ಮಂಗಳವಾರ, ನವೆಂಬರ್ 29, 2022
29 °C
ಝೆಲೆನ್‌ಸ್ಕಿ ಹುಟ್ಟೂರು ಕ್ರಿವಿ ರಿಹ್ ಮೇಲೆ ಆತ್ಮಾಹುತಿ ಡ್ರೋನ್‌ ದಾಳಿ

ಝೆಲೆನ್‌ಸ್ಕಿ ಹುಟ್ಟೂರು ಕ್ರಿವಿ ರಿಹ್ ಮೇಲೆ ರಷ್ಯಾದಿಂದ ಆತ್ಮಾಹುತಿ ಡ್ರೋನ್‌ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೀವ್‌ (ಎಪಿ): ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರ ಹುಟ್ಟೂರು ಕ್ರಿವಿ ರಿಹ್ ಮೇಲೆ ರಷ್ಯಾ ಭಾನುವಾರ ನಸುಕಿನಲ್ಲಿ ಆತ್ಮಾಹುತಿ ಡ್ರೋನ್‌ ದಾಳಿ ನಡೆಸಿದೆ. 

ಇದೇ ವೇಳೆ ಕಾರ್ಯತಂತ್ರದ, ಸರಕು ಮತ್ತು ಸಾಗಣೆಯ ತಾಣ ಲೈಮನ್‌ ನಗರವನ್ನು ಉಕ್ರೇನ್ ಮರು ನಿಯಂತ್ರಣಕ್ಕೆ ಪಡೆದಿದ್ದು, ರಷ್ಯಾಕ್ಕೆ ಹಿನ್ನಡೆ ಆಗಿದೆ. ಆತ್ಮಾಹುತಿ ಡ್ರೋನ್ ದಾಳಿಯಲ್ಲಿ ಕ್ರಿವಿ ರಿಹ್‌ನ ಶಾಲೆಯೊಂದು ಮತ್ತು ಎರಡು ಕಟ್ಟಡಗಳು ಧ್ವಂಸಗೊಂಡಿವೆ ಎಂದು ನಿಪ್ರೊಪೆಟ್ರೊವ್‌ಸ್ಕ್‌ ಪ್ರದೇಶದ ಗವರ್ನರ್‌ ವ್ಯಾಲೆಂಟಿನ್ ರೆಜ್ನಿಶೆಂಕೊ ತಿಳಿಸಿದ್ದಾರೆ. ಸಾವು–ನೋವಿನ ಬಗ್ಗೆ ವರದಿಯಾಗಿಲ್ಲ.

ಪ್ರಮುಖ ನಾಲ್ಕು ಪ್ರದೇಶಗಳನ್ನು ಅಕ್ರಮವಾಗಿ ಸೇರಿಸಿಕೊಂಡು, ಅವುಗಳ ಮೇಲಿನ ನಿಯಂತ್ರಣಕ್ಕಾಗಿ ರಷ್ಯಾ ಯುದ್ಧದ ತೀವ್ರತೆ ಹೆಚ್ಚಿಸುತ್ತಿದೆ. ಝಪೊರಿಝಿಯಾ ನಗರ ಗುರಿಯಾಗಿಸಿ ದಾಳಿ ನಡೆಸುತ್ತಿದೆ ಎಂದು ಉಕ್ರೇನ್‌ ಆರೋಪಿಸಿದೆ.

ರಾತ್ರಿಯ ವಿಡಿಯೊ ಭಾಷಣದಲ್ಲಿ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ‘ಲೈಮನ್ ನಗರದಲ್ಲಿ ನಮ್ಮ ರಾಷ್ಟ್ರ ಧ್ವಜ ಹಾರಾಡುತ್ತಿದೆ. ಕಳೆದ ವಾರ ಡಾನ್‌ಬಾಸ್ ಪ್ರದೇಶದಲ್ಲಿ ರಾಷ್ಟ್ರ ಧ್ವಜಗಳು ಹಾರಾಡಿವೆ. ಇನ್ನೂ ಒಂದು ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಧ್ವಜಗಳು ಕಾಣಿಸಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ರಷ್ಯಾ ಇರಾನ್‌ ನಿರ್ಮಿತ ಆತ್ಮಾಹುತಿ ಡ್ರೋನ್‌ಗಳನ್ನು ದಾಳಿಗೆ ಬಳಸುತ್ತಿದೆ. ದಕ್ಷಿಣ ಉಕ್ರೇನ್‌ನಲ್ಲಿ ತಡರಾತ್ರಿ ಇಂತಹ ಐದು ಡ್ರೋನ್‌ಗಳನ್ನು ನಾಶಪಡಿಸಲಾಗಿದೆ. ಭಾನುವಾರ ನಸುಕಿನಲ್ಲಿ ಚೆರ್ನಿಹಿವ್‌ನಲ್ಲಿ ರಷ್ಯಾದ ಶಸ್ತ್ರಾಗಾರ, ಸೇನಾ ಕಮಾಂಡ್ ಪೋಸ್ಟ್‌ಗಳು ಮತ್ತು ವಿಮಾನ ನಿಗ್ರಹದ ಎರಡು ಎಸ್ -300 ವ್ಯವಸ್ಥೆಗಳನ್ನು ವಾಯುಪಡೆ ನಾಶಪಡಿಸಿದೆ ಎಂದು ಉಕ್ರೇನ್‌ ಹೇಳಿಕೊಂಡಿದೆ.

ಯುದ್ಧ ನಿಲ್ಲಿಸಲು ಪುಟಿನ್‌ಗೆ ಪೋ‍ಪ್‌ ಕರೆ

ವ್ಯಾಟಿಕನ್‌ ಸಿಟಿ (ಎಪಿ): ಉಕ್ರೇನ್‌ನಲ್ಲಿ ನಡೆಸುತ್ತಿರುವ ಹಿಂಸಾಚಾರ ಮತ್ತು ಹತ್ಯೆಗಳನ್ನು ಕೊನೆಗೊಳಿಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ಪೋಪ್‌ ಫ್ರಾನ್ಸಿಸ್‌ ಭಾನುವಾರ ಮನವಿ ಮಾಡಿದ್ದಾರೆ.

 ಸೇಂಟ್ ಪೀಟರ್‌ ಚೌಕದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಣ್ವಸ್ತ್ರ ಬಳಕೆಯ ಅಪಾಯವನ್ನು ಅಸಂಬದ್ಧವೆಂದು ಖಂಡಿಸಿದರು.

ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರಿಗೂ ಗಂಭೀರವಾದ ಶಾಂತಿ ಪ್ರಸ್ತಾಪಗಳನ್ನು ಇಡುವಂತೆ ಒತ್ತಾಯಿಸಿದ ಪೋಪ್‌, ಏಳು ತಿಂಗಳಿನಿಂದ ನಡೆಯುತ್ತಿರುವ ಈ ಭಯಾನಕ ಯುದ್ಧವನ್ನು ಬಹುದೊಡ್ಡ ದುರಂತವನ್ನು ಕೊನೆಗಾಣಿಸಲು ಎಲ್ಲ ರೀತಿಯ ರಾಜತಾಂತ್ರಿಕ ಕ್ರಮಗಳನ್ನು ಬಳಸುವಂತೆ ವಿಶ್ವ ಸಮುದಾಯಕ್ಕೂ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು