ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವಾರದ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 19 ವರ್ಷದ ಯುವತಿ ಸಾವು

Last Updated 29 ಸೆಪ್ಟೆಂಬರ್ 2020, 5:37 IST
ಅಕ್ಷರ ಗಾತ್ರ

ನವದೆಹಲಿ: ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿದ್ದ ಉತ್ತರ ಪ್ರದೇಶದ 19 ವರ್ಷದ ಯುವತಿಯೊಬ್ಬಳುದೆಹಲಿಯಲ್ಲಿ ಇಂದು ಮೃತಪಟ್ಟಿದ್ದಾಳೆ. ಮೂಳೆ ಮುರಿತ ಮತ್ತು ನಾಲಿಗೆಯು ತುಂಡಾಗಿದ್ದ ಯುವತಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಳು.

ಆಕೆಯನ್ನು ದೆಹಲಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿಡಲಾಗಿತ್ತು. ನಾಲ್ವರು ಅತ್ಯಾಚಾರ ಆರೋಪಿಗಳು ಇದೀಗ ಜೈಲಿನಲ್ಲಿದ್ದಾರೆ. ಮಹಿಳೆಯು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದರೆ, ಅತ್ಯಾಚಾರ ಆರೋಪಿಗಳು ಮೇಲ್ಜಾತಿಯವರು ಎನ್ನಲಾಗಿದೆ.

ಘಟನೆ ಕುರಿತಂತೆ ಉತ್ತರ ಪ್ರದೇಶ ಪೊಲೀಸರು ಆರಂಭದಲ್ಲಿ ಸಹಾಯ ಮಾಡಲಿಲ್ಲ ಆದರೆ ಸಾರ್ವಜನಿಕರ ಆಕ್ರೋಶದ ನಂತರ ಪ್ರತಿಕ್ರಿಯಿಸಿದರು ಎಂದು ಮಹಿಳೆಯ ಕುಟುಂಬ ಆರೋಪಿಸಿದೆ.

ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹಾಥರಸ ಎಂಬ ಹಳ್ಳಿಯಲ್ಲಿ ಸೆಪ್ಟೆಂಬರ್ 14 ರಂದು ಯುವತಿಯ ಮೇಲೆ ಅತ್ಯಾಚಾರ ಎಸಗಲಾಗಿದೆ. ತನ್ನ ಕುಟುಂಬದೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಯುವತಿಯನ್ನು ಆಕೆಯ ದುಪ್ಪಟಾದಿಂದಲೇ ಕಟ್ಟಿ ಪಕ್ಕದ ಹೊಲಕ್ಕೆ ಎಳೆದೊಯ್ದುಅತ್ಯಾಚಾರ ಎಸಗಿ, ಹಲ್ಲೆ ಮಾಡಲಾಗಿದೆ.

ನನ್ನ ತಾಯಿ, ಸಹೋದರಿ ಮತ್ತು ಅಣ್ಣ ಹುಲ್ಲನ್ನು ತರಲೆಂದು ಹೊಲಕ್ಕೆ ಹೋಗಿದ್ದರು. ನನ್ನ ಸಹೋದರ ದೊಡ್ಡದಾದ ಹುಲ್ಲಿನ ಕಟ್ಟಿನೊಂದಿಗೆ ಮೊದಲು ಮನೆಗೆ ಹಿಂತಿರುಗಿದ್ದಾನೆ. ಆದರೆ ನನ್ನ ತಾಯಿ ಮತ್ತು ಸಹೋದರಿ ಹುಲ್ಲನ್ನು ಕತ್ತರಿಸುತ್ತಿದ್ದರು. ಅವರಿಬ್ಬರು ಸ್ವಲ್ಪ ದೂರದಲ್ಲಿದ್ದರು. ಈ ವೇಳೆ ನಾಲ್ಕರಿಂದ ಐದು ಜನರು ಹಿಂದಿನಿಂದ ಬಂದು ದುಪ್ಪಟಾವನ್ನು ನನ್ನ ತಂಗಿಯ ಕುತ್ತಿಗೆಗೆ ಬಿಗಿದು ಸಜ್ಜೆ ಹೊಲಕ್ಕೆ ಎಳೆದೊಯ್ದಿದ್ದಾರೆ ಎಂದು ಯುವತಿಯ ಸೋದರ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಬಳಿಕ ಆಕೆ ಕಾಣಿಸುತ್ತಿಲ್ಲದಿರುವುದನ್ನು ಗಮನಿಸಿದ ನನ್ನ ತಾಯಿಯು ಸುತ್ತ ಮುತ್ತ ಹುಡುಕಾಡಿದ್ದಾರೆ. ಆಗ ನನ್ನ ಸೋದರಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಆಕೆಯ ಮೇಲೆ ಅತ್ಯಾಚಾರ ಮಾಡಿದ್ದರು. ಪೊಲೀಸರು ಆರಂಭದಲ್ಲಿ ತ್ವರಿತವಾಗಿ ಕ್ರಮ ತೆಗೆದುಕೊಳ್ಳಲಿಲ್ಲ. ನಾಲ್ಕೈದು ದಿನಗಳ ನಂತರ ದೂರು ದಾಖಲಿಸಿಕೊಂಡರು ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಪೊಲೀಸರು ಈ ಆರೋಪವನ್ನು ಅಲ್ಲಗಳೆದಿದ್ದು, ನಾವು ಶೀಘ್ರವೇ ಓರ್ವ ಆರೋಪಿಯನ್ನು ಬಂಧಿಸಿದೆವು. ಬಳಿಕ ಇನ್ನುಳಿದ ಮೂವರನ್ನು ಬಂದಿಸಿದ್ದೇವೆ ಎಂದು ಹತ್ರಾಸ್ ಪೊಲೀಸ್ ಠಾಣೆಯ ಅಧಿಕಾರಿ ಪ್ರಕಾಶ್ ಕುಮಾರ್, ಟ್ವೀಟ್ ಮಾಡಿರುವ ವಿಡಿಯೊದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT