ಬೆಂಗಳೂರು: ದ್ವಿತೀಯ ಪಿಯು ಕನ್ನಡ ವಿಷಯದ ಪರೀಕ್ಷೆ ರಾಜ್ಯದ 1,109 ಕೇಂದ್ರಗಳಲ್ಲಿ ಗುರುವಾರ ಶಾಂತಿಯುತವಾಗಿ, ಸುಗಮವಾಗಿ ನೆರವೇರಿತು.
ಹಾಲ್‌ಟಿಕೆಟ್ ಇದ್ದರೂ ಹಾಜರಾತಿ ಕಡಿಮೆ ಇರುವುದರಿಂದ ಪರೀಕ್ಷಾ ಮಂಡಳಿ ಒಎಂಆರ್ ಶೀಟ್ ಕಳುಹಿಸದೆ ಹೊಸಪೇಟೆಯಲ್ಲಿ ಕೆಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗದ ಪ್ರಕರಣ ಹೊರತುಪಡಿಸಿದರೆ ಇತರೆ ಕೇಂದ್ರಗಳಲ್ಲಿ ಯಾವುದೇ ಗೊಂದಲಗಳಿಲ್ಲದೆ ಬೆಳಿಗ್ಗೆ 10.15ಕ್ಕೆ ಆರಂಭವಾದ ಮೊದಲ ದಿನದ ಪರೀಕ್ಷೆ 1.30ಕ್ಕೆ ಸುಗಮವಾಗಿ ಮುಗಿದವು.
ಒಎಂಆರ್ ಶೀಟ್ ಇಲ್ಲದೇ ಪರೀಕ್ಷೆ ಬರೆಯಲು ಸಾಧ್ಯವಾಗದ ವಿಷಯವನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಗಮನಕ್ಕೆ ಅಧಿಕಾರಿಗಳು ತಂದಿದ್ದು, ಮರು ಪರೀಕ್ಷೆಗೆ ಅವಕಾಶ ನೀಡುವ ಭರವಸೆ ದೊರೆತಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದಲ್ಲೇ ಬಂದು ಪರೀಕ್ಷೆ ಬರೆದರು.
ಪರೀಕ್ಷೆಗಳು ಸುಗಮವಾಗಿ ನಡೆಯಲು, ನಕಲು ತಡೆಯಲು ರಚಿಸಲಾಗಿದ್ದ 64 ಜಿಲ್ಲಾ ಜಾಗೃತ ದಳ ಸೇರಿದಂತೆ ಒಟ್ಟು 2,962 ಜಾಗೃತ ದಳಗಳು ಪರೀಕ್ಷಾ ಕೇಂದ್ರಗಳಿಗೆ ನಿರಂತರ ಭೇಟಿ ನೀಡಿ, ಅವಲೋಕನ ನಡೆಸಿದವು.
ತಿಪಟೂರಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್, ವಿದ್ಯಾರ್ಥಿ ಸ್ನೇಹಿಯಾಗಿ ಪರೀಕ್ಷೆಗಳು ನಡೆಯುತ್ತಿವೆ. ಮಾರ್ಚ್ 29ಕ್ಕೆ ಪರೀಕ್ಷೆ ಮುಗಿಯಲಿದ್ದು, ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.