ಬುಧವಾರ, ಮಾರ್ಚ್ 29, 2023
24 °C

ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಪಾರಂಪರಿಕ ಔಷಧ ಪದ್ಧತಿ ಸಹಕಾರಿ: ಗೆಬ್ರೆಯಸಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಾಮ್‌ನಗರ: ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸುವ ಯೋಜನೆಯಲ್ಲಿ ರಾಷ್ಟ್ರಗಳಿಗೆ ಪಾರಂಪರಿಕ ಔಷಧ ವ್ಯವಸ್ಥೆಯು ಸಹಕಾರಿಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಗೆಬ್ರೆಯಸಸ್ ಅಭಿಪ್ರಾಯಪಟ್ಟರು.

'ಡಬ್ಲ್ಯುಎಚ್‌ಒ ಜಾಗತಿಕ ಪಾರಂಪರಿಕ ಔಷಧ ಕೇಂದ್ರಕ್ಕೆ' (ಜಿಸಿಟಿಎಂ) ಪ್ರಧಾನಿ ನರೇಂದ್ರ ಮೋದಿ, ಗೆಬ್ರೆಯಸಸ್‌ ಹಾಗೂ ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜಗನ್ನಾಥ್‌ ಅವರು ಶಂಕುಸ್ಥಾಪನೆ ನೆರವೇರಿಸಿದರು. ಗುಜರಾತ್‌ನ ಜಾಮ್‌ನಗರದಲ್ಲಿ ಮಂಗಳವಾರ ಕಾರ್ಯಕ್ರಮ ನಡೆಯಿತು.

ಮಾಹಿತಿ, ಆಧಾರಗಳು, ಸುಸ್ಥಿರತೆ ಹಾಗೂ ನಾವೀನ್ಯತೆಯನ್ನು ಗಮನದಲ್ಲಿಟ್ಟು ಪಾರಂಪರಿಕ ಔಷಧಕ್ಕೆ ಬಲ ನೀಡುವ ವಿಜ್ಞಾನವನ್ನು ಜಿಸಿಟಿಎಂ ಕೇಂದ್ರವು ಅಣಿಗೊಳಿಸಲಿದೆ. ಸುರಕ್ಷಿತ, ಗುಣಮಟ್ಟದ ಹಾಗೂ ಪರಿಣಾಮಕಾರಿ ಆರೋಗ್ಯ ಸೇವೆಗಳನ್ನು ಉನ್ನತೀಕರಿಸುವ ಮೂಲಕ ಸಾರ್ವತ್ರಿಕ ಆರೋಗ್ಯ ರಕ್ಷಣೆಯತ್ತ ಮುಂದುವರಿಯಲು ಪಾರಂಪರಿಕ ಔಷಧ ವ್ಯವಸ್ಥೆಯು ಸಹಕಾರಿಯಾಗಲಿದೆ. ಜಾಗತಿಕ ಪಾರಂಪರಿಕ ಔಷಧ ಕೇಂದ್ರವು ವಿಶ್ವ ಮಟ್ಟದ ಯೋಜನೆಯಾಗಿದ್ದು, ಅದರಿಂದಾಗಿ ಪಾರಂಪರಿಕ ಔಷಧಗಳ ಪ್ರಯೋಜನಗಳನ್ನು ವಿಶ್ವದಾದ್ಯಂತ ಜನರಿಗೆ ತಲುಪಿಸಲು ಅನುವಾಗಲಿದೆ ಎಂದು ಗೆಬ್ರೆಯಸಸ್‌ ಹೇಳಿದರು.

ವ್ಯವಸ್ಥಿತ ಮಾಹಿತಿ ಸಂಗ್ರಹ, ಪುರಾವೆಗಳು, ಸಂಶೋಧನೆಗಾಗಿ ಸಿಗದ ಸೂಕ್ತ ಹಣಕಾಸು ಸಹಕಾರ ಹಾಗೂ ಸುರಕ್ಷತೆಯ ಮೇಲೆ ನಿಗಾವಹಿಸಲು ಸಮರ್ಪಕವಾದ ಕಾರ್ಯನೀತಿ ಇಲ್ಲದಿರುವುದು ಸೇರಿದಂತೆ ಹಲವು ಸವಾಲುಗಳಿಂದಾಗಿ ಪಾರಂಪರಿಕ ಔಷಧಗಳ ಸಾಮರ್ಥ್ಯವನ್ನು ಸಂಪೂರ್ಣ ತಿಳಿಯಲು ಸಾಧ್ಯವಾಗಿರುವುದಿಲ್ಲ. ಜಿಸಿಟಿಎಂ, ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಪಾರಂಪರಿಕ ಔಷಧಗಳ ಕೊಡುಗೆಯನ್ನು ಹೆಚ್ಚಿಸಲು 'ಸಮರ್ಥ ಮಾಧ್ಯಮ' ಆಗಲಿದೆ ಎಂದರು.

ಇದನ್ನೂ ಓದಿ–

ಸ್ಥಳೀಯ ಸಂಪನ್ಮೂಲಗಳು ಮತ್ತು ಹಕ್ಕುಗಳನ್ನು ಗೌರವಿಸುವುದು, ಸ್ಥಳೀಯ ಸಮುದಾಯಗಳೊಂದಿಗೆ ಬೌದ್ಧಿಕ ಆಸ್ತಿಯನ್ನು ಹಂಚಿಕೊಳ್ಳುವುದು ಈ ಕೇಂದ್ರದ ಮಿಷನ್‌ನಲ್ಲಿ ಮುಖ್ಯವಾಗಲಿದೆ. ಹೊಸ ಸಂಶೋಧನಾ ವಿಧಾನಗಳು ಹಾಗೂ ಕ್ಲಿನಿಕಲ್‌ ಟ್ರಯಲ್‌ಗಳ ಮೂಲಗಳ ದೇಶದಲ್ಲಿ ತಿಳಿವಳಿಕೆ ವೃದ್ಧಿಸಲು ಕೇಂದ್ರವು ಅನುವಾಗಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಂತದಲ್ಲಿ ಆಧುನಿಕ ಔಷಧ ಪದ್ಧತಿಯೊಂದಿಗೆ ಪಾರಂಪರಿಕ ಔಷಧವನ್ನು ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆಯು ರಾಷ್ಟ್ರಗಳಿಗೆ ನೆರವಾಗಲಿದೆ ಎಂದು ಗೆಬ್ರೆಯಸಸ್‌ ವಿವರಿಸಿದರು.

ಇದನ್ನೂ ಓದಿ–

ಪಾರಂಪರಿಕ ಔಷಧವು ಬೆಳೆಯುತ್ತಿರುವ ಟ್ರಿಲಿಯನ್‌ ಡಾಲರ್‌ ಮೌಲ್ಯದ ಜಾಗತಿಕ ಆರೋಗ್ಯ, ಸೌಂದರ್ಯ ಮತ್ತು ಫಾರ್ಮಾಸ್ಯುಟಿಕಲ್‌ ಇಂಡಸ್ಟ್ರಿಯ ಭಾಗವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್‌–19 ಸಂಶೋಧನಾ ಸಂಗ್ರಹದಲ್ಲಿ ಪಾರಂಪರಿಕ ಔಷಧಗಳಿಗೆ ಸಂಬಂಧಿಸಿದಂತೆ ಸುಮಾರು 2,500 ಉಲ್ಲೇಖಗಳಿವೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು