ಸೋಮವಾರ, ಏಪ್ರಿಲ್ 12, 2021
31 °C
ಮಹಾರಾಷ್ಟ್ರದ ಅರ್ಧದಷ್ಟಿರುವ ಗುಜರಾತ್‌ಗೆ ಸಮ ಪ್ರಮಾಣದ ಕೋವಿಡ್‌ ಲಸಿಕೆ

ಮಹಾರಾಷ್ಟ್ರ: ಕೋವಿಡ್‌ ಲಸಿಕೆ ಕೊರತೆ, ಕೆಲವೆಡೆ ಅಭಿಯಾನ ತಾತ್ಕಾಲಿಕ ಸ್ಥಗಿತ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್‌–19 ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗುತ್ತಿದ್ದು, ಇದರ ಬೆನ್ನಲ್ಲೇ ಕೋವಿಡ್‌ ಲಸಿಕೆ ಮತ್ತು ಔಷಧಗಳ ಕೊರತೆ ಎದುರಾಗಿದೆ. ರಾಜ್ಯದಲ್ಲಿ ಕೇವಲ ಎರಡು ದಿನಗಳಿಗೆ ಮಾತ್ರ ಆಗುವಷ್ಟು ಲಸಿಕೆ ಸಂಗ್ರಹವಿದೆ ಎಂದು ಆರೋಗ್ಯ ಸಚಿವ ರಾಜೇಶ್‌ ಟೋಪೆ ಹೇಳಿದ್ದಾರೆ.

ಈಗಾಗಲೇ ಸಾತಾರಾ, ಸಾಂಗ್ಲಿ ಹಾಗೂ ಪನವೆಲ್‌ ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಕೋವಿಶೀಲ್ಡ್‌, ಕೊವ್ಯಾಕ್ಸಿನ್‌ ಲಸಿಕೆ ಕೊರತೆ ಎದುರಾಗಿದೆ, ಕೇಂದ್ರ ಸರ್ಕಾರ ಕಡಿಮೆ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡಿದೆ ಎಂದು ರಾಜೇಶ್‌ ಟೋಪೆ ಮತ್ತೆ ಗುರುವಾರ ಕೇಂದ್ರದ ವಿರುದ್ಧ ಆರೋಪಿಸಿದ್ದಾರೆ.

'ನಾವು ನಿತ್ಯ 6 ಲಕ್ಷ ಜನರಿಗೆ ಲಸಿಕೆ ಹಾಕುತ್ತಿದ್ದೇವೆ, ನಮಗೆ ತಿಂಗಳಿಗೆ 1.6 ಕೋಟಿ ಲಸಿಕೆ ಡೋಸ್‌ಗಳು ಮತ್ತು ವಾರಕ್ಕೆ ಕನಿಷ್ಠ 40 ಲಕ್ಷ ಡೋಸ್‌ಗಳಷ್ಟು ಲಸಿಕೆ ಅಗತ್ಯವಿದೆ. ಇತರೆ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ಬದಲು, ನಮ್ಮದೇ ಸ್ವಂತ ರಾಜ್ಯಗಳಿಗೆ ಪೂರೈಕೆ ಮಾಡಲಿ. ಕೇಂದ್ರ ಸರ್ಕಾರವು ನಮಗೆ ಸಹಕಾರ ನೀಡುತ್ತಿದೆ, ಆದರೆ ಮಾಡಬೇಕಾದಷ್ಟು ಸಹಾಯವನ್ನು ಮಾಡುತ್ತಿಲ್ಲ' ಎಂದಿದ್ದಾರೆ.

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಪೂರೈಕೆ ಮಾಡುತ್ತಿರುವ ಲಸಿಕೆ ಪ್ರಮಾಣದ ಬಗ್ಗೆ ಪ್ರಸ್ತಾಪಿಸಿ, 'ಜನಸಂಖ್ಯೆ ಹಾಗೂ ಕೋವಿಡ್‌ ಪ್ರಕರಣಗಳೊಂದಿಗೆ ಹೋಲಿಸಿದರೆ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್‌ ಹಾಗೂ ಹರಿಯಾಣ ರಾಜ್ಯಗಳಿಗೆ ಹೆಚ್ಚು ಪ್ರಮಾಣದಲ್ಲಿ ಲಸಿಕೆ ನೀಡಲಾಗುತ್ತಿದೆ. ಆದರೆ, ದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ರಾಜ್ಯಕ್ಕೆ ಏಕೆ ಕಡಿಮೆ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗುತ್ತಿದೆ?' ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.

'ಗುಜರಾತ್‌ನಲ್ಲಿ ಮಹಾರಾಷ್ಟ್ರದ ಅರ್ಧದಷ್ಟು ಜನಸಂಖ್ಯೆ ಇದೆ. ಈವರೆಗೂ ಗುಜರಾತ್‌ 1 ಕೋಟಿ ಡೋಸ್‌ಗಳಷ್ಟು ಲಸಿಕೆ ಪಡೆದಿದೆ, ಆದರೆ ನಮಗೆ 1.04 ಕೋಟಿ ಡೋಸ್‌ಗಳಷ್ಟು ಮಾತ್ರ ಲಸಿಕೆ ದೊರೆತಿದೆ' ಎಂದು ಸಚಿವ ಟೋಪೆ ಅಂಕಿ–ಅಂಶ ತೆರೆದಿಟ್ಟಿದ್ದಾರೆ.

ಬುಧವಾರ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್‌ ಅವರೊಂದಿಗೆ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ ಟೋಪೆ, 'ಮಹಾರಾಷ್ಟ್ರದಲ್ಲಿ ಈಗ 14 ಲಕ್ಷ ಡೋಸ್‌ ಲಸಿಕೆ ಲಭ್ಯವಿದೆ. ಇದು ಮೂರು ದಿನಗಳಿಗೆ ಮಾತ್ರ ಸಾಕಾಗುತ್ತದೆ. ಪ್ರತಿ ವಾರ ನಮಗೆ 40 ಲಕ್ಷ ಡೋಸ್‌ಗಳಷ್ಟು ಲಸಿಕೆ ಅಗತ್ಯವಿದೆ' ಎಂದಿದ್ದರು.

ಲಸಿಕೆ ಕೊರತೆ ಬಗ್ಗೆ ಹೇಳಿಕೆ ನೀಡಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಕಿಡಿಕಾರಿದರು.

'ಲಸಿಕೆ ಕೊರತೆ ಬಗ್ಗೆ ಮಹಾರಾಷ್ಟ್ರದ ಜನಪ್ರತಿನಿಧಿಗಳು ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಸಾಂಕ್ರಾಮಿಕ ಕಾಯಿಲೆ ಹಬ್ಬುತ್ತಿರುವುದನ್ನು ನಿಯಂತ್ರಿಸಲು ಪದೇ ಪದೇ ವಿಫಲವಾಗಿರುವ ಮಹಾರಾಷ್ಟ್ರ ಸರ್ಕಾರ, ಗಮನವನ್ನು ಬೇರೆಡೆ ಸೆಳೆಯಲು ಇಂತಹ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಜನರಲ್ಲಿ ಆತಂಕವನ್ನು ಮೂಡಿಸಲಾಗುತ್ತಿದೆ' ಎಂದು ಬುಧವಾರ ಟೀಕಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು