ಮಂಗಳವಾರ, ಏಪ್ರಿಲ್ 13, 2021
32 °C

ಎನ್‌ಡಿಎಗೆ ನೀಡುವ ಮತ ತಮಿಳುನಾಡಿನಲ್ಲಿ ಹೂಡಿಕೆ, ಅಭಿವೃದ್ಧಿಗಾಗಿ: ನರೇಂದ್ರ ಮೋದಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮಧುರೈ: ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ನಗರದಲ್ಲಿ ಆಯೋಜಿಸಿದ್ದ ಪ್ರಚಾರ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನ್ಯಾಷನಲ್‌ ಡೆಮಾಕ್ರಟಿಕ್‌ ಅಲಯನ್ಸ್‌ಗೆ (ಎನ್‌ಡಿಎ) ನೀಡುವ ಮತವು ಈ ಪ್ರದೇಶದಲ್ಲಿ ಸಾಕಷ್ಟು ಹೂಡಿಕೆ ಮತ್ತು ಅಭಿವೃದ್ಧಿಗಾಗಿ ಎಂದು ಹೇಳಿದ್ದಾರೆ.

ʼಎನ್‌ಡಿಎಗೆ ನೀಡುವ ಮತವು ಈ ಪ್ರದೇಶದಲ್ಲಿ ಉತ್ತಮ ಹೂಡಿಕೆಗಾಗಿನ ಮತವಾಗಿದೆ. ಹೆಚ್ಚಿನ ಕೈಗಾರಿಕೆಗಳು ಇಲ್ಲಿಗೆ ಬರುವಂತಾಗಲು, ಮುಖ್ಯವಾಗಿ ರೈತರ ಸಹಕಾರದೊಂದಿಗೆ ಕೃಷಿ ಕೈಗಾರಿಕೆಗಳನ್ನು ತರಲು ನಾವು ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತಿದ್ದೇವೆʼ ಎಂದು ಹೇಳಿದ್ದಾರೆ.

ಮುಂದುವರಿದು, ʼಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಆರ್ಥಿಕ ಕಾರಿಡಾರ್‌ಗಳ ಸರಣಿಯನ್ನು ಘೋಷಿಸಿದ್ದೇವೆ. ಅದರಲ್ಲಿ ಒಂದು ಮಧುರೈ-ಕೊಲ್ಲಂ ಕಾರಿಡಾರ್‌. ರಾಜ್ಯದಲ್ಲಿ ಕೈಗೊಳ್ಳಲಿರುವ ರೈಲ್ವೆ ಮೂಲಸೌಕರ್ಯ ಯೋಜನೆಗಳಿಗಾಗಿ ಮೀಸಲಿಟ್ಟ ಹಣವು 2009ಕ್ಕೆ ಹೋಲಿಸಿದರೆ ದಾಖಲೆಯ ಶೇ. 238 ರಷ್ಟು ಹೆಚ್ಚಾಗಿದೆʼ ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ಜಲಜೀವನ್‌ ಮಿಷನ್‌ ಅನುಷ್ಠಾನದ ಬಗ್ಗೆ ಮಾತನಾಡಿದ ಅವರು, ʼ2024ರ ಹೊತ್ತಿಗೆ ದೇಶದ ಪ್ರತಿ ಮನೆಗೂ ನೀರಿನ ಸಂಪರ್ಕ ಕಲ್ಪಿಸುವ ಸಲುವಾಗಿ ಈ ಯೋಜನೆ ಆರಂಭಿಸಿದೆವು. ಯೋಜನೆ ಜಾರಿಗೆ ಬಂದಾಗಿನಿಂದ ಸುಮಾರು 16 ಲಕ್ಷ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆʼ ಎಂದು ಮಾಹಿತಿ ನೀಡಿದ್ದಾರೆ.

ಮೋದಿ ಅವರು, ಇಲ್ಲಿನ ಜನರು ದೃಢ ಮನಸ್ಸು ಮತ್ತು ವಿಶಾಲ ಹೃದಯಿಗಳು ಎಂದೂ ಹೊಗಳಿದ್ದಾರೆ. ʼವರ್ಷಗಳ ಹಿಂದೆ ನನ್ನ ತವರು ರಾಜ್ಯ ಸೌರಾಷ್ಟ್ರದ ಜನರು ಇಲ್ಲಿಗೆ ಬಂದಿದ್ದಾರೆ. ಅವರಿಗೆಲ್ಲ ಮಧುರೈ ಆಶ್ರಯ ನೀಡಿರುವುದೇ ʼಏಕ್‌ ಭಾರತ್, ಶ್ರೇಷ್ಠ ಭಾರತ್‌ʼ (ಒಂದೇ ಭಾರತ, ಶ್ರೇಷ್ಠ ಭಾರತ) ಎಂಬುದಕ್ಕೆ ಸಮರ್ಪಕವಾದ ಉದಾಹರಣೆʼ ಎಂದು ಶ್ಲಾಘಿಸಿದ್ದಾರೆ.

ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್‌ 6 ರಂದು ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು