ನವದೆಹಲಿ: ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ಉದ್ದೇಶಿತ ಬೆಂಗಳೂರು–ಪುಣೆ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದ್ದು, ಈ ಸಂಬಂಧ ವಿವರವಾದ ಯೋಜನಾ ವರದಿ ತಯಾರಿಸುತ್ತಿದೆ.
₹50 ಸಾವಿರ ಕೋಟಿ ವೆಚ್ಚದಲ್ಲಿ ಒಟ್ಟು 699 ಕಿ.ಮೀ. ಉದ್ದನೆಯ ಮಾರ್ಗ ನಿರ್ಮಾಣ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಆರು ಪಥಗಳ ಈ ಮಾರ್ಗವು ಕರ್ನಾಟಕದಲ್ಲೇ ಅತಿ ಹೆಚ್ಚು ದೂರ (498 ಕಿ.ಮೀ) ಹಾದು ಹೋಗಲಿದೆ. ಇದಕ್ಕಾಗಿ ರಾಜ್ಯದಲ್ಲೇ 5,205 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ.
‘ವಾಹನಗಳು 120 ಕಿ.ಮೀ.ವೇಗದಲ್ಲಿ ಚಲಿಸುವಂತೆ ಈ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಉದ್ದೇಶಿತ ಹೆದ್ದಾರಿಯಿಂದಾಗಿ ಉಭಯ ನಗರಗಳ ನಡುವಣ ಪ್ರಯಾಣದ ಅವಧಿಯು 6 ಗಂಟೆಗಳಿಗೆ ತಗ್ಗಲಿದೆ. ಸದ್ಯ ಇರುವ ಬೆಂಗಳೂರು–ಪುಣೆ (ಎನ್‌ಎಚ್–4) ಹೆದ್ದಾರಿಯು ಒಟ್ಟು 783 ಕಿ.ಮೀ ಉದ್ದವಿದ್ದು, ಇದನ್ನು ಕ್ರಮಿಸಲು 14 ರಿಂದ 15 ಗಂಟೆ ಬೇಕಾಗುತ್ತದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತ್ ಮಾಲಾ ಹಂತ–2ರ ಅಡಿಯಲ್ಲಿ ಎಕ್ಸ್‌ಪ್ರೆಸ್‌ವೇ ನಿರ್ಮಿಸಲು ನಿರ್ಧರಿಸಲಾಗಿದೆ. ಪುಣೆಯ ಕಂಜಾಳೆಯಲ್ಲಿ ಆರಂಭವಾಗಲಿರುವ ಮಾರ್ಗವು ದೊಡ್ಡಬಳ್ಳಾಪುರ ತಾಲ್ಲೂಕಿನ ಮುತುಗದಹಳ್ಳಿಯ ಹೊರ ವರ್ತುಲ ರಸ್ತೆಯಲ್ಲಿ ಕೊನೆಗೊಳ್ಳಲಿದೆ. ಕರ್ನಾಟಕದಲ್ಲಿ ಈ ಮಾರ್ಗ ಅಥಣಿ ತಾಲ್ಲೂಕಿನ ಬೊಮ್ಮನಾಳ್‌ನಲ್ಲಿ ಆರಂಭವಾಗಲಿದ್ದು, ಅಥಣಿ, ಜಮಖಂಡಿ, ಬಾಗಲಕೋಟೆ, ಮುಧೋಳ, ಬಾದಾಮಿ, ನರಗುಂದ, ರೋಣ, ಯಲಬುರ್ಗ, ಕೊಪ್ಪಳ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಜಗಳೂರು, ಚಿತ್ರದುರ್ಗ, ಸಿರಾ, ಮಧುಗಿರಿ, ಕೊರಟಗೆರೆ, ತುಮಕೂರು, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಮೂಲಕ ಹಾದುಹೋಗಲಿದೆ. ಮಹಾರಾಷ್ಟ್ರದಲ್ಲಿ ಪುಣೆ, ಸತಾರ ಮತ್ತು ಸಾಂಗ್ಲಿ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ.
ಹೋದ ವಾರ ಬೆಂಗಳೂರಿಗೆ ಭೇಟಿ ನೀಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯೋಜನೆಯ ಸಂಬಂಧ ಲೋಕಸಭಾ ಸದಸ್ಯರು ಹಾಗೂ ಚುನಾಯಿತ ಪ್ರತಿನಿಧಿಗಳ ಜೊತೆ ಚರ್ಚಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.