ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

41 ಎಕರೆ ಭೂ ದಾಖಲೆ ಕಳವು: ವಿಶೇಷ ತಹಶೀಲ್ದಾರ್‌ ಸೇರಿ 6 ಮಂದಿಯ ವಿರುದ್ಧ ಎಫ್‌ಐಆರ್

Last Updated 19 ಅಕ್ಟೋಬರ್ 2020, 20:04 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕುಂಬಳಗೋಡು ಗ್ರಾಮದಲ್ಲಿರುವ ₹125 ಕೋಟಿ ಮೌಲ್ಯದ 41 ಎಕರೆ ಮುಫತ್‌ ಕಾವಲ್‌ ಜಮೀನಿಗೆ ಸಂಬಂಧಿಸಿದ ಮೂಲ ಕಡತವೇ ಕಳವಾಗಿರುವ ‘ಪವಾಡ’ ನಡೆದಿದೆ!

ಈ ದಾಖಲೆಗಳು ಕಳವಾಗಿವೆ ಎಂದು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಬಸವರಾಜು ಅವರು ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ವಿಶೇಷ ತಹಶೀಲ್ದಾರ್‌ ಲಕ್ಷ್ಮಿ ಸೇರಿದಂತೆ ಆರು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಕುಂಬಳಗೋಡು ಗ್ರಾಮದ ಸರ್ವೆ ಸಂಖ್ಯೆ 158/1, 158/2, 159, 161, 163/1, 162/1ರ (ಹಳೆ ಸರ್ವೆ ಸಂಖ್ಯೆ 86 ) 41 ಎಕರೆಯು ಸರ್ಕಾರಿ ಜಾಗ ಎಂದು ವಿಶೇಷ ಜಿಲ್ಲಾಧಿಕಾರಿಯಾಗಿದ್ದ ಎಸ್‌. ಹೊನ್ನಾಂಬ ಅವರು 2019ರ ಜುಲೈ 25ರಂದು ಆದೇಶ ಹೊರಡಿಸಿದ್ದರು. ಈ ಆದೇಶದ ವಿರುದ್ಧ ಪ್ರತಿವಾದಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಅಲ್ಲಿ ಸರ್ಕಾರದ ಪರವಾಗಿ ಆದೇಶವಾಗಿತ್ತು.

ಆ ಆದೇಶವನ್ನು ಪ್ರಶ್ನಿಸಿ ಪ್ರತಿವಾದಿಗಳು ಹೈಕೋರ್ಟ್‌ನಲ್ಲಿ ಮತ್ತೆ ಮೇಲ್ಮನವಿ ಸಲ್ಲಿಸಿದ್ದರು. 2020ರ ಜೂನ್‌ 8ರಂದು ಪ್ರತಿವಾದಿಗಳ ಪರವಾಗಿ ಹೈಕೋರ್ಟ್‌ ತೀರ್ಪು ನೀಡಿತ್ತು. ಅವರ ಹೆಸರಿಗೆ ಪಹಣಿ ಹಾಗೂ ಮ್ಯುಟೇಷನ್‌ ಮಾಡಿ ಕೊಡುವಂತೆ ವಿಶೇಷ ಜಿಲ್ಲಾಧಿಕಾರಿಗೆ ಹೈಕೋರ್ಟ್‌ ಸೂಚಿಸಿತ್ತು. ಪಹಣಿ ಹಾಗೂ ಮ್ಯುಟೇಷನ್‌ ಮಾಡಿಕೊಡಲು ಸಮಯಾವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲು ವಿಶೇಷ ಜಿಲ್ಲಾಧಿಕಾರಿ ಸಿದ್ಧತೆ ನಡೆಸಿದ್ದರು. ಈ ವೇಳೆ ಮೂಲ ದಾಖಲೆಗಳನ್ನು ಒದಗಿಸುವಂತೆ ವಿಶೇಷ ತಹಶೀಲ್ದಾರ್‌ ಸೇರಿದಂತೆ ಆರು ಮಂದಿಗೆ ಬಸವರಾಜು ಸೂಚಿಸಿದ್ದರು. ಅದಕ್ಕೆ ಈ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದರು.

ಈ ಅಧಿಕಾರಿಗಳು ಪ್ರತಿವಾದಿಗಳಿಗೆ ಅನುಕೂಲ ಮಾಡಿಕೊಡಲು ಮೂಲ ಕಡತವನ್ನು ಕಳ್ಳತನ ಮಾಡಿ ನಂಬಿಕೆ ದ್ರೋಹ ಮಾಡಿದ್ದಾರೆ’ ಎಂದು ಬಸವರಾಜು ದೂರಿನಲ್ಲಿ ತಿಳಿಸಿದ್ದಾರೆ.

‘ಈ ಜಾಗ ಬೆಂಗಳೂರು–ಮೈಸೂರು ಹೆದ್ದಾರಿಯ ಸಮೀಪದಲ್ಲೇ ಇದೆ. ಇಲ್ಲಿ ಎಕರೆಗೆ ಮಾರುಕಟ್ಟೆ ಮೌಲ್ಯ ₹3 ಕೋಟಿಗಳಷ್ಟಿದೆ. ಖಾಸಗಿ ವ್ಯಕ್ತಿಗಳ ಮೇಲೆ ಪಹಣಿ ಮಾಡಿಕೊಡಲು ವರ್ಷಗಳಿಂದ ಒತ್ತಡ ಇದೆ. ಈಗ ತಹಶೀಲ್ದಾರ್‌ ಕಚೇರಿಯ ಅಧಿಕಾರಿಗಳು ಹೈಕೋರ್ಟ್‌ ಆದೇಶದ ನೆಪ ಹೇಳಿ ಪ್ರತಿವಾದಿಗಳ ಹೆಸರಿಗೆ ಪಹಣಿ ಮಾಡಿಕೊಟ್ಟಿದ್ದಾರೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಪ್ರಯತ್ನ ನಡೆದಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಹೊನ್ನಾಂಬ ಆದೇಶದಲ್ಲೇನಿತ್ತು?

ಈ ಜಮೀನಿನ ಹಕ್ಕಿನ ದಾಖಲೆ ನೈಜತೆ ಸಂಬಂಧ ವಿಶೇಷ ಜಿಲ್ಲಾಧಿಕಾರಿ ಅವರು 2019ರಲ್ಲಿ ವಿಚಾರಣೆ ಕೈಗೆತ್ತಿಕೊಂಡಿದ್ದರು. ಪ್ರತಿವಾದಿಗಳಾದ ಜಾರ್ಜ್‌ ಟಿ.ರಾಮಪುರಂ, ಅಬೆ ಟಿ., ಚೆರಿಯನ್‌ ಟಿ., ಜಾನ್‌ ಟಿ., ಥಾಮಸ್‌ ಟಿ., ಇಮ್ಯಾನುಯಲ್‌ ಟಿ., ಜೋಸ್‌ ಟಿ., ಸುನೀತಾ ಪ್ರಭು, ಬಾಬು ರಾವ್ ವಿ.ಪಟೇಲ್‌ ಹಾಗೂ ಕಿಶೋರ್‌ ಎಸ್‌.ಪಟೇಲ್‌ ಎಂಬುವರಿಗೆ ಹೊನ್ನಾಂಬ ನೋಟಿಸ್‌ ನೀಡಿದ್ದರು.

ಸರ್ವೆ ಸಂಖ್ಯೆ 86ರಲ್ಲಿ 161 ಎಕರೆ 31 ಗುಂಟೆ ಇದೆ. ಮೈಸೂರು ರಿವಿಷನ್‌ ಸೆಟಲ್‌ಮೆಂಟ್‌ ರಿಜಿಸ್ಟರ್‌ (1966ರ ಮಾರ್ಚ್‌ 20) ಪ್ರಕಾರ, ಸರ್ಕಾರಿ ಮುಫತ್ ಕಾವಲ್‌ ಎಂದು ದಾಖಲಾಗಿದೆ.

‘1946ರಲ್ಲಿ 30 ಎಕರೆಯನ್ನು ಹರಾಜಿನಲ್ಲಿ ಪಡೆದಿದ್ದ ವಿ.ಎಸ್‌.ಶಾಸ್ತ್ರಿ, 1952ರಲ್ಲಿ ಜೆ.ಪಿ. ಪುನೀತಾಗೆ ಮಾರಿದ್ದರು. 1964ರಲ್ಲಿ ಗೌಡರ್‌ ಆ್ಯಂಡ್‌ ಕಂಪನಿಯ ಆಡಳಿತ ಪಾಲುದಾರ ಬಿ.ಕೆ.ಶ್ರೀನಿವಾಸನ್‌ಗೆ ಪುನೀತಾ ಮಾರಾಟ ಮಾಡಿದ್ದರು. ಶ್ರೀನಿವಾಸನ್‌ ಅವರು ಅದನ್ನು 10 ಪ್ರತಿವಾದಿಗಳಿಗೆ ಮಾರಿದ್ದರು’ ಎಂದು ಪ್ರತಿವಾದಿಗಳ ಪರ ವಕೀಲರು ವಾದಿಸಿದ್ದರು.

‘ಹರಾಜು ಪ್ರಕ್ರಿಯೆ ಹಾಗೂಶಾಸ್ತ್ರಿ ಅವರಿಗೆ ಸಾಗುವಳಿ ಚೀಟಿ ನೀಡಿರುವ ಯಾವುದೇ ದಾಖಲೆಗಳು ಲಭ್ಯ ಇಲ್ಲ. ಪುನೀತಾ ಹೆಸರು ಪಹಣಿಯಲ್ಲಿ ನಮೂದು ಆಗಿರುವುದಕ್ಕೆ ದಾಖಲೆಗಳು ಇಲ್ಲ. ಶಾಸ್ತ್ರಿಯವರು ಹರಾಜಿನಲ್ಲಿ ಪಡೆದ 30 ಎಕರೆಯು ಮಾರಾಟದ ವೇಳೆ 41 ಎಕರೆಯಾಗಿದ್ದು, ವ್ಯತ್ಯಾಸದ ವಿಸ್ತೀರ್ಣಕ್ಕೆ ಯಾವುದೇ ಪೂರಕ ದಾಖಲೆಗಳು ಇಲ್ಲ. 1969–70 ಹಾಗೂ 1972–73ರ ಅವಧಿಯಲ್ಲಿ ಕೈಬರಹದ ಪಹಣಿಯಲ್ಲಿ ಏಕಾಏಕಿ ಇವರ ಹೆಸರು ನಮೂದು ಆಗಿದೆ. ಬಳಿಕ 2000ನೇ ಸಾಲಿನ ವರೆಗೆ ಅವರ ಹೆಸರು ಸಾಗುವಳಿದಾರರೆಂದು ನಮೂದು ಆಗಿಲ್ಲ. ಜಮೀನು ಸ್ವಾಧೀನತೆ ಸಂಶಯಾಸ್ಪದವಾಗಿದೆ ಹಾಗೂ ನೈಜತೆಯಿಂದ ಕೂಡಿಲ್ಲ. ಹೀಗಾಗಿ, 41 ಎಕರೆಯನ್ನು ಸರ್ಕಾರಿ ಜಾಗ ಎಂಬುದಾಗಿ ನಮೂದಿಸಬೇಕು‘ ಎಂದು ಹೊನ್ನಾಂಬ ಆದೇಶಿಸಿದ್ದರು.

ಯಾರ ವಿರುದ್ಧ ಎಫ್‌ಐಆರ್‌

* ಬೆಂಗಳೂರು ದಕ್ಷಿಣ ತಾಲ್ಲೂಕಿನ ವಿಶೇಷ ತಹಶೀಲ್ದಾರ್‌ ಲಕ್ಷ್ಮಿ

* ನಗರ ಜಿಲ್ಲಾಧಿಕಾರಿ ಕಚೇರಿಯ ಸಮನ್ವಯಕಾರ ಮಹದೇವಸ್ವಾಮಿ

* ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್‌ ಮುರಳಿ

* ಕೆಂಗೇರಿ ವೃತ್ತದ ಕಂದಾಯ ನಿರೀಕ್ಷಕ ಕೆಂಪೇಗೌಡ

* ಜಿಲ್ಲಾಧಿಕಾರಿ ಕಚೇರಿಯ ಪ್ರಥಮದರ್ಜೆ ಸಹಾಯಕ ಜಯಪ್ರಕಾಶ್‌

* ಬೆಂಗಳೂರಿನ ಶಶಿಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT