ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ: ಮಾಲ್‌, ಜಿಮ್‌, ಸ್ಪಾಗಳು ಬಂದ್‌–ಕೇಜ್ರಿವಾಲ್

Last Updated 15 ಏಪ್ರಿಲ್ 2021, 8:55 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ನಿಯಂತ್ರಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ ವಿಧಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಗುರುವಾರ ಪ್ರಕಟಿಸಿದ್ದಾರೆ.

ಕರ್ಫ್ಯೂ ದಿನಗಳಲ್ಲಿ ಮಾಲ್‌ಗಳು, ಜಿಮ್‌ಗಳು, ಸ್ಪಾಗಳು ಹಾಗೂ ಆಡಿಟೋರಿಯಂಗಳು ಮುಚ್ಚಿರಲಿವೆ. ಚಿತ್ರಮಂದಿರಗಳು ಶೇ 30ರಷ್ಟು ಸೀಟು ಭರ್ತಿಯೊಂದಿಗೆ ಕಾರ್ಯಾಚರಿಸಲಿವೆ ಹಾಗೂ ಜನರು ರೆಸ್ಟೊರೆಂಟ್‌ಗಳಲ್ಲಿ ಕುಳಿತು ಊಟ ಮಾಡಲು ಅವಕಾಶವಿರುವುದಿಲ್ಲ, ಆಹಾರವನ್ನು ಮನೆಗೆ ತಲುಪಿಸಲು ಅವಕಾಶವಿರುತ್ತದೆ ಎಂದು ಸಿಎಂ ಕೇಜ್ರಿವಾಲ್‌ ಹೇಳಿದ್ದಾರೆ.

'ದೆಹಲಿಯ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉಂಟಾಗಿಲ್ಲ, 5000ಕ್ಕೂ ಹೆಚ್ಚು ಹಾಸಿಗೆಗಳು ಲಭ್ಯವಿವೆ' ಎಂದಿದ್ದಾರೆ.

ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಕರ್ಫ್ಯೂ ವಿಧಿಸುವ ಮೂಲಕ ಜನರ ಮುಕ್ತ ಸಂಚಾರಕ್ಕೆ ಕಡಿವಾಣ ಹಾಕಲಾಗುವುದು. ಈ ಮೂಲಕ ಕೊರೊನಾ ಮಹಾಮಾರಿಯ ನಿಯಂತ್ರಣಕ್ಕೆ ಯತ್ನಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

ಅಗತ್ಯ ಸೇವೆಗಳು, ಮದುವೆ ಹಾಗೂ ಇತರೆ ಅನುಮತಿಸಿರುವ ಚಟುವಟಿಕೆಗಳಿಗೆ ಮಾತ್ರ ಕರ್ಫ್ಯೂ ಪಾಸ್‌ಗಳನ್ನು ವಿತರಿಸಲಾಗುತ್ತದೆ. ಪ್ರತಿ ಮುನ್ಸಿಪಲ್‌ ವಲಯದಲ್ಲಿ ದಿನಕ್ಕೆ ಒಂದು ವಾರದ ಸಂತೆ (ಮಾರುಕಟ್ಟೆ) ಮಾತ್ರ ನಡೆಸಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

ಕೇವಲ ಶೇ 30ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ಮೂಲಕ ಚಿತ್ರ ಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅಗತ್ಯ ಸೇವೆಗಳಿಗೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಆಸ್ಪತ್ರೆಗೆ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್‌ ನಿಲ್ದಾಣಗಳಿಗೆ ತೆರಳುವವರನ್ನು ಕರ್ಫ್ಯೂ ವೇಳೆ ತಡೆಯಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕೊರೊನಾ ಸೋಂಕಿತರ ಚಿಕಿತ್ಸೆಗೆ ತೊಂದರೆಯಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿರುವ ಕೇಜ್ರಿವಾಲ್‌, ನಗರದಲ್ಲಿನ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸೌಲಭ್ಯ ಸಹಿತ 5,000 ಹಾಸಿಗೆಗಳು ಲಭ್ಯವಿವೆ. ಆದರೆ, ಕೊರೊನಾ ಸೋಂಕಿತರು ನಿರ್ದಿಷ್ಟ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುವಂತೆ ಬೇಡಿಕೆ ಇರಿಸದೆ ಹಾಸಿಗೆ ಖಾಲಿ ಇರುವ ಕಡೆ ದಾಖಲಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಹೋಟೆಲ್‌ ಮತ್ತು ರೆಸ್ಟೋರಂಟ್‌ಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ. ಆದರೆ, ಆಯಾ ಹೋಟೆಲ್‌ಗಳಿಂದ ಹೋಮ್‌ ಡಿಲೆವರಿಗೆ ಅವಕಾಶ ಕಲ್ಪಿಸಲಾಗುವುದು. ಆಯಾ ಪ್ರದೇಶಗಳಲ್ಲಿನ ಯಾವುದಾದರೂ ಒಂದು ವಾರದ ಸಂತೆಯಲ್ಲಿ ವಹಿವಾಟು ನಡೆಸಲು ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಬೇಕಿದೆ. ಮಾಸ್ಕ್‌, ಸ್ಯಾನಿಟೈಸರ್‌ಗಳ ಕಡ್ಡಾಯ ಬಳಕೆಗೆ ಆದ್ಯತೆ ನೀಡಿ, ಗುಂಪುಗೂಡದೆ ಅಂತರ ಕಾಯ್ದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಬುಧವಾರ ಸಂಜೆಯವರೆಗೆ ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿದ್ದು, ಒಟ್ಟು 17,282 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದ್ದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ತೀವ್ರ ಜ್ವರ, ಕೆಮ್ಮು, ಗಂಟಲು ಕೆರೆತ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 104 ಜನ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗಿಡಾಗಿದ್ದಾರೆ.

ಬುಧವಾರ ಸಂಜೆಯವರೆಗೆ 1,08,534 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಶೇ 15.92ರಷ್ಟು ಜನರಲ್ಲಿ ಸೋಂಕು ಕಂಡುಬಂದಿದೆ. 9,952 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದು, ರಾಷ್ಟ್ರ ರಾಜಧಾನಿ ವಲಯದಲ್ಲಿ ಪ್ರಸ್ತುತ ಒಟ್ಟು 50,736 ಕೊರೊನಾ ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT