ಶುಕ್ರವಾರ, ಜುಲೈ 1, 2022
24 °C

ಉತ್ತರ ಪ್ರದೇಶ: 2022ರ ವಿಧಾನಸಭೆ ಚುನಾವಣೆಯಲ್ಲಿ 300 ಸ್ಥಾನಗಳಲ್ಲಿ ಜಯ -ಬಿಜೆಪಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುವ ಸಲುವಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ನೇತೃತ್ವದಲ್ಲಿ ಬಿಜೆಪಿ ನಾಯಕರ ಸಭೆ ಮಂಗಳವಾರ ನಡೆಯಿತು.

ಸಭೆ ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ, ʼ2022ರ ಚುನಾವಣೆಯಲ್ಲಿ ನಾವು 300 ಸ್ಥಾನಗಳನ್ನು ಗೆಲ್ಲಲ್ಲಿದ್ದೇವೆʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂತೋಷ್‌ ಅವರು ಲಖನೌನಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಸೋಮವಾರ ತಲುಪಿದರು. ಅವರೊಂದಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್‌, ನಾಯಕರಾದ ಜೆಪಿಎಸ್‌ ರಾಥೋರ್‌ ಮತ್ತು ಗೋವಿಂದ ನಾರಾಯಣ್‌ ಶುಕ್ಲಾ ಅವರೂ ಇದ್ದರು. ಸಂತೋಷ್‌ ಹಾಗೂ ಪಕ್ಷದ ನಾಯಕರು, ಪಕ್ಷದ ಸಭೆ ಮಾತ್ರವಲ್ಲದೆ ಕೋವಿಡ್‌ ಸಂದರ್ಭದಲ್ಲಿ ತೆರೆಯಲಾಗಿರುವ ಸಹಾಯವಾಣಿ ಮತ್ತು ಇತರ ಕಾರ್ಯಕ್ರಮಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ಶುಕ್ಲಾ ತಿಳಿಸಿದ್ದಾರೆ.

ಮಂಗಳವಾರ ಪಕ್ಷದ ನಾಯಕರೊಂದಿಗೆ ಸಭೆ ನಡೆಸುವುದಕ್ಕೂ ಮುನ್ನ ಕೇಂದ್ರ ಸಚಿವೆ ರಾಧಾ ಮೋಹನ್‌ ಸಿಂಗ್‌ ಅವರೊಂದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಧಿಕೃತ ನಿವಾಸದಲ್ಲಿ ಸೋಮವಾರ ರಾತ್ರಿ ಸಭೆ ಸೇರಿದ್ದರು.

ಕೋವಿಡ್‌ ಪ್ರಕರಣಗಳ ಏರಿಕೆಯಿಂದಾಗಿ ರಾಜ್ಯದ 75 ಜಿಲ್ಲೆಗಳಲ್ಲಿ ಸರ್ಕಾರ ಜಾರಿಗೊಳಿಸಲಾಗಿದ್ದ ಕಠಿಣ ನಿಯಮಾವಳಿ ಸಡಿಲಿಸಲಾಗಿದೆ. ಇದೀಗ 600ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ಇರುವ ಜಿಲ್ಲೆಗಳಲ್ಲಿ ನಿಯಮಗಳನ್ನು ತೆಗೆಯಲಾಗಿದೆ. ಮಂಗಳವಾರವೂ ಮೂರು ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ʼಕೊರೊನಾ ಕರ್ಫ್ಯೂʼ ಮುಕ್ತ ಜಿಲ್ಲೆಗಳ ಸಂಖ್ಯೆ 64ಕ್ಕೇರಿದೆ.

ಆದಾಗ್ಯೂ, ಮೀರತ್‌, ಲಖನೌ, ಸಹರಾನ್‌ಪುರ, ವಾರಣಾಸಿ, ಘಾಜಿಯಾಬಾದ್‌, ಗೋರಖ್‌ಪುರ, ಮುಜಾಫ್ಫರ್‌ನಗರ, ಬರೇಲಿ, ಗೌತಮ್‌ ಬುದ್ಧನಗರ, ಬುಲಂದ್‌ಶಹರ್‌ ಮತ್ತು ಝಾನ್ಸಿ ಜಿಲ್ಲೆಗಳಲ್ಲಿ 600ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ʼಕೊರೊನಾ ಕರ್ಫ್ಯೂʼ ಮುಂದುವರಿದಿದೆ.

ಉತ್ತರ ಪ್ರದೇಶದ 80 ಲೋಕಸಭೆ ಕ್ಷೇತ್ರ ವ್ಯಾಪ್ತಿಯ 403 ವಿಧಾನಸಭೆ ಸ್ಥಾನಗಳಿಗೆ 2022ರಲ್ಲಿ ಚುನಾವಣೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು