ಗುರುವಾರ , ಮೇ 6, 2021
25 °C

ಇಂದು 3 ರಫೇಲ್ ಜೆಟ್‌ಗಳು ಭಾರತಕ್ಕೆ; ಮಾರ್ಗ ಮಧ್ಯೆ ಇಂಧನ ಪೂರೈಕೆಗೆ ಯುಎಇ ಸಹಕಾರ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತಕ್ಕೆ ಬುಧವಾರ ಮೂರು ರಫೇಲ್‌ ಯುದ್ಧ ವಿಮಾನಗಳು ತಲುಪಲಿವೆ. ಫ್ರಾನ್ಸ್‌ನಿಂದ ನೇರವಾಗಿ ಭಾರತಕ್ಕೆ ಹಾರಾಟ ನಡೆಸಲಿರುವ ರಫೇಲ್‌ಗಳು ಮಾರ್ಗ ಮಧ್ಯದಲ್ಲೇ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ (ಯುಎಇ) ವಾಯುಪಡೆ ಸಹಕಾರದಿಂದ ಇಂಧನ ಪೂರೈಸಿಕೊಳ್ಳಲಿವೆ.

ಮೂರೂ ರಫೇಲ್‌ಗಳು ಇಂದು ಸಂಜೆ 7ಕ್ಕೆ ಗುಜರಾತ್‌ಗೆ ಬಂದಿಳಿಯುವ ಸಾಧ್ಯತೆ ಇದೆ. ಈ ಯುದ್ಧವಿಮಾನಗಳು ಭಾರತೀಯ ವಾಯುಪಡೆಯ ಅಂಬಾಲ ವಾಯುನೆಲೆಯಲ್ಲಿರುವ 'ಗೋಲ್ಡನ್ ಆ್ಯರೋಸ್‌ ಸ್ಕ್ವಾಡ್ರನ್' ಸೇರ್ಪಡೆಯ ಮೂಲಕ ಒಟ್ಟು ರಫೇಲ್‌ ಬಲ 14ಕ್ಕೆ ಹೆಚ್ಚಲಿದೆ.

ಯುಎಇ ವಾಯುಪಡೆಯ 'ಏರ್‌ಬಸ್ 330 ಮಲ್ಟಿ ರೋಲ್ ಟ್ರಾನ್ಸ್‌ಪೋರ್ಟ್' ಟ್ಯಾಂಕರ್‌ಗಳು ಮಾರ್ಗ ಮಧ್ಯದಲ್ಲೇ 'ಗಲ್ಫ್‌ ಆಫ್ ಒಮಾನ್' ಪ್ರದೇಶದಲ್ಲಿ ರಫೇಲ್‌ ಜೆಟ್‌ಗಳಿಗೆ ಇಂಧನ ಪೂರೈಸಲಿವೆ.

ಏಪ್ರಿಲ್‌ನಲ್ಲಿ ಒಂಬತ್ತು ರಫೇಲ್‌ ಯುದ್ಧ ವಿಮಾನಗಳ ಮತ್ತೊಂದು ಬ್ಯಾಚ್‌ ಭಾರತಕ್ಕೆ ಬರಲಿದೆ. ಇವುಗಳ ಪೈಕಿ 5 ರಫೇಲ್‌ಗಳನ್ನು ಪಶ್ಚಿಮ ಬಂಗಾಳದ ಹಾಸಿಮಾರಾ ವಾಯುನೆಲೆಗೆ ನಿಯೋಜಿಸಲಾಗುತ್ತದೆ.

'ಏಪ್ರಿಲ್‌ ಅಂತ್ಯದೊಳಗೆ ಭಾರತಕ್ಕೆ ಐದು ಹೆಚ್ಚುವರಿ ರಫೇಲ್‌ ಜೆಟ್‌ಗಳನ್ನು ಹಸ್ತಾಂತರಿಸಲಾಗುತ್ತದೆ. ಕೋವಿಡ್‌–19 ಸಾಂಕ್ರಾಮಿಕದ ನಡುವೆಯೂ ನಿಗದಿಯಂತೆ ನಾವು ಜೆಟ್‌ಗಳ ಪೂರೈಕೆ ಮಾಡುತ್ತಿರುವುದು ಹೆಮ್ಮೆ ತಂದಿದೆ' ಎಂದು ಭಾರತದಲ್ಲಿ ಫ್ರಾನ್ಸ್‌ನ ರಾಯಭಾರಿ ಎಮಾನ್ಯುಯೆಲ್‌ ಲೆನೈನ್‌ ಹೇಳಿದ್ದಾರೆ.

ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ ರಫೇಲ್‌ಗಳು ಭಾರತದ ವಾಯುಪಡೆಗೆ ಸೇರ್ಪಡೆಯಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲೇ ಕಾರ್ಯಾಚರಣೆ ಆರಂಭಿಸಿವೆ. ಪೂರ್ವ ಲಡಾಕ್‌ ಸೇರಿದಂತೆ ಹಲವು ವಲಯಗಳಲ್ಲಿ ಗಸ್ತು ವಹಿಸುವ ಕಾರ್ಯಾಚರಣೆ ನಡೆಸುತ್ತಿವೆ. 2016ರ ಸೆಪ್ಟೆಂಬರ್‌ನಲ್ಲಿ ಭಾರತವು ಫ್ರಾನ್ಸ್‌ನಿಂದ 36 ರಫೇಲ್‌ಗಳಿಗೆ ಬೇಡಿಕೆ ಇಟ್ಟಿತ್ತು. ಈ ವರ್ಷ ಏಪ್ರಿಲ್‌ ವೇಳೆಗೆ ಶೇ 50ರಷ್ಟು ಯುದ್ಧ ವಿಮಾನಗಳು ಭಾರತ ತಲುಪಲಿವೆ.

ಎರಡು ಎಂ88–3 ಸ್ಯಾಫ್ರನ್‌ ಎಂಜಿನ್‌ಗಳು, 73 ಕಿಲೋ ನ್ಯೂಟನ್‌ ಮುನ್ನುಗ್ಗುವ ಶಕ್ತಿಯನ್ನು ರಫೇಲ್‌ ಯುದ್ಧ ವಿಮಾನಗಳು ಹೊಂದಿವೆ. ರಫೇಲ್‌ ಮೂಲಕ ನೆಲದ ಮೇಲೆ ಮತ್ತು ಸಾಗರ ವಲಯದಲ್ಲಿ ದಾಳಿ ನಡೆಸಬಹುದು. ವಾಯು ಮಾರ್ಗದಲ್ಲಿ ಅತ್ಯುತ್ತಮ ರಕ್ಷಣಾ ವ್ಯವಸ್ಥೆಯನ್ನು ಈ ಫೈಟರ್‌ಗಳು ಒಳಗೊಂಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು