ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UP Elections: ಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟಕ್ಕೆ ಬೆಂಬಲ- ಟಿಕಾಯತ್‌

ಬಿಜೆಪಿಗೆ ಮತ ಹಾಕದಂತೆ ರೈತರಿಗೆ ಮನವಿಗೆ ಬಿಕೆಯು ನಿರ್ಧಾರ
Last Updated 16 ಜನವರಿ 2022, 20:18 IST
ಅಕ್ಷರ ಗಾತ್ರ

ಲಖನೌ: ಕೇಂದ್ರ ಸರ್ಕಾರದ ಮೂರು ಕೃಷಿ ನೀತಿಗಳ ವಿರುದ್ಧ ರೈತರ ಹೋರಾಟವನ್ನು ಮುನ್ನಡೆಸಿದ್ದ ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ಸಂಘಟನೆಯು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಮೈತ್ರಿಕೂಟಕ್ಕೆ ಅಧಿಕೃತವಾಗಿ ಬೆಂಬಲ ಸೂಚಿಸಿದೆ. ಈ ಬೆಳವಣಿಗೆಯಿಂದಾಗಿ ಜಾಟ್‌ ಸುಮುದಾಯದ ಪ್ರಾಬಲ್ಯವಿರುವ ಉತ್ತರ ಪ್ರದೇಶದ ಪಶ್ಚಿಮ ಭಾಗದ ರಾಜಕೀಯದಲ್ಲಿ ಗುರುತರ ಬದಲಾವಣೆ ಆಗಲಿದೆ ಎಂದು ಅಂದಾಜಿಸಲಾಗಿದೆ.

ಬಿಕೆಯು ರಾಷ್ಟ್ರೀಯ ಅಧ್ಯಕ್ಷ ನರೇಶ್‌ ಟಿಕಾಯತ್‌ ಅವರುಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆಸಿಸೌಲಿಯ ಕಿಸಾನ್‌ ಭವನದಲ್ಲಿ ನಡೆದ ರೈತರ ಸಭೆಯಲ್ಲಿ ಕೇಳಿಕೊಂಡರು. ಇದೇ ವೇಳೆ, ಮುಜಫ್ಫರ್‌ನಗರ ಜಿಲ್ಲೆಯ ಬುಲ್ದಾನ ಕ್ಷೇತ್ರದ ಅಭ್ಯರ್ಥಿ ರಾಜಪಾಲ್‌ ಬಲಿಯಾನ್‌ ಮತ್ತು ಮೀರಾಪುರ ಕ್ಷೇತ್ರದ ಅಭ್ಯರ್ಥಿ ಚಂದನ್‌ ಚೌಹಾನ್‌ ಅವರಿಗೆ ಬೆಂಬಲ ಪತ್ರವನ್ನೂ ನೀಡಿದರು. ಇದೇ ಜಿಲ್ಲೆಯ ಥಾನ ಭವನ್‌ ಕ್ಷೇತ್ರದ ಅಭ್ಯರ್ಥಿ ಅಶ್ರಫ್‌ ಆಲಿ ಅವರಿಗೂ ಬೆಂಬಲ ಸೂಚಿಸಿದರು.

ಈ ವೇಳೆ ರೈತರನ್ನು ಉದ್ದೇಶಿಸಿ ಮಾತನಾಡಿದ ಟಿಕಾಯತ್‌ ಅವರು, ‘ಇದು ನಮ್ಮ ಹಕ್ಕುಗಳ ಪ್ರಶ್ನೆ. ಈ ಭಾಗದಲ್ಲಿ ಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟದ ಅಭ್ಯರ್ಥಿಗಳೇ ಗೆಲ್ಲುವಂತೆ ಮಾಡೋಣ. ಅವರನ್ನು ವಿರೋಧಿಸುವವರ ಮನವೊಲಿಸಿ’ ಎಂದರು.

ರಾಜ್ಯದ ಬೇರೆಬೇರೆ ಭಾಗಗಳ ರೈತರು ಮತ್ತು ಇತರರಿಗೆ ಬಿಜೆಪಿಯನ್ನು ತಿರುಸ್ಕರಿಸುವಂತೆ ಮನವಿ ಮಾಡಲು ಬಿಕೆಯು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಕೃಷಿ ನೀತಿಗಳನ್ನು ಹಿಂದಕ್ಕೆ ಪಡೆದ ಕಾರಣ ರೈತರ ಬೆಂಬಲವನ್ನು ಪುನಃ ಪಡೆಯಬಹುದು ಎಂದು ಬಿಜೆಪಿ ಅಂದಾಜಿಸಿತ್ತು. ಆದರೆ ಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟಕ್ಕೆ ಬಿಕೆಯುಬೆಂಬಲ ನೀಡಿದ ಕಾರಣ ಬಿಜೆಪಿಗಿದ್ದ ಭರವಸೆಗೆ ಪೆಟ್ಟು ಬಿದ್ದಿದೆ ಎನ್ನಲಾಗಿದೆ.

ಮೈತ್ರಿಕೂಟದ ಮುಸ್ಲಿಂ ಅಭ್ಯರ್ಥಿಯನ್ನು ಬಿಕೆಯು ಬೆಂಬಲಿಸಿರುವುದು, 2013ರ ಮುಜಫ್ಫರ್‌ನಗರ ಕೋಮುಗಲಭೆಯ ಹಿಂದಿನ ಚುನಾವಣಾ ಸಮೀಕರಣವನ್ನು ಸೂಚಿಸುತ್ತದೆ. ಜಾಟ್‌ ಮತ್ತು ಮುಸ್ಲಿಮರ ಮತ ಬ್ಯಾಂಕ್‌ ಹೊಂದಿದ್ದ ಆರ್‌ಎಲ್‌ಡಿಯು ಕೋಮುಗಲಭೆ ಬಳಿಕ ತನ್ನ ನೆಲೆಯನ್ನು ಕಳೆದುಕೊಂಡಿತು. ಈ ಭಾಗದಲ್ಲಿ ಬಿಜೆಪಿ ಭಾರಿ ಯಶಸ್ಸು ಕಂಡಿತು.

ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್‌ ಮೋರ್ಚಾವು (ಎಸ್‌ಎಂಕೆ) ಫೆ.1ರಂದು ‘ಮಿಷನ್‌ ಯುಪಿ’ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವ ಹಿನ್ನೆಲೆಯಲ್ಲಿಯೂ ಬಿಕೆಯು ತೆಗೆದುಕೊಂಡಿರುವ ನಿರ್ಧಾರಕ್ಕೆ ಮಹತ್ವವಿದೆ ಎನ್ನಲಾಗಿದೆ.

ಇದಕ್ಕೂ ಮೊದಲು, ತಮ್ಮ ಮೈತ್ರಿಕೂಟದ ಅಭ್ಯರ್ಥಿ ಆಗಿ ಕಣಕ್ಕಿಳಿಯಬೇಕು ಎಂದುಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟವು ಬಿಕೆಯುನಾಯಕ ರಾಕೇಶ್‌ ಟಿಕಾಯತ್‌ ಅವರಿಗೆ ಕೇಳಿಕೊಂಡಿತ್ತು. ಅವರು ನಿರಾಕರಿಸಿದ ಬಳಿಕ ನರೇಶ್‌ ಟಿಕಾಯತ್‌ ಅವರ ಮಗ ಗೌರವ್‌ ಟಿಕಾಯತ್‌ ಅವರನ್ನು ಕೇಳಿಕೊಂಡಿತ್ತು. ಅವರು ಕೂಡಾ ಈ ಪ್ರಸ್ತಾವನೆಯನ್ನು ನಿರಾಕರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT