ಸೋಮವಾರ, ಆಗಸ್ಟ್ 8, 2022
21 °C

ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರಕ್ಕೆ 24 ಗಂಟೆ ನಿಷೇಧ

ಪಿಟಿಐ Updated:

ಅಕ್ಷರ ಗಾತ್ರ : | |

Mamata Banerjee PTI Photo

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 24 ಗಂಟೆ ಪ್ರಚಾರ ನಡೆಸುವುದಕ್ಕೆ ನಿಷೇಧ ಹೇರಿ ಚುನಾವಣಾ ಆಯೋಗವು ಸೋಮವಾರ ಆದೇಶ ಹೊರಡಿಸಿದೆ. ಸೋಮವಾರ ರಾತ್ರಿ 8ರಿಂದ ಮಂಗಳವಾರ ರಾತ್ರಿ 8ರವರೆಗೆ ನಿಷೇಧ ಜಾರಿಯಲ್ಲಿ ಇರಲಿದೆ.

‘ಧರ್ಮಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಭದ್ರತಾಪಡೆಗಳ ವಿರುದ್ಧ ಮಮತಾ ಬ್ಯಾನರ್ಜಿ ಅವರು ನೀಡಿರುವ ಹೇಳಿಕೆಗಳು ರಾಜ್ಯದಾದ್ಯಂತ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದಿದೆ. ಹೀಗಾಗಿ ಅವರ ಪ್ರಚಾರದ ಮೇಲೆ ನಿಷೇಧ ಹೇರಲಾಗಿದೆ’ ಎಂದು ಚುನಾವಣಾ ಆಯೋಗವು ಹೇಳಿದೆ.

‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವವರೆಗೂ ಮಮತಾ ಅವರು ಇಂತಹ ಹೇಳಿಕೆ ನೀಡಬಾರದು ಎಂದು ಎಚ್ಚರಿಕೆ ನೀಡುತ್ತಿದ್ದೇವೆ’ ಎಂದು ಆಯೋಗವು ಹೇಳಿದೆ.

ಮುಸ್ಲಿಮರು ಒಂದಾಗಬೇಕು. ಬಿಜೆಪಿ ವಿರುದ್ಧ ಮತ ಚಲಾಯಿಸಬೇಕು ಎಂದು ಮಮತಾ ಬ್ಯಾನರ್ಜಿ ಅವರು ಪ್ರಚಾರದಲ್ಲಿ ಹೇಳಿದ್ದರು. ಈ ಹೇಳಿಕೆಯು ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿತ್ತು. ‘ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿ ಎಂದು ಮಮತಾ ಅವರು ಜನರನ್ನು ಪ್ರಚೋದಿಸುತ್ತಿದ್ದಾರೆ’ ಎಂದೂ ಬಿಜೆಪಿ ಮತ್ತೊಂದು ದೂರು ನೀಡಿತ್ತು. ಈ ದೂರುಗಳಿಗೆ ಸಂಬಂಧಿಸಿದಂತೆ ಆಯೋಗವು ಮಮತಾ ಅವರಿಗೆ ಎರಡು ನೋಟಿಸ್ ನೀಡಿತ್ತು. ಎರಡು ನೋಟಿಸ್‌ಗಳಿಗೂ ಮಮತಾ ಉತ್ತರ ನೀಡಿದ್ದರು.

ಈಗ ಚುನಾವಣಾ ಆಯೋಗವು ಈ ಸಂಬಂಧ ಮಮತಾ ಅವರ ಪ್ರಚಾರದ ಮೇಲೆ ನಿಷೇಧ ಹೇರಿ ಕ್ರಮ ತೆಗೆದುಕೊಂಡಿದೆ. ಆಯೋಗದ ಈ ಕ್ರಮವನ್ನು ಟಿಎಂಸಿ ಖಂಡಿಸಿದೆ. ಆಯೋಗವು ಬಿಜೆಪಿಯ ಆಣತಿಯಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ.

‘ಪ್ರಜಾಪ್ರಭುತ್ವದ ಹತ್ಯೆ’

ಬಿಜೆಪಿಯ ಒಂದು ಘಟಕವೇನೋ ಎಂಬಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ. ಈ ನಿಷೇಧವು ನಿರಂಕುಶವಾದ ಕ್ರಮ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತಾವು ಸೋಲುತ್ತೇವೆ ಎಂದು ಬಿಜೆಪಿಗೆ ಮನದಟ್ಟಾಗಿದೆ. ಹೀಗಾಗಿ ಮಮತಾ ಬ್ಯಾನರ್ಜಿ ಅವರು ಪ್ರಚಾರ ಮಾಡುವುದನ್ನು ತಡೆಯುವ ಏಕೈಕ ಉದ್ದೇಶದಿಂದ ಚುನಾವಣಾ ಆಯೋಗವನ್ನು ಬಳಸಿಕೊಂಡು ಈ ನಿಷೇಧ ಹೇರಲಾಗಿದೆ. ನಾಚಿಕೆಯಾಗಬೇಕು

- ಕುನಾಲ್ ಘೋಷ್, ಟಿಎಂಸಿ ನಾಯಕ

***

ಇ.ಸಿ (ಎಲೆಕ್ಷನ್ ಕಮಿಷನ್/ಚುನಾವಣಾ ಆಯೋಗ) ಎಂಬುದನ್ನು ಎಕ್ಸ್‌ಟ್ರೀಮ್ಲಿ ಕಾಂಪ್ರಮೈಸ್ಡ್  ಎಂದು ಕರೆಯಬಹುದು. ಏಪ್ರಿಲ್ 12 ಭಾರತದ ಪ್ರಜಾಪ್ರಭುತ್ವದ ಕರಾಳ ದಿನ

- ಡೆರೆಕ್ ಒಬ್ರಿಯಾನ್, ಟಿಎಂಸಿ ಸಂಸದ

***

ಚುನಾವಣಾ ಆಯೋಗದ ಪ್ರಜಾಸತ್ತಾತ್ಮಕವಲ್ಲದ ಮತ್ತು ಸಂವಿಧಾನಬಾಹಿರವಾದ ಈ ನಿಷೇಧವನ್ನು ಖಂಡಿಸಿ, ಮಂಗಳವಾರ ಮಧ್ಯಾಹ್ನ ಕೋಲ್ಕತ್ತದ ಗಾಂಧಿ ಪ್ರತಿಮೆ ಎದುರು ಧರಣಿ ಕೂರುತ್ತೇನೆ

- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

***

ಓದಿ: 

ಪಶ್ಚಿಮ ಬಂಗಾಳ ವಿಧಾನಸಭೆಗೆ ಶನಿವಾರ ನಡೆದ ನಾಲ್ಕನೇ ಹಂತದ ಮತದಾನವು ಭಾರಿ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಕೂಚ್‌ ಬಿಹಾರ್ ಜಿಲ್ಲೆಯ ಸೀತಾಲಕುಚಿ ಕ್ಷೇತ್ರದ 126ನೇ ಸಂಖ್ಯೆಯ ಮತಗಟ್ಟೆಯಲ್ಲಿ ಘರ್ಷಣೆ ಸಂಭವಿಸಿದ್ದ ವೇಳೆ ಸಿಐಎಸ್‌ಎಫ್‌ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದರು. ಘಟನೆಯು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.

ಮಮತಾ ಬ್ಯಾನರ್ಜಿ ಅವರು ಕೇಂದ್ರದ ಪಡೆಗಳಿಗೆ ಮುತ್ತಿಗೆ ಹಾಕುವಂತೆ ಕರೆ ನೀಡಿದ್ದೇ ಕೂಚ್‌ ಬಿಹಾರ್‌ನಲ್ಲಿ ಜನರು ಸಿಐಎಸ್‌ಎಫ್‌ ಮೇಲೆ ದಾಳಿಗೆ ಮುಂದಾಗಲು ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿದ್ದರು. ಪ್ರಧಾನಿ ನರೇಂದ್ರ ಮೋದಿಯವರೂ ಘಟನೆಗೆ ಮಮತಾರತ್ತಲೇ ಬೊಟ್ಟುಮಾಡಿದ್ದರು.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು