ಶುಕ್ರವಾರ, ಅಕ್ಟೋಬರ್ 23, 2020
24 °C
ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕೇಂದ್ರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಆರೋಗ್ಯ ಸ್ಥಿತಿ ಗಂಭೀರ; ಐಸಿಯುಗೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮ್‌ವಿಲಾಸ್‌ ಪಾಸ್ವನ್‌

ಪಟ್ನಾ: ಕೇಂದ್ರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು ಅವರನ್ನು ತೀವ್ರ ನಿಗಾ ಘಟಕಕ್ಕೆ(ಐಸಿಯು) ಸ್ಥಳಾಂತರಿಸಲಾಗಿದೆ. ಅನಾರೋಗ್ಯದ ಕಾರಣದಿಂದ ಆ.24ರಂದು ಅವರು ನವದೆಹಲಿಯಲ್ಲಿರುವ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. 

ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಪತ್ರ ಬರೆದಿರುವ ಎಲ್‌ಜೆಪಿ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌, ‘ಕೋವಿಡ್‌–19 ಸಂದರ್ಭದಲ್ಲಿ ಆಹಾರ ಸಚಿವರಾಗಿರುವ ನನ್ನ ತಂದೆ ಕಳೆದ ಐದು ತಿಂಗಳಿಂದ ಬಡವರಿಗೆ ಮತ್ತು ಅಗತ್ಯವಿದ್ದವರಿಗೆ ಪಡಿತರ ತಲುಪುವಂತೆ ನೋಡಿಕೊಳ್ಳುವುದರಲ್ಲಿ ನಿರತರಾಗಿದ್ದರು. ಈ ಕಾರಣದಿಂದಾಗಿ, ಆರೋಗ್ಯದ ಮೇಲೆ ಗಮನಹರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಪ್ರಸ್ತುತ ಅವರು ದೆಹಲಿಯ ಆಸ್ಪತ್ರೆಯಲ್ಲಿ ಕಳೆದ ಮೂರು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಬಿಹಾರಕ್ಕೆ ಹೋಗುವ ಇಚ್ಛೆ ಇತ್ತು. ಅಲ್ಲಿ ಎನ್‌ಡಿಎ ಒಳಗಿನ ಸೀಟು ಹಂಚಿಕೆ ಚರ್ಚೆಯನ್ನು ಅಂತಿಮಗೊಳಿಸುವ ಬಯಕೆ ಇತ್ತು. ಆದರೆ ಅನಾರೋಗ್ಯದ ಕಾರಣದಿಂದ ಇದು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ನಾನೂ ಅವರನ್ನು ಏಕಾಂಗಿಯಾಗಿ ಬಿಟ್ಟು ಬರಲು ಸಾಧ್ಯವಿಲ್ಲ’ ಎಂದಿದ್ದಾರೆ. 

ಚಿರಾಗ್‌, ಬಿಹಾರದಲ್ಲಿ ಎನ್‌ಡಿಎ ಮೈತ್ರಿಯೊಂದಿಗೆ ಇದ್ದರೂ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ವಿರುದ್ಧವಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲು ಬಿಹಾರದಾದ್ಯಂತ ಚಿರಾಗ್‌ ಪ್ರವಾಸವನ್ನೂ ನಡೆಸಿದ್ದರು. ‘ನಿತೀಶ್‌ ಕುಮಾರ್‌ ಅವರು ‘ಸಾತ್ ನಿಶ್ಚಯ್‌’ ಯೋಜನೆಯನ್ನು ಮುಂದಿಟ್ಟುಕೊಂಡು ಹೊರಟಿದ್ದಾರೆ. ಇದು ಎನ್‌ಡಿಎ ರೂಪಿಸಿದ ಯೋಜನೆಯಲ್ಲ. ನಿತೀಶ್‌ ಅವರು ಕಾಂಗ್ರೆಸ್‌ ಹಾಗೂ ಆರ್‌ಜೆಡಿ ಜೊತೆ ಮಹಾಘಟಬಂಧನ್‌ನಲ್ಲಿ ಇದ್ದ ಸಂದರ್ಭದಲ್ಲಿ ರಚಿಸಿದ ಯೋಜನೆ ಇದು’ ಎಂದು ಪತ್ರದಲ್ಲಿ ಚಿರಾಗ್‌ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು