ಶನಿವಾರ, ಫೆಬ್ರವರಿ 27, 2021
30 °C
ದೆಹಲಿಯಲ್ಲಿ ನಾಳೆ ಬೃಹತ್ ಮೆರವಣಿಗೆ; ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ರ‍್ಯಾಲಿ

ಟ್ರ್ಯಾಕ್ಟರ್ ಜಾಥಾಕ್ಕೆ ರೈತರು ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಗಣರಾಜ್ಯೋತ್ಸವ ದಿನದಂದು ರೈತರು ಆಯೋಜಿಸಿರುವ ಟ್ರ್ಯಾಕ್ಟರ್ ಜಾಥಾವು ಐತಿಹಾಸಿಕ ಎಂದು ರೈತ ನಾಯಕರು ಭಾನುವಾರ ಹೇಳಿದ್ದಾರೆ. ರ‍್ಯಾಲಿಯಲ್ಲಿ ಹಳ್ಳಿಯ ಜೀವನ, ರೈತರ ಹೋರಾಟ, ಧೈರ್ಯ ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು ಇರಲಿವೆ. 

ಜಾಥಾದಲ್ಲಿ ಭಾಗಿಯಾಗುವ ಟ್ರ್ಯಾಕ್ಟರ್‌ಗಳ ಪೈಕಿ ಶೇ 30ರಷ್ಟು ವಾಹನಗಳಲ್ಲಿ ವಿವಿಧ ವಿಷಯಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಅನಾವರಣಗೊಳ್ಳಲಿವೆ. ಭಾರತದಲ್ಲಿ ರೈತ ಚಳವಳಿ, ರೈತ ಮಹಿಳೆಯರ ಪಾತ್ರ, ವಿವಿಧ ರಾಜ್ಯಗಳಲ್ಲಿ ಪಾಲಿಸುತ್ತಿರುವ ಬೇಸಾಯ ಪದ್ಧತಿಗಳನ್ನು ಇವು ಪ್ರತಿಬಿಂಬಿಸಲಿವೆ.

ಮಹಾರಾಷ್ಟ್ರದ ವಿದರ್ಭ ಭಾಗದ ಕೆಲವು ಮಕ್ಕಳು ರೈತರ ಆತ್ಮಹತ್ಯೆ ವಿಷಯವನ್ನು ಸ್ತಬ್ಧಚಿತ್ರಕ್ಕೆ ಆಯ್ದುಕೊಂಡಿದ್ದಾರೆ. ರೈತರು ಎದುರಿಸುತ್ತಿರುವ ಕಠಿಣ ಪರಿಸ್ಥಿತಿಯನ್ನು ಆಳುವವರಿಗೆ ವಿವರಿಸುವುದು ಇದರ ಉದ್ದೇಶ.

ಹಿಮಾಚಲ ಪ್ರದೇಶ, ಜಮ್ಮು–ಕಾಶ್ಮೀರ ಹಾಗೂ ಉತ್ತರಾಖಂಡದ ಸ್ತಬ್ಧಚಿತ್ರಗಳು ಹಣ್ಣು ಕೃಷಿಯ ಮಾಹಿತಿ ನೀಡಲಿವೆ. ಹರಿಯಾಣ, ಪಂಜಾಬ್‌ನ ರೈತರು ಸಾಂಪ್ರದಾಯಿಕ ಹಾಗೂ ಆಧುನಿಕ ತಂತ್ರಜ್ಞಾನದ ಕೃಷಿಯನ್ನು ಪ್ರದರ್ಶಿಸಲಿದ್ದಾರೆ. ಹಾಲು ಕರೆಯು
ತ್ತಿರುವ ರೈತ ಮಹಿಳೆ, ಚಕ್ಕಡಿ ಓಡಿಸು ತ್ತಿರುವ ರೈತನ ಸ್ತಬ್ಧಚಿತ್ರಗಳೂ ಇರಲಿವೆ. 

ಪ್ರತಿ ಟ್ರ್ಯಾಕ್ಟರ್‌ ತ್ರಿವರ್ಣಧ್ವಜ ಹೊಂದಿರಲಿದ್ದು, ಹಿನ್ನೆಲೆಯಲ್ಲಿ ಜನಪದ ಗೀತೆ ಹಾಗೂ ದೇಶಭಕ್ತಿ ಗೀತೆಗಳು ಮೊಳಗಲಿವೆ. ದೆಹಲಿಯ ಗಡಿಗಳಾದ ಸಿಂಘು, ಟಿಕ್ರಿ, ಗಾಜಿಪುರಗಳಿಂದ ರ‍್ಯಾಲಿ ಶುರುವಾಗಲಿದೆ.

‘ಕಿಸಾನ್ ಪರೇಡ್’‌ನಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 2 ಲಕ್ಷ ಟ್ರ್ಯಾಕ್ಟರ್‌ಗಳು ಭಾಗವಹಿಸಲಿವೆ ಎಂದು ರೈತ ಮುಖಂಡರು ಶನಿವಾರ ಹೇಳಿದ್ದರು. ಈ ಪೈಕಿ ಪಂಜಾಬ್‌ ರಾಜ್ಯವೊಂದರಿಂದಲೇ 1 ಲಕ್ಷ ವಾಹನಗಳು ಬರಲಿವೆ. ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಿಂದ ಸುಮಾರು 25 ಸಾವಿರ ಟ್ರ್ಯಾಕ್ಟರ್‌ಗಳು ಬರುವ ನಿರೀಕ್ಷೆಯಿದೆ.

ನಿಯಂತ್ರಣ ಕೊಠಡಿ

ಕಾರ್ಯಕ್ರಮ ನಿರ್ವಹಣೆಗೆ ಕೇಂದ್ರೀಯ ಸಮಿತಿ ಯೊಂದನ್ನು ರಚಿಸಲಾಗಿದೆ. ಇದರಡಿ ಉಪಸಮಿತಿಗಳನ್ನು ರಚಿಸಲಾಗಿದೆ. ವಾಹನಗಳು ಯಾವ ಮಾರ್ಗದಲ್ಲಿ ಸಂಚರಿಸಬೇಕು ಎಂದು ನಿರ್ದೇಶಿಸಲು 2,500 ಸ್ವಯಂಸೇವಕರನ್ನು ನಿಯೋಜಿಸ ಲಾಗಿದೆ. ದಟ್ಟಣೆ ನೋಡಿಕೊಂಡು ಸ್ವಯಂ ಸೇವಕರ ಸಂಖ್ಯೆ ಹೆಚ್ಚಿಸಲಾಗುವುದು.

ಟ್ರ್ಯಾಕ್ಟರ್ ರ‍್ಯಾಲಿ ನಿರ್ವಹಣೆಗೆ ಪ್ರತಿ ಪ್ರತಿಭಟನಾ ಸ್ಥಳದಲ್ಲಿ ನಿಯಂತ್ರಣ ಕೊಠಡಿ (ವಾರ್ ರೂಮ್) ಸ್ಥಾಪಿಸ ಲಾಗಿದೆ. ವೈದ್ಯರು, ಭದ್ರತಾ ಸಿಬ್ಬಂದಿ, ಸಾಮಾಜಿಕ ಜಾಲತಾಣ ವ್ಯವಸ್ಥಾಪಕರನ್ನು ಒಳಗೊಂಡಂತೆ 40 ಸದಸ್ಯರು ಪ್ರತಿ ನಿಯಂತ್ರಣ ಕೊಠಡಿಯಲ್ಲಿ ಇರಲಿದ್ದಾರೆ. ತುರ್ತು ಆರೋಗ್ಯ ಪರಿಸ್ಥಿತಿ ಎದುರಿಸಲು ಮಾರ್ಗದುದ್ದಕ್ಕೂ 40 ಆಂಬುಲೆನ್ಸ್‌ ಗಳನ್ನು ನಿಯೋಜಿಸಲಾಗುತ್ತಿದೆ.

ರಾಜಪಥದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಕ್ತಾಯವಾದ ಬಳಿಕ ಮಧ್ಯಾಹ್ನ 12 ಗಂಟೆಯಿಂದ ರ‍್ಯಾಲಿ ಆರಂಭವಾಗಲಿದೆ. ಸಂಜೆ 6 ಗಂಟೆಯೊಳಗೆ ಮುಕ್ತಾಯವಾಗಲಿದೆ. ಟ್ರ್ಯಾಕ್ಟರ್ ರ‍್ಯಾಲಿ ಬಳಿಕ ಪ್ರತಿಭಟನೆಗೆ ಸಂಬಂಧಿಸಿ ಮುಂದಿನ ನಿರ್ಧಾರ ತೆಗೆದು
ಕೊಳ್ಳಲಾಗುವುದು ಎಂದು ರೈತ ನಾಯಕರು ತಿಳಿಸಿದ್ದಾರೆ.

‘ವ್ಯಕ್ತಿ ಮೇಲೆ ಒತ್ತಡ’

ರೈತರ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಹೇಳಲಾದ ವ್ಯಕ್ತಿಯ ಮೇಲೆ ‘ಪಿತೂರಿ ಒಪ್ಪಿಕೊಳ್ಳುವಂತೆ ಒತ್ತಡವಿದೆ’ ಎಂಬುದಾಗಿ ಹರಿಯಾಣ ಪೊಲೀಸರು ಹೇಳಿದ್ದಾರೆ. ಮಂಗಳವಾರದ ಟ್ರ್ಯಾಕ್ಟರ್ ಜಾಥಾಕ್ಕೆ ಅಡ್ಡಿಪಡಿಸುವ ಮತ್ತು ರೈತ ನಾಯಕರ ಹತ್ಯೆಯ ಪಿತೂರಿ ನಡೆಸಲಾಗಿದೆ ಎಂಬ ಆರೋಪಕ್ಕೆ ಪೂರಕವಾದ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

ಚಿತ್ರೀಕರಣಕ್ಕೆ ಅಡ್ಡಿ

ಪಂಜಾಬ್‌ನ ಪಟಿಯಾಲದಲ್ಲಿ ರೈತರ ಗುಂಪು ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರ ಮುಂಬರುವ ಚಿತ್ರ ‘ಗುಡ್ ಲಕ್ ಜೆರ್ರಿ’ ಚಿತ್ರೀಕರಣಕ್ಕೆ ಅಡ್ಡಿಯಾಯಿತು. ಸಿವಿಲ್ ಲೇನ್ಸ್‌ ಪ್ರದೇಶದ ಬಳಿ ಶನಿವಾರ ಈ ಘಟನೆ ನಡೆದಿದ್ದು, ಪ್ರತಿಭಟನಾನಿರತ ರೈತರು ಚಿತ್ರೀಕರಣವನ್ನು ವಿರೋಧಿಸಿದರು.

ಬಾಲಿವುಡ್ ವಿರುದ್ಧ ಘೋಷಣೆ ಗಳನ್ನು ಕೂಗಿದ ಪ್ರತಿಭಟನಕಾರರು, ‘ಯಾವುದೇ ಕಲಾವಿದರು ರೈತರ ಆಂದೋಲನಕ್ಕೆ ಬೆಂಬಲ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

------

‘ಕಾಯ್ದೆ ಅಮಾನತು ಮಾಡಲಾಗದು’

ರೈತರ ಬೇಡಿಕೆಯಂತೆ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೇ ವಿನಾ ಅವುಗಳನ್ನು ಅಮಾನತು ಮಾಡಲು ಸಾಧ್ಯವಿಲ್ಲ ಎಂದು ಎಡಪಕ್ಷಗಳು ಕೇಂದ್ರಕ್ಕೆ ತಿಳಿಸಿವೆ.

ಸಿಪಿಎಂ, ಸಿಪಿಐ, ಸಿಪಿಐ (ಎಂಎಲ್), ಫಾರ್ವರ್ಡ್ ಬ್ಲಾಕ್ ಮತ್ತು ಆರ್‌ಎಸ್‌ಪಿ ಒಳಗೊಂಡ ಐದು ಎಡ ಪಕ್ಷಗಳು ಭಾನುವಾರ ಜಂಟಿ ಹೇಳಿಕೆ ಹೊರಡಿಸಿದ್ದು, ಸರ್ಕಾರವು ಹಟಮಾರಿ ಧೋರಣೆ ಬಿಡಬೇಕು ಎಂದು ಒತ್ತಾಯಿಸಿವೆ.

‘ಕಾಯ್ದೆಗಳನ್ನು 18 ತಿಂಗಳ ಕಾಲ ಅಮಾನತಿನಲ್ಲಿ ಇರಿಸುವುದಾಗಿ ಸರ್ಕಾರ ತಿಳಿಸಿದೆ. ಸಂಸತ್ತಿನಿಂದ ಶಾಸನಬದ್ಧವಾಗಿ ಅನುಮೋದನೆ ಪಡೆದು, ಭಾರತದ ರಾಷ್ಟ್ರಪತಿ ಸಹಿ ಮಾಡಿದ ಕಾಯ್ದೆಗಳನ್ನು ಅಮಾನತಿನಲ್ಲಿ ಇಡಲು ಬರುವುದಿಲ್ಲ. ಅವುಗಳನ್ನು ಜಾರಿಗೊಳಿಸಬಹುದು ಅಥವಾ ರದ್ದುಪಡಿಸಬೇಕು’ ಎಂದು ತಿಳಿಸಲಾಗಿದೆ.

‘ರೈತರು ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಇತರ ಪಾಲುದಾರರೊಂದಿಗೆ ಕೃಷಿ ಸುಧಾರಣೆಗಳ ಬಗ್ಗೆ ಚರ್ಚೆ ನಡೆಸಬೇಕು. ಸರಿಯಾದ ಚರ್ಚೆ ನಡೆಸಲು ಈ ಪ್ರಸ್ತಾವನೆಗಳನ್ನು ಸಂಸತ್ತಿನ ಮುಂದೆ ತರಬೇಕು’ ಎಂದು ಪಕ್ಷಗಳು ತಿಳಿಸಿವೆ.

-------

ಮುಂಬೈನಲ್ಲಿಂದು ಬೃಹತ್ ಸಮಾವೇಶ

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಸೋಮವಾರ ಮುಂಬೈನ ಆಜಾದ್ ಮೈದಾನದಲ್ಲಿ ನಡೆಯಲಿರುವ ರ‍್ಯಾಲಿಯಲ್ಲಿ ಭಾಗವಹಿಸಲು ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಸಾವಿರಾರು ರೈತರು ಮಹಾನಗರಕ್ಕೆ ಬರುತ್ತಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ರಾಜ್ಯದ ಆಡಳಿತಾರೂಢ ಮಹಾವಿಕಾಸ ಅಘಾಡಿ (ಎಂವಿಎ) ಮೈತ್ರಿಕೂಟದ ಪ್ರಮುಖ ನಾಯಕರು ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.

ದೆಹಲಿಯಲ್ಲಿ ಎರಡು ತಿಂಗಳಿಂದ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಲು ಈ ರ‍್ಯಾಲಿ ನಡೆಸಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು