ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಇಷ್ಟವಿಲ್ಲದೆ ಗಂಡಿನ ಕೊರಳು ಸೀಳಿದ ಆಂಧ್ರದ ಪುಷ್ಪಾ!

Last Updated 20 ಏಪ್ರಿಲ್ 2022, 3:53 IST
ಅಕ್ಷರ ಗಾತ್ರ

ಹೈದರಾಬಾದ್‌: ಬಾಳಸಂಗಾತಿಯಾಗಿ ಬರುವ ಹೆಣ್ಣು ಕಣ್ಣು ಮುಚ್ಚಿ, ಸರ್ಪ್ರೈಸ್‌ ಕೊಡುತ್ತೇನೆ ಎಂದು ಹೇಳಿದರೆ ನೀವು ಏನು ಮಾಡುತ್ತೀರಿ? ಮದುವೆ ನಿಶ್ಚಯವಾದ ಹೆಣ್ಣಿನ ಮಾತು ಕೇಳಿ ಕಣ್ಣು ಮುಚ್ಚಿದ ವರನೊಬ್ಬ ಮತ್ತೆಂದೂ ಕಣ್ಣು ಬಿಡದ ಸ್ಥಿತಿಗೆ ತಲುಪಿದ್ದ!

ಮದುವೆಯಾಗಬೇಕಾದ ಗಂಡಿಗೆ ಕಣ್ಣು ಮುಚ್ಚಲು ಹೇಳಿದ ವಿಯ್ಯಪ್ಪು ಪುಷ್ಪಾ(22), ಗಂಟಲು ಸೀಳಿ ಆತನ ಪ್ರಾಣ ತೆಗೆಯಲು ಪ್ರಯತ್ನಿಸಿದ ವಿಚಿತ್ರ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಹೈದರಾಬಾದ್‌ನ ಸಿಎಸ್‌ಐಆರ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿರುವ ಅದ್ದೆಪಲ್ಲಿ ರಾಮ ನಾಯ್ಡು (28) ಅವರಿಗೆ ತಮ್ಮ ಪ್ರೀತಿಯ ಹುಡುಗಿಯಿಂದ ಸರ್ಪ್ರೈಸ್‌ ಬದಲು ದೊಡ್ಡ ಶಾಕ್‌ ಎದುರಾಯಿತು.

ವಿಶಾಖಪಟ್ಟಣಂ ಸಮೀಪದ ಅನಕಾಪಲ್ಲಿ ಜಿಲ್ಲೆಯ ಕೋಮಲಪುಡಿಯಲ್ಲಿ ಸೋಮವಾರ ಈ ಘಟನೆ ನಡೆದಿದೆ. ಅದೃಷ್ಟವಶಾತ್‌ ನಾಯ್ಡು ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮ್ಮ ಸ್ನೇಹಿತರಿಗೆ ಪರಿಚಯಿಸುವುದಾಗಿ ವರನನ್ನು ಕರೆಸಿಕೊಂಡಿದ್ದರು ಪುಷ್ಪಾ. ಇಬ್ಬರೂ ದ್ವಿಚಕ್ರ ವಾಹನದಲ್ಲಿ ಹೊರಟು, ದಾರಿ ಮಧ್ಯೆ ಗಿಫ್ಟ್ ಶಾಪ್‌ವೊಂದರಲ್ಲಿ ಪುಷ್ಪಾ ಏನನ್ನೋ ಖರೀದಿಸಿದರು. ಅದು ಏನೆಂದು ಅನಂತರ ತಿಳಿಸುವುದಾಗಿ ಹೇಳಿ ಪ್ರಯಾಣ ಮುಂದುವರಿಸಿದ್ದರು. ಗುಡ್ಡದ ಬಳಿಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ. ಸ್ನೇಹಿತರೆಲ್ಲ ತಮಗಾಗಿ ಕೇಕ್‌ ತರಲು ಹೋಗಿರುವುದಾಗಿ ಪುಷ್ಪಾ ನಾಯ್ಡುಗೆ ಹೇಳಿದ್ದರು.

ಆಶ್ರಮವೊಂದರ ಸಮೀಪದಲ್ಲಿರುವ ಆ ಜಾಗ ಸುಂದರವಾಗಿದ್ದರೂ, ಮಧ್ಯಾಹ್ನದ ಹೊತ್ತು ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆ ವಿರಳ.

ಕಣ್ಣು ಮುಚ್ಚಿಕೊಳ್ಳುವಂತೆ ಹೇಳಿದ ಪುಷ್ಪಾ, 'ನನಗಾಗಿ ಗಿಫ್ಟ್ ಇರುವುದಾಗಿ ಹೇಳಿದಳು. ನಾನು ಕಣ್ಣು ಮುಚ್ಚಲು ಯೋಚಿಸುತ್ತಿರುವಾಗಲೇ, ಆಕೆ ತನ್ನ ಕೊರಳಪಟ್ಟಿಯಿಂದ ನನ್ನ ಕಣ್ಣುಗಳನ್ನು ಮುಚ್ಚಿದಳು. ನಾನು ಅದನ್ನು ತೆಗೆಯುವಷ್ಟರಲ್ಲಿ ನನ್ನ ಕೊರಳಿನಿಂದ ರಕ್ತ ಹರಿಯುತ್ತಿರುವುದು ಗೊತ್ತಾಯಿತು. ಕೂಡಲೇ 108 ಆಂಬುಲೆನ್ಸ್ ಸೇವೆಗೆ ಹಾಗೂ ಸಂಬಂಧಿಯೊಬ್ಬರಿಗೆ ಕರೆ ಮಾಡಿದೆ. ಆಗ ಆಕೆಗೆ ಗಾಬರಿಯಾಯಿತು, ಇಬ್ಬರೂ ಗುಡ್ಡದಿಂದ ಸ್ಕೂಟಿಯಲ್ಲಿ ಕೆಳಗೆ ಬಂದೆವು. ನನಗೆ ಮುಂದೆ ಸಾಗಲು ಸಾಧ್ಯವಾಗದಾಯಿತು. ಅಲ್ಲಿದ್ದ ಇಬ್ಬರು ನಮ್ಮನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು' ಎಂದು ನಾಯ್ದು ಘಟನೆಯನ್ನು ವಿವರಿಸಿದರು.

ಇದೊಂದು ಆಕಸ್ಮಿಕ ಘಟನೆ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ ಪುಷ್ಪಾ ನಂತರ, ತಪ್ಪೊಪ್ಪಿಕೊಂಡಿದ್ದಾರೆ. ಅವರು ಕೃತ್ಯಕ್ಕೆ ಬಳಸಿದ ಚಾಕು ವಶಪಡಿಸಿಕೊಳ್ಳಲಾಗಿದ್ದು, ಕೊಲೆಯತ್ನದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದೇ ಜಾತಿಗೆ ಸೇರಿದವರಾದ ಪುಷ್ಪಾ ಮತ್ತು ನಾಯ್ಡುಗೆ ಏಪ್ರಿಲ್‌ 4ರಂದು ನಿಶ್ಚಿತಾರ್ಥ ನೆರವೇರಿತ್ತು ಹಾಗೂ ಮೇ 20ಕ್ಕೆ ಮದುವೆ ನಿಗದಿಯಾಗಿತ್ತು. ಮದುವೆಯಿಂದ ತಪ್ಪಿಸಿಕೊಳ್ಳಲು ಪುಷ್ಪಾ ಈ ರೀತಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT