ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಬರಮತಿ ಪುನರಾಭಿವೃದ್ಧಿ ವಿರೋಧಿಸಿ ಯಾತ್ರೆ

Last Updated 17 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌: ಮಹಾತ್ಮ ಗಾಂಧಿ ಸ್ಥಾಪಿಸಿದ್ದ ಸಾಬರಮತಿ ಆಶ್ರಮವನ್ನು ಪುನರಾಭಿವೃದ್ಧಿ ಮಾಡುವ ಸರ್ಕಾರದ ಯೋಜನೆಯನ್ನು ವಿರೋಧಿಸಿ, ಗಾಂಧೀವಾದಿಗಳ ಸಂಘಟನೆಗಳ ಗುಂಪೊಂದು ಪ್ರತಿಭಟನಾ ಯಾತ್ರೆ ಹಮ್ಮಿಕೊಂಡಿದೆ.

‘ಸೇವಾಗ್ರಾಮ–ಸಾಬರಮತಿ ಸಂದೇಶ ಯಾತ್ರೆ’ ಹೆಸರಿನ ಈ ಯಾತ್ರೆಗೆ ಭಾನುವಾರ ವಾದ್ರಾದ ‘ಸೇವಾಗ್ರಾಮ’ ಆಶ್ರಮದಿಂದ ಚಾಲನೆ ನೀಡಲಾಗಿದೆ. ಈ ಯಾತ್ರೆ ಅ.23ಕ್ಕೆ ಅಹಮದಾಬಾದ್‌ ತಲುಪಲಿದೆ.

ಸುಮಾರು 50 ಜನರು ಬಸ್‌ ಮೂಲಕ ಯಾತ್ರೆ ಹೊರಟರು. ಸಾಬರಮತಿ ಆಶ್ರಮದ ನಿರ್ವಹಣೆ ಹೊಣೆ ಹೊತ್ತಿರುವ ಸಾಬರಮತಿ ಆಶ್ರಮ ಸಂರಕ್ಷಣೆ ಮತ್ತು ಸ್ಮಾರಕ ಟ್ರಸ್ಟ್‌ನ (ಎಸ್‌ಎಪಿಎಂಟಿ) ಟ್ರಸ್ಟಿಗಳ ಜೊತೆ ಮಾತುಕತೆ ನಡೆಸಿದ ಬಳಿಕ, ಗಾಂಧೀವಾದಿಗಳು ಈ ಯಾತ್ರೆಗೆ ಮುಂದಾಗಿದ್ದಾರೆ.

‘ಸಾಬರಮತಿ ಆಶ್ರಮದ ರೂಪುರೇಷೆಯನ್ನು ಬದಲಿಸಲು ರಾಜ್ಯಮತ್ತು ಕೇಂದ್ರ ಸರ್ಕಾರಗಳು ಯೋಜನೆ ರೂಪಿಸುತ್ತಿವೆ. ಸ್ವಾತಂತ್ರ್ಯಹೋರಾಟದ ಪರಂಪರೆ ಮತ್ತು ಗಾಂಧೀಜಿಯ ಬಳುವಳಿಯನ್ನು, ತಮಗೆ
ಬೇಕಾದ ಹಾಗೆ ಬದಲಿಸಲು ನಾವು ಬಿಡುವುದಿಲ್ಲ’ ಎಂದು ಪ್ರತಿಭಟನಕಾರರು ಹೇಳಿದ್ದಾರೆ.

ಗಾಂಧಿ ಸ್ಮಾರಕ ನಿಧಿ, ಗಾಂಧಿ ಶಾಂತಿ ಪ್ರತಿಷ್ಠಾನ, ಸರ್ವ ಸೇವಾ ಸಂಘ, ಸೇವಾಗ್ರಾಮ ಆಶ್ರಮ ಪ್ರತಿಷ್ಠಾನ, ಸರ್ವೋದಯ ಸಮಾಜ, ರಾಷ್ಟ್ರೀಯ ಗಾಂಧಿ ಸಂಗ್ರಹಾಲಯ, ನೈ ತಾಲಿಮ್‌ ಸಮಿತಿ, ನ್ಯಾಷನಲ್‌ ಯುತ್‌ ಆರ್ಗನೈಸೇಷನ್‌, ಜಲ್‌ ಬಿರಾದರಿ, ಮಹಾರಾಷ್ಟ್ರ ಸರ್ವೋದಯ ಮಂಡಲ್‌ ಮತ್ತು ಗುಜರಾತ್‌ನ ಹಲವಾರು ಸರ್ವೋದಯ ಸಂಸ್ಥೆಗಳ ಸದಸ್ಯರು ಈ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಗುಜರಾತ್‌ನ ಹಲವಾರು ಗಣ್ಯ ವ್ಯಕ್ತಿಗಳು ಹಾಗೂ ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ ಸಂಜಯ್‌ ಸಿಂಗ್‌ ಭಾಗವಹಿಸಲಿದ್ದಾರೆ. ಅವರ ಜೊತೆಗೆ ಕುಮಾರ್‌ ಪ್ರಶಾಂತ್‌, ರಾಮಚಂದ್ರ ರಾಹಿ, ಸಂಜಯ್‌ ಸಿಂಗ್‌ ರಾಜೇಂದ್ರ ಸಿಂಗ್‌ ಅವರು ಪಾಲ್ಗೊಳ್ಳಲಿದ್ದಾರೆ.

ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷೆ ರಾಹಿ, ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಕುಮಾರ್‌ ಪ್ರಶಾಂತ್‌ ಅವರು ಕಳೆದ ಅ.5ರಂದು ಎಸ್‌ಎಪಿಎಂಟಿ ಅಧ್ಯಕ್ಷೆ ಇಳಾ ಭಟ್‌, ಖಜಾಂಚಿಗಳಾದ ಸುದರ್ಶನ್ ಐಯ್ಯಂಗಾರ್‌ ಮತ್ತು ಇತರರ ಜೊತೆ ಸಭೆ ನಡೆಸಿ ಈ ಪ್ರತಿಭಟನೆಯ ಹಮ್ಮಿಕೊಳ್ಳುವ ಕುರಿತು ನಿರ್ಧರಿಸಿದ್ದರು. ಸರ್ಕಾರದ ಈ ಯೋಜನೆಗೆ, ಎಸ್‌ಎಪಿಎಂಟಿ ಈಗಾಗಲೇ ತಾತ್ವಿಕ ಅನುಮೋದನೆ ಅನುಮತಿ ನೀಡಿದೆ.

ಸರ್ಕಾರದಿಂದ ಎಸ್‌ಎಪಿಎಂಟಿಗೆ ಪತ್ರ

ಯಾತ್ರೆ ಆರಂಭವಾದ ಬೆನ್ನಲ್ಲೇ, ಸಾಬರಮತಿ ಆಶ್ರಮಕ್ಕೆ ಸಂಬಂಧಿಸಿದ
ಪರಿಕಲ್ಪನೆ ಟಿಪ್ಪಣಿ ನೀಡುವಂತೆ ಸರ್ಕಾರ ತನಗೆ ಪತ್ರ ಬರೆದಿದ್ದಾಗಿ ಎಸ್ಎಪಿಎಂಟಿ ಹೇಳಿದೆ.

ಆಶ್ರಮಕ್ಕೆ ಸಂದರ್ಶಕರು ಬಂದರೆ ಅವರಿಗೆ ಆಶ್ರಮದ ಕುರಿತು ಯಾವ ರೀತಿಯ ‘ಅರ್ಥವಿವರಣೆ, ಪ್ರದರ್ಶನ ಮತ್ತು ಅನುಭವ’ ದೊರಕುತ್ತದೆ ಎಂಬುದರ ಕುರಿತು ಪರಿಕಲ್ಪನೆ ಟಿಪ್ಪಣಿ ರಚಿಸುವಂತೆ ಸರ್ಕಾರ ಸೂಚಿಸಿದೆ ಎಂದು ಎಸ್‌ಎಪಿಎಂಟಿ ಹೇಳಿದೆ.

‘ಒಂದು ವಾರದ ಹಿಂದೆ ಈ ಪತ್ರ ನಮಗೆ ತಲುಪಿದೆ. ₹1,200ಕೋಟಿ ವೆಚ್ಚದಲ್ಲಿ ಗಾಂಧಿ ಆಶ್ರಮ ಸ್ಮಾರಕ ಮತ್ತು ಆಶ್ರಮ ಆವರಣ ಅಭಿವೃದ್ಧಿ ಯೋಜನೆಯನ್ನು ಸರ್ಕಾರ ರೂಪಿಸಿದೆ. ಗಾಂಧಿ ಆಶ್ರಮ ಸ್ಮಾರಕವನ್ನು ದಿನಕ್ಕೆ ಸುಮಾರು 3,000 ಜನರು ಸಂದರ್ಶಿಸುತ್ತಾರೆ. ಇಲ್ಲಿಗೆ ಸರ್ಕಾರ ಮೂಲಸೌಕರ್ಯ ಕಲ್ಪಿಸಲು ನಮ್ಮ ವಿರೋಧವಿಲ್ಲ. ಆದರೆ ಆಶ್ರಮದ ಮೂಲ ಸ್ವರೂಪವನ್ನು ಬದಲಾಯಿಸುವುದನ್ನು ನಾವು ವಿರೋಧಿಸುತ್ತಿದ್ದೇವೆ’ ಎಂದು ಟ್ರಸ್ಟ್‌ ಸದಸ್ಯರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT