ಭಾನುವಾರ, ಮಾರ್ಚ್ 7, 2021
29 °C

ಜನಸಮೂಹಗಳು ಒಟ್ಟುಗೂಡಿದರೆ ಸರ್ಕಾರವೇ ಬದಲಾಗುತ್ತದೆ: ರಾಕೇಶ್ ಟಿಕಾಯತ್

ಪಿಟಿಐ Updated:

ಅಕ್ಷರ ಗಾತ್ರ : | |

ರೈತ ಮುಖಂಡ ರಾಕೇಶ್ ಟಿಕಾಯತ್

ಸೋನಿಪತ್: ಕೇವಲ ಜನಸಮೂಹವನ್ನು ಒಟ್ಟುಗೂಡಿಸಿದರೆ ಅದರಿಂದ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಆಗುವುದಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಹೇಳಿಕೆಗೆ ರೈತ ಮುಖಂಡ ರಾಕೇಶ್ ಟಿಕಾಯತ್ ಸೋಮವಾರ ಪ್ರತಿಕ್ರಿಯಿಸಿದ್ದು, ಜನರು ಒಟ್ಟುಗೂಡಿದಾಗ ಸರ್ಕಾರಗಳೇ ಬದಲಾಗುತ್ತವೆ ಎಂದು ಹೇಳಿದ್ದಾರೆ.

ಈ ತಿಂಗಳು ಹರಿಯಾಣದಲ್ಲಿ 'ಕಿಸಾನ್ ಮಹಾಪಂಚಾಯತ್'ಗಳ ಸರಣಿಯನ್ನು ನಡೆಸಿದ ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ನಾಯಕ, ಹೊಸ ಕೃಷಿ-ಮಾರುಕಟ್ಟೆ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ಸರ್ಕಾರವು ಅಧಿಕಾರದಲ್ಲಿ ಉಳಿಯುವುದು ಕಷ್ಟಕರವಾಗಿದೆ ಎಂದು ಎಚ್ಚರಿಸಿದ್ದಾರೆ.

ಸೋನಿಪತ್ ಜಿಲ್ಲೆಯ ಖಾರ್ಖೋಡಾದಲ್ಲಿ ರೈತರ 'ಮಹಾಪಂಚಾಯತ್' ಅನ್ನು ಉದ್ದೇಶಿಸಿ ಮಾತನಾಡುವಾಗ, ಕಾನೂನುಗಳನ್ನು ರದ್ದುಗೊಳಿಸುವ ತಮ್ಮ ಬೇಡಿಕೆಗಳನ್ನು ಕೇಂದ್ರವು ಅಂಗೀಕರಿಸುವವರೆಗೂ ಕಾನೂನುಗಳ ವಿರುದ್ಧದ ರೈತರ ಹೋರಾಟವು ಮುಂದುವರಿಯುತ್ತದೆ ಎಂದು ಟಿಕಾಯತ್ ಹೇಳಿದರು.

ಭಾನುವಾರವಷ್ಟೇ ಗ್ವಾಲಿಯರ್‌ನಲ್ಲಿ ಮಾತನಾಡಿದ್ದ ಕೇಂದ್ರ ಕೃಷಿ ಸಚಿವ ತೋಮರ್, ಸ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರೊಂದಿಗೆ ಮಾತನಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಮತ್ತು ಕೇವಲ ಜನಸಮೂಹವನ್ನು ಒಟ್ಟುಗೂಡಿಸುವುದು ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಕಾರಣವಾಗುವುದಿಲ್ಲ. ಈ ಹೊಸ ಕಾನೂನುಗಳಲ್ಲಿ ಯಾವುದು ರೈತ ವಿರೋಧಿಯಾಗಿದೆ ಎಂಬುವ ನಿಬಂಧನೆಗಳನ್ನು ಸರ್ಕಾರಕ್ಕೆ ತಿಳಿಸಬೇಕು ಎಂದು ಕೃಷಿ ಸಂಘಟನೆಗಳನ್ನು ಒತ್ತಾಯಿಸಿದ್ದರು.

ತೋಮರ್ ಹೇಳಿಕೆಗೆ ತಿರುಗೇಟು ನೀಡಿರುವ ಟಿಕಾಯತ್, 'ಕೇವಲ ಜನಸಮೂಹವನ್ನು ಒಟ್ಟುಗೂಡಿಸುವುದು ಶಾಸನಗಳನ್ನು ಹಿಂತೆಗೆದುಕೊಳ್ಳಲು ಕಾರಣವಾಗುವುದಿಲ್ಲ ಎಂದು ಸಚಿವರು ಹೇಳುತ್ತಾರೆ. ಅವರು ತಮ್ಮ ಬುದ್ಧಿಯನ್ನು ಕಳೆದುಕೊಂಡಿದ್ದಾರೆ. ಜನರನ್ನು ಒಟ್ಟುಗೂಡಿಸಿದಾಗ ಸರ್ಕಾರಗಳೇ ಬದಲಾಗುತ್ತವೆ ಎಂದು ಅವರು ರೈತರ ಸಭೆಗೆ ತಿಳಿಸಿದರು.

ಒಂದು ವೇಳೆ ರೈತರು ತಮ್ಮ ಉತ್ಪನ್ನಗಳನ್ನು ತಾವೇ ನಾಶ ಮಾಡಿದರೆ ಆಗ ಅವರ ಮುಂದೆ ಏನೂ ಇಲ್ಲ ಎಂಬುದನ್ನು ಸರ್ಕಾರವು ತಿಳಿದುಕೊಳ್ಳಬೇಕು. ಇದು ಕೃಷಿ ಕಾನೂನುಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅನೇಕ ಪ್ರಶ್ನೆಗಳಿವೆ, ವಿದ್ಯುತ್ (ತಿದ್ದುಪಡಿ) ಮಸೂದೆ, ಬೀಜ ಮಸೂದೆ... ಇವುಗಳಿಗೆ ಅವರು ಯಾವ ರೀತಿಯ ಕಾನೂನುಗಳನ್ನು ತರಲು ಬಯಸುತ್ತಾರೆ? ಎಂದು ಪ್ರಶ್ನಿಸಿದ ಅವರು, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಹೋರಾಟವು ಕೇವಲ ರೈತರಿಗಷ್ಟೇ ಅಲ್ಲ, ಬಡವರು, ದೈನಂದಿನ ಕೂಲಿಕಾರರು ಮತ್ತು ಇತರ ವರ್ಗದವರಿಗೂ ಆಗಿದೆ. ಈ ಕಾನೂನುಗಳು ಬಡವರನ್ನು ನಾಶಮಾಡುತ್ತವೆ. ಇದು ಕೇವಲ ಒಂದು ಕಾನೂನು ಮಾತ್ರವಲ್ಲ, ಈ ರೀತಿಯ ಇನ್ನೂ ಅನೇಕ ಕಾನೂನುಗಳು ಬರುತ್ತವೆ" ಎಂದು ಅವರು ಹೇಳಿದರು.

ಈ ಹೋರಾಟವು ಮುಂದುವರಿಯುತ್ತದೆ ಮತ್ತು ಇದೇ ವೇಳೆಯಲ್ಲೇ ರೈತರು ತಮ್ಮ ಹೊಲಗಳಲ್ಲಿ ಕೆಲಸ ಮಾಡುತ್ತಾರೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಬಗ್ಗೆ ಕಾನೂನನ್ನು ರೂಪಿಸಿದಾಗ ಅದು ರೈತರನ್ನು ರಕ್ಷಿಸುತ್ತದೆ. ಈ ಹೋರಾಟವು ಅದರ ಬಗ್ಗೆ, ಇದು ರೈತರ ಹಕ್ಕುಗಳ ಬಗ್ಗೆ ಎಂದು ಹೇಳಿದರು.

ಕೃಷಿ ಕಾನೂನುಗಳನ್ನು ರದ್ದುಪಡಿಸುವವರೆಗೂ ರೈತರು ಮನೆಗೆ ಹಿಂದಿರುಗಬಾರದು ಮತ್ತು ರೈತರು ತಮ್ಮ ಬೆಳೆದು ನಿಂತಿರುವ ಬೆಳೆಗಳನ್ನು ಕೂಡ ತ್ಯಾಗ ಮಾಡಲು ಸಿದ್ಧರಾಗಿರಬೇಕು ಎಂದು ಇತ್ತೀಚೆಗಷ್ಟೇ ಹೇಳಿದ್ದರು.
ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಕಳೆದ ವರ್ಷ ನವೆಂಬರ್ 28 ರಿಂದ ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಾ ನಿರತ ರೈತ ಒಕ್ಕೂಟಗಳೊಂದಿಗೆ ಸರ್ಕಾರ 11 ಸುತ್ತಿನ ಮಾತುಕತೆ ನಡೆಸಿದ್ದರೂ, ಯಾವುದು ಪ್ರಯೋಜನವಾಗಿಲ್ಲ. ಹರಿಯಾಣ ಮತ್ತು ಉತ್ತರ ಪ್ರದೇಶದ ದೆಹಲಿಯ ಗಡಿಯಲ್ಲಿ ಕೃಷಿ ಕಾನೂನುಗಳ ವಿರುದ್ಧದ ಹೋರಾಟವನ್ನು 40 ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವ ವಹಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು