ಶನಿವಾರ, ಫೆಬ್ರವರಿ 27, 2021
30 °C

ಪಕ್ಷದ ವಿರುದ್ಧ ಅಸಮಾಧಾನ ತೋಡಿಕೊಂಡ ಟಿಎಂಸಿ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಪಶ್ಚಿಮ ಬಂಗಾಳದ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಮುಖಂಡ ರಜೀಬ್‌ ಬ್ಯಾನರ್ಜಿ ಅವರು ಶನಿವಾರ ಫೇಸ್‌ಬುಕ್‌ ಲೈವ್‌ನಲ್ಲಿ ಪಕ್ಷದ ವಿರುದ್ಧ ತಮಗಿರುವ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

‘ಪದೇ ಪದೇ ನನ್ನ ತಾಳ್ಮೆಯನ್ನು ಪರೀಕ್ಷಿಸಲಾಗುತ್ತಿದೆ. ಜನರ ಹಿತದೃಷ್ಟಿಯಿಂದ ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದೇನೆ’ ಎಂದು ಅವರು ತಿಳಿಸಿದ್ದಾರೆ. 

‘ಅವರು ಏನು ಹೇಳುತ್ತಾರೊ ಅದನ್ನಷ್ಟೇ ಮಾಡಬೇಕು. ಕೆಲವೊಂದು ವಿಚಾರದಲ್ಲಿ ಅಭಿಪ್ರಾಯ ಹೇಳುವುದಕ್ಕೂ ನನಗೆ ಸ್ವಾತಂತ್ರ್ಯ ನೀಡುತ್ತಿಲ್ಲ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

‘ಪಕ್ಷದ ಮೇಲಿನ ಕಾಳಜಿಯಿಂದಾಗಿ ಕೆಲವು ದುಷ್ಕೃತ್ಯಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಪಕ್ಷದಿಂದ ಏನೇ ಪ್ರಮಾದವಾಗಿದ್ದರೂ, ಯಾರೇ ತಪ್ಪು ಮಾಡಿದ್ದರೂ ಅದನ್ನು ಧೈರ್ಯವಾಗಿ ಪ್ರಶ್ನಿಸುತ್ತೇನೆ. ನನ್ನನ್ನು ಹತ್ತಿರದಿಂದ ಬಲ್ಲವರಿಗೆ ಇದು ಗೊತ್ತಿದೆ. ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಿದ್ದೇನೆಯೇ ಹೊರತು ಸ್ವಯಂ ಏಳಿಗೆಗಾಗಿಯಲ್ಲ’ ಎಂದು ಬ್ಯಾನರ್ಜಿ ನುಡಿದಿದ್ದಾರೆ.

‘ಪಕ್ಷವು ಜನರ ಮನಸ್ಸಿನಿಂದ ದೂರವಾಗುತ್ತಿದೆ. ಈಗ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಮ್ಮಿಂದ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದೆ. ಇಲ್ಲದೇ ಹೋದರೆ ಪಕ್ಷ ಮತ್ತು ಜನರ ನಡುವಣ ಕಂದಕವು ಮತ್ತಷ್ಟು ದೊಡ್ಡದಾಗುತ್ತದೆ’ ಎಂದು ಅವರು ಟಿಎಂಸಿಯನ್ನು ಪರೋಕ್ಷವಾಗಿ ಎಚ್ಚರಿಸಿದ್ದಾರೆ.

‘ಚುನಾವಣೆ ಸನ್ನಿಹಿತವಾಗಿದೆ. ಈ ಹೊತ್ತಿನಲ್ಲಿ ಜನರ ಅನುಕಂಪ ಗಿಟ್ಟಿಸಲು ನಾನು ಯಾವುದೇ ನಾಟಕವಾಡುವುದಿಲ್ಲ. ವ್ಯವಸ್ಥೆಯ ಲೋಪಗಳ ಬಗ್ಗೆ ಮಾತನಾಡಬೇಕಿನಿಸಿದಾಗ ಪಕ್ಷದ ವೇದಿಕೆಯಲ್ಲಿ ನಿರ್ಭೀತಿಯಿಂದಲೇ ಅದನ್ನು ಪ್ರಸ್ತಾಪಿಸಿದ್ದೇನೆ. ಕೆಲ ನಾಯಕರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಅಂತಹವರ ವಿರುದ್ಧ ಪಕ್ಷವು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದಿದ್ದಾರೆ.

‘ಯಾರೇ ಆಗಲಿ ತಮ್ಮ ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳು ಹಾಗೂ ಬೀದಿಯಲ್ಲಿ ನಿಂತು ಹೀಗೆ ಮಾತನಾಡುವುದು ಸರಿಯಲ್ಲ’ ಎಂದು ನಗರಾಭಿವೃದ್ಧಿ ಸಚಿವ ಹಾಗೂ ಟಿಎಂಸಿ ಮುಖಂಡ ಫಿರ್ಹಾದ್‌ ಹಕೀಂ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು