು ವಹಿಸಿಕೊಳ್ಳಲಿದ್ದಾರೆ ಎಂಬ ಪ್ರಮಾಣಪತ್ರವನ್ನು ಎರಡು ವಾರಗಳಲ್ಲಿ ಸಲ್ಲಿಸಬೇಕು ಎಂದು ನ್ಯಾಯಾಲಯವು ಟ್ವಿಟರ್‌ಗೆ ಸೂಚಿಸಿದೆ. ಇದೇ 28ರಂದು ಮುಂದಿನ ವಿಚಾರಣೆ ನಡೆಯಲಿದೆ.

ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಬದ್ಧವಾಗಿರಬೇಕು ಎಂಬ ಮೇ 26ರ ಗಡುವನ್ನು ಸಂಸ್ಥೆಯು ಈಗಾಗಲೇ ಉಲ್ಲಂಘಿಸಿದೆ. ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿದ್ದರೂ ಅದನ್ನು ಅನುಸರಿಸದೆ ಟ್ವಿಟರ್‌ ಸಂಸ್ಥೆಯು ನ್ಯಾಯಾಂಗ ನಿಂದನೆ ಎಸಗಿದೆ ಎಂದು ಪೀಠವು ಹೇಳಿದೆ.

‘ನಿಯಮ ಪ್ರಶ್ನಿಸುವ ಹಕ್ಕಿದೆ’: ಮಾಹಿತಿ ಹಕ್ಕು ನಿಯಮಗಳ ಸಿಂಧುತ್ವವನ್ನು ಪ್ರಶ್ನಿಸುವ ಹಕ್ಕು ತನಗೆ ಇದೆ ಎಂದೂ ಟ್ವಿಟರ್‌ ಹೇಳಿದೆ. ಜತೆಗೆ, ಭಾರತದ ಕಾನೂನುಗಳನ್ನು ಪಾಲಿಸಲು ಪ್ರಯತ್ನಿಸುವುದಾಗಿಯೂ ಹೇಳಿದೆ.

ಸಚಿವರ ಎಚ್ಚರಿಕೆ: ಭಾರತದಲ್ಲಿ ನೆಲೆಸಿರುವ ಮತ್ತು ಕೆಲಸ ಮಾಡುತ್ತಿರುವ ಎಲ್ಲರೂ ಇಲ್ಲಿನ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ಮಾಹಿತಿ ತಂತ್ರಜ್ಞಾನ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

‘ವಾಕ್‌ಸ್ವಾತಂತ್ರ್ಯದ ಮೇಲೆ ಆಕ್ರಮಣ’
ಮುಂಬೈ (ಪಿಟಿಐ):
ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳು ‘ವಾಕ್‌ ಸ್ವಾತಂತ್ರ್ಯದ ಮೇಲೆ ನಡೆಸುತ್ತಿರುವ ಆಕ್ರಮಣ’ ಎಂದು ಡಿಜಿಟಲ್‌ ಸುದ್ದಿ ಪೋರ್ಟಲ್‌ ‘ದಿ ಲೀಫ್‌ಲೆಟ್‌’, ಬಾಂಬೆ ಹೈಕೋರ್ಟ್‌ಗೆ ಗುರುವಾರ ಹೇಳಿದೆ.

ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪ್ರಶ್ನಿಸಿ, ಲೀಫ್‌ಲೆಟ್‌ ಕಳೆದ ವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸಂವಿಧಾನವು ಖಾತರಿ ನೀಡಿರುವ ಸಮಾನತೆಯ ಹಕ್ಕು, ವಾಕ್‌ ಸ್ವಾತಂತ್ರ್ಯದ ಹಕ್ಕು ಮತ್ತು ಯಾವುದೇ ಉದ್ಯೋಗ, ವೃತ್ತಿ, ವ್ಯಾಪಾರ, ಉದ್ಯಮ ಕೈಗೊಳ್ಳುವ ಹಕ್ಕುಗಳನ್ನು ಹೊಸ ನಿಯಮಗಳು ಉಲ್ಲಂಘಿಸುವಂತಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ–2000ದ ನಿಯಮಗಳಿಗೆ ವ್ಯತಿರಿಕ್ತವಾಗಿವೆ. ಈ ನಿಯಮಗಳು ಹೊಸ ಅನುಕೂಲಗಳನ್ನು ನೀಡುವುದಿಲ್ಲ. ಬದಲಾಗಿ ಆನ್‌ಲೈನ್‌ನ ಪ್ರಕಾಶಕರ ಮೇಲೆ ನಿಯಂತ್ರಣ ಹೇರಲು ಅನುವು ಮಾಡುತ್ತದೆ ಎಂದು ದಿ ಲೀಫ್‌ಲೆಟ್‌ ವಾದಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು