ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘಾಲಯ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಉಗ್ರನ ಹತ್ಯೆ

Last Updated 13 ಆಗಸ್ಟ್ 2021, 6:50 IST
ಅಕ್ಷರ ಗಾತ್ರ

ಶಿಲ್ಲಾಂಗ್‌: ಮೇಘಾಲಯದ ಪೂರ್ವ ಖಾಸಿಹಿಲ್ಸ್‌ ಜಿಲ್ಲೆಯಲ್ಲಿ ಶುಕ್ರವಾರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಸರ್ಕಾರದ ಎದುರು ಶರಣಾಗಿದ್ದ ನಿಷೇಧಿತ ಬಂಡುಕೋರ ಸಂಘಟನೆಯೊಂದರ ಮಾಜಿ ಪ್ರಧಾನ ಕಾರ್ಯದರ್ಶಿ ಹತನಾಗಿದ್ದಾನೆ.

‌ಹತ್ಯೆಯಾದ ಉಗ್ರನನ್ನು ಚೆಸ್ಟೆರ್‌ಫೀಲ್ಡ್‌ ತಂಗ್‌ಖಿವ್‌(54) ಎಂದು ಗುರುತಿಸಲಾಗಿದೆ. ಈತ ನಿಷೇಧಿತ ಹೈನ್ನಿವ್‌ಟ್ರೆಪ್‌ ನ್ಯಾಷನಲ್‌ ಲಿಬರೇಷನ್‌ ಕೌನ್ಸಿಲ್‌(ಎನ್‌ಎನ್‌ಎಲ್‌ಸಿ) ಬಂಡುಕೋರ ಸಂಘಟನೆಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ. 2018ರಲ್ಲಿ ಮೇಘಾಲಯದ ಉಪ ಮುಖ್ಯಮಂತ್ರಿ ಪ್ರೆಸ್ಟೋನ್ ಟೈನ್ಸಾಂಗ್ ಎದುರು ಶರಣಾಗತನಾಗಿದ್ದ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಐಇಡಿ ಸ್ಪೋಟಗಳಿಗೆ ಸಂಬಂಧಿಸಿದಂತೆ ಪೊಲೀಸರ ತಂಡ ಮಾವ್ಲೈನಲ್ಲಿರುವ ತಂಗ್‌ಖಿವ್‌ನ ಮಸಾರ್ ನಿವಾಸದ ಮೇಲೆ ದಾಳಿ ನಡೆಸಿತು‘ ಎಂದು ‌ಪೊಲೀಸ್ ಮಹಾ ನಿರ್ದೇಶಕ ಆರ್. ಚಂದ್ರನಾಥನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಖ್ಲಿಯೆರಿಯಾತ್‌ನಲ್ಲಿ ನಡೆದ ಐಇಡಿ ಸ್ಫೋಟದಲ್ಲಿ ತಂಗ್‌ಖಿವ್‌ನ ಕೈವಾಡವಿದೆ. ಈ ಕುರಿತು ನಮ್ಮಲ್ಲಿ ಸಾಕ್ಷ್ಯಗಳಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಶುಕ್ರವಾರ ಮುಂಜಾನೆ ಅವರ ಮನೆಯ ಮೇಲೆ ದಾಳಿ ನಡೆಸಿತ್ತು. ದಾಳಿಯ ವೇಳೆ, ಆತ ಚಾಕು ಹಿಡಿದು ನಮ್ಮ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ದಾಳಿ ಮಾಡಿದಾಗ, ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ‘ ಎಂದು ಚಂದ್ರನಾಥ್ ತಿಳಿಸಿದರು.

ಎನ್‌ಕೌಂಟರ್‌ನಲ್ಲಿ ತೀವ್ರವಾಗಿ ಗಾಯಗೊಂಡ ತಂಗ್‌ಖಿವ್‌ನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು.

ಪೊಲೀಸರು ತಂಗ್‌ಖಿವ್‌ನ ಮನೆಯಿಂದ ಲ್ಯಾಪ್‌ಟಾಪ್‌, ಮೊಬೈಲ್‌ಫೋನ್‌, ಬಂದೂಕು, ಡಿಜಿಟಲ್‌ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ‘ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಆತನ ಇಬ್ಬರು ಸಹಚರರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದೇವೆ‘ ಎಂದು ಚಂದ್ರನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT