ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳು ನೆಲದ ಕಾನೂನು ಪಾಲಿಸಬೇಕು: ಜೈಶಂಕರ್

ಬ್ರಿಟನ್‌ ವಿದೇಶಾಂಗ ಸಚಿವ ಕ್ಲೆವರ್ಲಿಗೆ ಖಡಕ್‌ ಉತ್ತರ
Last Updated 1 ಮಾರ್ಚ್ 2023, 16:20 IST
ಅಕ್ಷರ ಗಾತ್ರ

ನವದೆಹಲಿ: ಬಿಬಿಸಿ ಕಚೇರಿಗಳಲ್ಲಿ ತೆರಿಗೆ ಅಧಿಕಾರಿಗಳು ಕೈಗೊಂಡಿದ್ದ ‘ಪರಿಶೀಲನೆ’ಯನ್ನು ಸಮರ್ಥಿಸಿಕೊಂಡಿರುವ ಸಚಿವ ಎಸ್‌.ಜೈಶಂಕರ್‌, ‘ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಂಪನಿಗಳು ಈ ನೆಲದ ಕಾನೂನು ಹಾಗೂ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಬ್ರಿಟನ್‌ ವಿದೇಶಾಂಗ ಸಚಿವ ಜೇಮ್ಸ್‌ ಕ್ಲೆವರ್ಲಿ ಅವರಿಗೆ ಬುಧವಾರ ಹೇಳಿದರು.

ಜಿ–20 ಗುಂಪಿನ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿರುವ ಕ್ಲೆವರ್ಲಿ ಅವರು, ಜೈಶಂಕರ್‌ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ.

ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಇತ್ತೀಚೆಗೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಅಧಿಕಾರಿಗಳು ‘ಪರಿಶೀಲನೆ’ ನಡೆಸಿದ್ದನ್ನು ಕ್ಲೆವರ್ಲಿ ಈ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬೆಳವಣಿಗೆ ಕುರಿತು ಪ್ರಧಾನಿ ರಿಷಿ ಸುನಕ್‌ ಕಳವಳ ವ್ಯಕ್ತಪಡಿಸಿದ್ದನ್ನು ವಿವರಿಸಿದಾಗ, ಜೈಶಂಕರ್ ಈ ಮಾತುಗಳನ್ನು ಹೇಳಿದರು ಎಂದು ಮೂಲಗಳು ಹೇಳಿವೆ.

2002ರ ಗುಜರಾತ್‌ ಗಲಭೆ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರ ವಿವಾದಕ್ಕೆ ಕಾರಣವಾಗಿತ್ತು. ಈ ಸಾಕ್ಷ್ಯಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು.

ಈ ಕ್ರಮ ಕೈಗೊಂಡ ಕೆಲ ವಾರಗಳ ನಂತರ ಸಿಬಿಡಿಟಿ ಅಧಿಕಾರಿಗಳು ಬಿಬಿಸಿ ಕಚೇರಿಗಳಲ್ಲಿ ಮೂರು ದಿನಗಳ ಕಾಲ ‘ಪರಿಶೀಲನೆ’ ನಡೆಸಿದ್ದರು. ಈ ವಿಷಯವು ಬ್ರಿಟನ್‌ ಸಂಸತ್‌ನಲ್ಲಿಯೂ ಪ್ರತಿಧ್ವನಿಸಿತ್ತು.

‘ಬಿಬಿಸಿಯು ಭಾರತದಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯ ಪ್ರಮಾಣಕ್ಕೂ, ಅದು ಘೋಷಿಸಿರುವ ತನ್ನ ಆದಾಯ ಮತ್ತು ಲಾಭಗಳಿಗೆ ಹೊಂದಿಕೆಯಾಗುತ್ತಿಲ್ಲ’ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.

‘ಬಿಬಿಸಿ ಆಡಳಿತವು ತಾನು ಮಾಡಿರುವ ಕೆಲ ಪಾವತಿಗಳಿಗೆ ಸಂಬಂಧಿಸಿ ತೆರಿಗೆ ಪಾವತಿಸಿಲ್ಲ. ಈ ಪಾವತಿಗಳು ಭಾರತದಲ್ಲಿನ ತನ್ನ ಆದಾಯ ಎಂಬುದನ್ನು ಸಹ ಬಿಬಿಸಿ ಬಹಿರಂಗಪಡಿಸದಿರುವ ಅಂಶ ಪರಿಶೀಲನೆ ಸಂದರ್ಭದಲ್ಲಿ ಕಂಡುಬಂತು’ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT