ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದಲ್ಲಿ ಹಿಮಪಾತ: 150ಕ್ಕೂ ಅಧಿಕ ಜನರು ಕಣ್ಮರೆ, ಕೇಂದ್ರದಿಂದ ನೆರವು

Last Updated 7 ಫೆಬ್ರುವರಿ 2021, 10:59 IST
ಅಕ್ಷರ ಗಾತ್ರ

ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿರುವ ಹಿನ್ನೆಲೆಯಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದ್ದು, ಪರಿಣಾಮವಾಗಿ ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 150 ಕ್ಕೂ ಹೆಚ್ಚು ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರೊಂದಿಗೆ ಮಾತನಾಡಿದ್ದಾರೆ. ಪ್ರವಾಹದ ಹಿನ್ನೆಲೆಯಲ್ಲಿ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಪ್ರವಾಹ ಪೀಡಿತ ಜನರ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದ್ದು, ಹೆಚ್ಚುವರಿ ಸೇನಾ ಪಡೆಗಳನ್ನು ದೆಹಲಿಯಿಂದ ವಿಮಾನದಲ್ಲಿ ರವಾನಿಸಲಾಗುತ್ತಿದೆ ಎಂದು ಹೇಳಿದರು.

'ನಾನು ಉತ್ತರಾಖಂಡದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಐಟಿಬಿಪಿ ಡಿಜಿ ಮತ್ತು ಎನ್‌ಡಿಆರ್‌ಎಫ್ ಡಿಜಿ ಅವರೊಂದಿಗೆ ಮಾತನಾಡಿದ್ದೇನೆ. ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಜನರನ್ನು ಸುರಕ್ಷಿತಗೊಳಿಸಲು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎನ್‌ಡಿಆರ್‌ಎಫ್‌ ತಂಡಗಳು ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದಾರೆ. 'ದೇವಭೂಮಿಗೆ' ಅಗತ್ಯವಿರುವ ಎಲ್ಲ ರೀತಿಯ ನೆರವನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

'ಎನ್‌ಡಿಆರ್‌ಎಫ್‌ನ ಇನ್ನೂ ಕೆಲವು ತಂಡಗಳನ್ನು ದೆಹಲಿಯಿಂದ ವಿಮಾನದಲ್ಲಿ ಉತ್ತರಾಖಂಡಕ್ಕೆ ಕಳುಹಿಸಲಾಗುತ್ತಿದೆ. ಅಲ್ಲಿನ ಪರಿಸ್ಥಿತಿಯನ್ನು ನಾವು ನಿರಂತರವಾಗಿ ಗಮನಿಸುತ್ತಿದ್ದೇವೆ' ಎಂದು ಶಾ ತಿಳಿಸಿದ್ದಾರೆ.

ಒಟ್ಟು ನಾಲ್ಕು ಎನ್‌ಡಿಆರ್‌ಎಫ್ ತಂಡಗಳನ್ನು (ಸುಮಾರು 200 ಸಿಬ್ಬಂದಿ) ಡೆಹರಾಡೂನ್‌ಗೆ ವಿಮಾನದಲಲ್ಲಿ ಕಳುಹಿಸಲಾಗುತ್ತಿದ್ದು, ಅವರು ಜೋಶಿಮಠವನ್ನು ತಲುಪಲಿದ್ದಾರೆ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಭಾನುವಾರ ಹಿಮಪಾತ ಉಂಟಾಗಿ ಧೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದೆ ಮತ್ತು ಅದರ ದಡದಲ್ಲಿ ವಾಸಿಸುವ ಜನರ ಜೀವಕ್ಕೆ ಅಪಾಯ ಉಂಟಾಗಿದ್ದು, ಬೃಹತ್ ವಿನಾಶದ ಭಯ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT