ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ಮಯಾ ಆತ್ಮಹತ್ಯೆ ಪ್ರಕರಣ: ಪತಿಯನ್ನು ಅಪರಾಧಿ ಎಂದ ಕೋರ್ಟ್‌

ಮಂಗಳವಾರ ತೀರ್ಪು ಪ್ರಮಾಣ ಪ್ರಕಟಿಸುವ ನಿರೀಕ್ಷೆ
Last Updated 23 ಮೇ 2022, 11:08 IST
ಅಕ್ಷರ ಗಾತ್ರ

ಕೊಲ್ಲಂ, ಕೇರಳ: ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಎಸ್‌.ಕಿರಣ್‌ ಕುಮಾರ್‌ನನ್ನು ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಅಪರಾಧಿ ಎಂದು ಕೇರಳದ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಮಂಗಳವಾರ ತೀರ್ಪು ಪ್ರಮಾಣ ಪ್ರಕಟಿಸುವ ನಿರೀಕ್ಷೆ ಇದೆ.

ಕಳೆದ ವರ್ಷ ಜೂನ್‌ನಲ್ಲಿ ಪತಿಯ ಮನೆಯಲ್ಲಿ ವಿಸ್ಮಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ-1 ಸುಜಿತ್ ಕೆ.ಎನ್. ಅವರು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ವರದಕ್ಷಿಣೆ ಕಿರುಕುಳದ ಅಪರಾಧಕ್ಕಾಗಿ ಪತಿಗೆ ಶಿಕ್ಷೆ ವಿಧಿಸಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಜಿ.ಮೋಹನರಾಜ್ ತಿಳಿಸಿದ್ದಾರೆ.

‘ಪ್ರಾಸಿಕ್ಯೂಷನ್ ಮತ್ತು ಅಪರಾಧಿಯ ಪರವಾಗಿ ವಾದವನ್ನು ಆಲಿಸಿದ ನಂತರ ನ್ಯಾಯಾಲಯವು ಮಂಗಳವಾರ ಶಿಕ್ಷೆಯನ್ನು ಪ್ರಕಟಿಸುವ ನಿರೀಕ್ಷೆಯಿದೆ.ಅಪರಾಧಿ ಎಸ್. ಕಿರಣ್ ಕುಮಾರ್‌ಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ನೀಡುವಂತೆ ಕೋರಲಾಗಿದೆ. ಇದು ಸಾಮಾಜಿಕ ಅನಿಷ್ಟದ ವಿರುದ್ಧದ ತೀರ್ಪು‘ಎಂದು ಮೋಹನರಾಜ್‌ ಹೇಳಿದರು.

‘ಮಗಳಿಗೆ ನ್ಯಾಯ ಸಿಕ್ಕಿದೆ. ಪ್ರಾಸಿಕ್ಯೂಷನ್ ಮತ್ತು ತನಿಖಾ ತಂಡದ ಪ್ರಯತ್ನಗಳಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ’ ಎಂದು ವಿಸ್ಮಯಾ ತಂದೆ ಹೇಳಿದ್ದಾರೆ.

‘ಕ್ರಿಮಿನಲ್ ಮೊಕದ್ದಮೆಯಲ್ಲಿ ನ್ಯಾಯಾಲಯದ ತೀರ್ಪು ಏನೇ ಬರಲಿ, ಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ರಾಜ್ಯ ಸಾರಿಗೆ ಸಚಿವ ಆಂಟನಿ ರಾಜು ತೀರ್ಪು ನೀಡುವ ಮೊದಲು ಸುದ್ದಿಗಾರರಿಗೆ ತಿಳಿಸಿದರು.

ಸಹಾಯಕ ಮೋಟಾರು ವಾಹನ ನಿರೀಕ್ಷಕರಾಗಿದ್ದ ಕುಮಾರ್ ಅವರು ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದರು.ಆದರೆ, ಆತನಿಗೆ ಶಿಕ್ಷೆ ವಿಧಿಸುವುದರ ಜತೆಗೆ ಜಾಮೀನು ರದ್ದುಗೊಳಿಸಲಾಗಿದೆ. ಪೊಲೀಸರು ಆತನನ್ನು ನ್ಯಾಯಾಲಯದಿಂದ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ದಿದ್ದು, ಅಲ್ಲಿಂದಲೇ ಮಂಗಳವಾರ ನ್ಯಾಯಾಲಯಕ್ಕೆ ಬರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT