ಸೋಮವಾರ, ಮೇ 23, 2022
30 °C
ಸಿ.ಎಂ ಮನೆಯಲ್ಲೇ ಹನುಮಾನ್ ಚಾಲೀಸಾ ಪಠಿಸಲಿ–ಶಾಸಕ ರವಿ ರಾಣಾ

ಬೆಲೆ ಏರಿಕೆ ಬಗ್ಗೆ ಚರ್ಚಿಸಲು ಧ್ವನಿವರ್ಧಕ ಬಳಸಿ: ಆದಿತ್ಯ ಠಾಕ್ರೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಧ್ವನಿವರ್ಧಕಗಳಲ್ಲಿ ‘ಹನುಮಾನ್ ಚಾಲೀಸಾ’ ಪಠಣದ ವಿವಾದವು ಮಹಾರಾಷ್ಟ್ರದ ರಾಜಕಾರಣದಲ್ಲಿ ಮತ್ತಷ್ಟು ಕಾವೇರಿಸಿದ್ದು, ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಆದಿತ್ಯ ಠಾಕ್ರೆ ಅವರು, ‘ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹಿಂದಿನ ಕಾರಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಧ್ವನಿವರ್ಧಕಗಳನ್ನು ಬಳಸಬೇಕು’ ಎಂದು ಶುಕ್ರವಾರ ಸಲಹೆ ನೀಡಿದ್ದರೆ, ಶಾಸಕ ರವಿರಾಣಾ ಅವರು, ‘ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶನಿವಾರ ತಮ್ಮ ನಿವಾಸದಲ್ಲಿ ಹನುಮಾನ್ ಚಾಲೀಸಾ ಪಠಿಸಬೇಕು’ ಎಂದು ಹೇಳಿದ್ದಾರೆ.

‘ಮಹಾರಾಷ್ಟ್ರದ ಮಸೀದಿಗಳಿಂದ ಮೇ 3ರೊಳಗೆ ರಾಜ್ಯ ಸರ್ಕಾರವು ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ ತಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚಿನ ಡೆಸಿಬಲ್ ಮಟ್ಟದಲ್ಲಿ ‘ಹನುಮಾನ್ ಚಾಲೀಸಾ’ ಪಠಿಸಲು ಪ್ರಾರಂಭಿಸುವರು’ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಈಚೆಗೆ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಆದಿತ್ಯ ಠಾಕ್ರೆ, ‘ಧ್ವನಿವರ್ಧಕಗಳಲ್ಲಿ ಬೆಲೆ ಏರಿಕೆಯಂಥ ವಿಷಯಗಳನ್ನು ಚರ್ಚಿಸಬೇಕು’ ಎಂದು ಪರೋಕ್ಷವಾಗಿ ನುಡಿದಿದ್ದಾರೆ.

ಶಾಸಕ ರವಿರಾಣಾ, ‘ಹನುಮಾನ್ ಜಯಂತಿಯಂದು (ಶನಿವಾರ) ಉದ್ಧವ್ ಠಾಕ್ರೆ ಅವರು ತಮ್ಮ ನಿವಾಸ ‘ಮಾತೋಶ್ರೀ’ಯಲ್ಲಿ ಹನುಮಾನ್ ಚಾಲೀಸಾ ಪಠಿಸಬೇಕು. ಒಂದು ವೇಳೆ ಮುಖ್ಯಮಂತ್ರಿ ಅವರು ಪಠಿಸಲು ವಿಫಲವಾದರೆ, ನಾವು ‘ಮಾತೋಶ್ರೀ’ ಹೊರಗೆ ಪಠಿಸುತ್ತೇವೆ’ ಎಂದಿದ್ದಾರೆ. 

‘ಶಿವಸೇನಾದ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಆಲೋಚನೆಗಳು ಮತ್ತು ದೂರದೃಷ್ಟಿಯನ್ನು ಮುಖ್ಯಮಂತ್ರಿಗಳು ಮರೆತಿದ್ದಾರೆ. ಹನುಮಾನ್ ಚಾಲೀಸಾ ಪಠಿಸಿದರೆ ಅವನ್ನು ನೆನಪಿಸಿಕೊಳ್ಳಲು ಸಹಾಯ ಮಾಡುತ್ತದೆ’ ಎಂದೂ ರಾಣಾ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಣಾ ಹೇಳಿಕೆಗೆ ತಿರುಗೇಟು ನೀಡಿರುವ ಶಿವಸೇನಾದ ನಾಯಕಿ ಕಿಶೋರಿ ಪೆಡ್ನೆಕರ್, ‘ಶಿವಸೈನಿಕರಾದ ನಾವು ಇನ್ನೂ ಜೀವಂತವಾಗಿದ್ದೇವೆ. ಯಾವ ಧೈರ್ಯದ ಮೇಲೆ ನೀವು ‘ಮಾತೋಶ್ರೀ’ಗೆ ಬರುತ್ತೀರಿ. ನೋಡುತ್ತಿರಿ ನಮ್ಮ ಶಿವಸೈನಿಕರು ಏನು ಮಾಡುತ್ತಾರೆ’ ಎಂದಿದ್ದಾರೆ.

ರಾಜ್ ಠಾಕ್ರೆ ಅವರು ಶನಿವಾರ ಪುಣೆಯಲ್ಲಿ ನಡೆಯಲಿರುವ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು