ಬುಧವಾರ, ಮೇ 12, 2021
18 °C

ಶೇ 30ರಷ್ಟು ಬೋಧನಾ ಶುಲ್ಕ ಕಡಿತ: ಸರ್ಕಾರದ ಅಧಿಕೃತ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾಸಗಿ ಶಾಲೆಗಳಲ್ಲಿನ ಬೋಧನಾ ಶುಲ್ಕವನ್ನು ಶೇ 30ರಷ್ಟು ಕಡಿತಗೊಳಿಸಿದ್ದ ಸರ್ಕಾರ ಈ ಸಂಬಂಧ ಶನಿವಾರ ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲ ಮಾದರಿಯ (ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ಇತರೆ) ಖಾಸಗಿ ಶಾಲೆಗಳು ಬೋಧನಾ ಶುಲ್ಕದ ಶೇ 70ರಷ್ಟು ಶುಲ್ಕ
ವನ್ನು ಮಾತ್ರ ಪಡೆಯಲು ಅನುಮತಿಸಿದೆ. ಇಷ್ಟು ಶುಲ್ಕವನ್ನು ಹೊರತುಪಡಿಸಿ ಶಾಲಾಭಿವೃದ್ಧಿ ಶುಲ್ಕ, ಇತರೆ ಐಚ್ಛಿಕ ಶುಲ್ಕ ಸೇರಿದಂತೆ ಪೋಷಕರಿಂದ ಬೇರೆ ಯಾವುದೇ ರೀತಿಯ ಶುಲ್ಕವನ್ನಾಗಲಿ ಹಾಗೂ ಶಿಕ್ಷಣ ಸಂಸ್ಥೆಗಳ ಟ್ರಸ್ಟ್, ಸೊಸೈಟಿಗಳಿಗೆ ವಂತಿಗೆಯನ್ನಾಗಲಿ ಸ್ವೀಕರಿಸುವಂತಿಲ್ಲ ಎಂದು ಹೇಳಿದೆ.

ಸರ್ಕಾರ ನಿಗದಿಪಡಿಸಿರುವ ಶುಲ್ಕ ಪಾವತಿಸಲು ಪೋಷಕರಿಗೆ ಕನಿಷ್ಠ ಎರಡು ಕಂತುಗಳ ಅವಕಾಶ ಕಲ್ಪಿಸಬೇಕು. ಯಾವುದೇ ಪೋಷಕರು ಈಗಾಗಲೇ ಪೂರ್ಣ ಶುಲ್ಕ ಪಾವತಿಸಿದ್ದರೆ ಅಥವಾ ನಿಗದಿತ ಶುಲ್ಕಕ್ಕಿಂತ ಹೆಚ್ಚು ಶುಲ್ಕ ಪಾವತಿಸಿದ್ದರೆ ಹೆಚ್ಚುವರಿ ಶುಲ್ಕವನ್ನು ಪೋಷಕರಿಗೆ ಹಿಂತಿರುಗಿಸಬಹುದು ಅಥವಾ 2021–22ನೇ ಶೈಕ್ಷಣಿಕ ಸಾಲಿನ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕು.

ದೂರು ನೀಡಲು ಸಮಿತಿಗಳ ರಚನೆ: ಯಾವುದೇ ಶಾಲೆಗಳು ಸರ್ಕಾರದ ಆದೇಶ ಪಾಲಿಸದೆ ಇದ್ದಲ್ಲಿ ಪೋಷಕರು ಶುಲ್ಕ ಪಾವತಿ ಸಂಬಂಧ ದೂರು, ತಕರಾರು ಸಲ್ಲಿಸಲು ಸಮಿತಿಗಳನ್ನು ರಚಿಸಲಾಗಿದೆ. ಬೆಂಗಳೂರು ನಗರದ ಶಾಲೆಗಳಿಗೆ ಸಂಬಂಧಿಸಿದ ತಕರಾರುಗಳನ್ನು ಇಲಾಖೆಯ ವಲಯವಾರು ನಿರ್ದೇಶಕರುಗಳಿಗೆ, ಇತರೆ ಜಿಲ್ಲೆಗಳ ದೂರುಗಳನ್ನು ಜಿಲ್ಲಾ ಡಯಟ್ ಪ್ರಾಂಶುಪಾಲರ ನೇತೃತ್ವದ ಸಮಿತಿಗೆ ನೀಡಬಹುದು.

ಶುಲ್ಕ ಕಡಿತ: ಕೋರ್ಟ್‌ನತ್ತ ಖಾಸಗಿ ಶಾಲೆಗಳ ಚಿತ್ತ

ಬೆಂಗಳೂರು: ಖಾಸಗಿ ಶಾಲೆಗಳಲ್ಲಿನ ಪ್ರಸಕ್ತ ಸಾಲಿನ ಬೋಧನಾ ಶುಲ್ಕವನ್ನು ಶೇ 30ರಷ್ಟು ಕಡಿತಗೊಳಿಸಿ ಆದೇಶ ಹೊರಡಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು, ಈ ಆದೇಶವನ್ನು ನ್ಯಾಯಾಲಯದ ಗಮನಕ್ಕೆ ತರಲು ನಿರ್ಧರಿಸಿವೆ.

‘ರಾಜಕೀಯವಾಗಿ ಹೆಚ್ಚು ಪ್ರಚಾರ ಪಡೆಯುವ ಉದ್ದೇಶದಿಂದ ಬೋಧನಾ ಶುಲ್ಕ ಕಡಿತಗೊಳಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಶುಲ್ಕಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣವು ನ್ಯಾಯಾಲಯದಲ್ಲಿ ಇದೆ. ಈಗ ಕಾನೂನು ತಜ್ಞರ ಸಲಹೆ ಪಡೆದು, ಮಂಗಳವಾರ ಅಥವಾ ಬುಧವಾರ ನ್ಯಾಯಾಲಯಕ್ಕೆ ಈ ಸಂಬಂಧ ಮತ್ತೊಂದು ಅರ್ಜಿ ಸಲ್ಲಿಸಲಾಗುವುದು’ ಎಂದು ಕರ್ನಾಟಕ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೇ 30ರಷ್ಟು ಶುಲ್ಕ ಕಡಿತ ಎಂದು ಸರ್ಕಾರ ಹೇಳಿದ್ದರೂ, ಬೇರೆ ಬೇರೆ ಅಂಶಗಳು ಸೇರಿ ಶೇ 50ರಿಂದ ಶೇ 60ರಷ್ಟು ಶುಲ್ಕ ಕಡಿಮೆಯಾಗುತ್ತದೆ. ಎಲ್‌ಕೆಜಿ, ಯುಕೆಜಿ ಅಥವಾ ಎಂಟನೇ ತರಗತಿಯಂತಹ ಪ್ರಾರಂಭಿಕ ತರಗತಿಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ತೀರಾ ಕಡಿಮೆ ಇದೆ. ಈ ಸಂದರ್ಭದಲ್ಲಿ ಶುಲ್ಕವನ್ನೂ ಕಡಿತಗೊಳಿಸಿರುವುದು ಸರಿಯಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಧೋರಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಖಾಸಗಿ ಶಾಲೆಗಳಿಗೆ ಈ ರೀತಿ ಆದೇಶಿಸುವುದು ಸರಿಯಲ್ಲ. ಕೆಲವು ಶಾಲೆಗಳಲ್ಲಿ ಲಕ್ಷಗಟ್ಟಲೇ ಶುಲ್ಕವಿದ್ದರೆ, ಕೆಲವು ಶಾಲೆಗಳು ₹15 ಸಾವಿರದಿಂದ ₹20 ಸಾವಿರ ಶುಲ್ಕ ಪಡೆಯುತ್ತವೆ. ಕೆಲವು ಶಾಲೆಗಳಿಗೆ ತಿಂಗಳಿಗೆ ಇಂತಿಷ್ಟು ಶುಲ್ಕ ಪಡೆಯಲಾಗುತ್ತದೆ. ಬಹುತೇಕ ಶಿಕ್ಷಕರು ಮಾಸಿಕ ಶುಲ್ಕವನ್ನೇ ಅವಲಂಬಿಸಿರುತ್ತಾರೆ. ಶಿಕ್ಷಕರಿಗೆ ವೇತನ ಪಾವತಿಸುವುದೂ ಕಷ್ಟವಾಗುತ್ತದೆ’ ಎಂದೂ ಅವರು ಹೇಳಿದರು.

‘ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಯಾವುದೇ ಸಹಕಾರ ನೀಡುವುದಿಲ್ಲ. ಆರ್‌ಟಿಇ ಹಣ ಮರುಪಾವತಿಸಲೂ ವರ್ಷಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು