ಭಾನುವಾರ, ಜುಲೈ 3, 2022
27 °C

ಟ್ಯಾಗೋರ್ ’ಹೊರಗಿನವರು’ ಹೇಳಿಕೆಗೆ ಕ್ಷಮೆಯಾಚಿಸಿದ ವಿಶ್ವಭಾರತಿ ಕುಲಪತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ‘ಕವಿ ರವೀಂದ್ರನಾಥ ಟ್ಯಾಗೋರ್ ಅವರೂ ‘ಶಾಂತಿನಕೇತನ’ಕ್ಕೆ ಹೊರಗಿನಿಂದ ಬಂದವರು’ ಎಂಬ ತಮ್ಮ ಹೇಳಿಕೆಗೆ ವಿವಿಧ ವಲಯಗಳಿಂದ ಕಟು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶ್ವಭಾರತಿ ಕುಲಪತಿ ಪ್ರೊ. ವಿದ್ಯುತ್ ಚಕ್ರವರ್ತಿ ಅವರು ಕ್ಷಮೆ ಕೇಳಿದ್ದಾರೆ.

‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಆಗಸ್ಟ್ 23ರಂದು ಪೌಶ್ ಮೇಳ ಮೈದಾನಕ್ಕೆ ಕಾಂಪೌಂಡ್‌ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಕುಲಪತಿ ವಿದ್ಯುತ್ ಚಕ್ರವರ್ತಿ, 'ಬೋಲ್ಪುರದಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದ ಟ್ಯಾಗೋರ್ ಅವರು ಸಹ ಹೊರಗಿನಿಂದ ಬಂದವರು’ ಎಂದು ಹೇಳಿದ್ದರು. ಈ ಹೇಳಿಕೆ ತೀವ್ರ ವಿವಾದ ಪಡೆದುಕೊಂಡಿತ್ತು. ವಿವಿಧ ವಲಯಗಳ ಅನೇಕ ಗಣ್ಯರು ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: ಟ್ಯಾಗೋರರು ಈಗೇಕೆ ನೆನಪಾಗುತ್ತಾರೆ?

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಪೌಶ್ ಮೇಳದ ಮೈದಾನಕ್ಕೆ ಕಾಂಪೌಂಡ್ ನಿರ್ಮಾಣದ ವೇಳೆ ಹೊರಗಿನವರು ಹಾಜರಿದ್ದರು. ಗೋಡೆಗಳ ನಡುವೆ ಕಲಿಕೆ ಟ್ಯಾಗೋರ್ ಅವರು ಪ್ರತಿಪಾದಿಸಿರುವ ಶಿಕ್ಷಣ ಪದ್ಧತಿಗೆ ವ್ಯತಿರಿಕ್ತವಾದದು. ಟ್ಯಾಗೋರ್ ಅವರು ಪ್ರಕೃತಿಯ ಮಧ್ಯೆ ಶಿಕ್ಷಣ ಕಲಿಯಬೇಕು ಎಂಬ ತತ್ವವನ್ನು ಪ್ರತಿಪಾದಿಸಿದ್ದರು’ ಎಂದು ಹೇಳಿದ್ದರು. ಈ ಹೇಳಿಕೆಯಲ್ಲಿರುವ ‘ಹೊರಗಿನವರು’ ಎಂಬ ಪದವನ್ನು ಉಲ್ಲೇಖಿಸಿ ಕುಲಪತಿ ಮಾತನಾಡಿದ್ದರು. 

ಟ್ಯಾಗೋರ್ ಅವರು 1921ರಲ್ಲಿ ವಿಶ್ವಭಾರತಿ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ ಅದಕ್ಕೆ 1951ರಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾನಮಾನ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು