ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್ಐ ಪರೀಕ್ಷೆ: ಬೆಂಗಳೂರಿನ 7 ಕೇಂದ್ರಗಳಲ್ಲೂ ಅಕ್ರಮ

ನ್ಯಾಯೋಚಿತವಾಗಿ ಪಿಎಸ್ಐ ಪರೀಕ್ಷೆ ನಡೆದಿಲ್ಲ: ಆದೇಶದಲ್ಲಿ ಉಲ್ಲೇಖ
Last Updated 1 ಮೇ 2022, 1:36 IST
ಅಕ್ಷರ ಗಾತ್ರ

ಬೆಂಗಳೂರು: 545 ಪಿಎಸ್‌ಐ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆ ನಡೆದಿದ್ದ ಬೆಂಗಳೂರಿನ 7 ಕೇಂದ್ರಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ಸಂದೇಹ ವ್ಯಕ್ತಪಡಿಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ.

‘ಬೆಂಗಳೂರಿನ 7 ಕೇಂದ್ರಗಳಲ್ಲಿ ಪರೀಕ್ಷೆ ಬರೆದು ಹುದ್ದೆಗೆ ಆಯ್ಕೆಯಾಗಿದ್ದ 22 ಅಭ್ಯರ್ಥಿಗಳ ಒಎಂಆರ್ ಪ್ರತಿಗಳು ಸಂದೇಹಾಸ್ಪದವಾಗಿರುತ್ತವೆ. ಇದರ ಜೊತೆಯಲ್ಲಿ ಹೆಚ್ಚಿನ ಸಂಖ್ಯೆಯ ಒಎಂಆರ್ ಅಸಲಿ ಹಾಗೂ ಕಾರ್ಬನ್ ಪ್ರತಿಗಳನ್ನು ಪರಿಶೀಲಿಸಲಾಗುತ್ತಿದೆ’ ಎಂಬ ಅಂಶವೂ ವರದಿಯಲ್ಲಿವೆ.

ಸಿಐಡಿ ಅಧಿಕಾರಿಗಳು ನೀಡಿರುವ ವರದಿ ಆಧರಿಸಿ ಲಿಖಿತ ಪರೀಕ್ಷೆಯನ್ನೇ ರದ್ದುಪಡಿಸಿರುವ ರಾಜ್ಯ ಸರ್ಕಾರ, ಹೊಸದಾಗಿ ಲಿಖಿತ ಪರೀಕ್ಷೆ ನಡೆಸಲು ಆದೇಶ ಹೊರಡಿಸಿದೆ.

ಆದೇಶದಲ್ಲಿ ಏನಿದೆ?: ‘ಪಿಎಸ್‌ಐ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ನೇಮಕಾತಿಯಲ್ಲಿ ಅಕ್ರಮ ಎಸಗಿರುವುದು, ನ್ಯಾಯೋ ಚಿತವಾಗಿ ನೇಮಕಾತಿ ನಡೆಸದೇ ಇರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಹೀಗಾಗಿ, ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಮರು ಪರೀಕ್ಷೆ ನಡೆಸಲು ತೀರ್ಮಾನಿಸ ಲಾಗಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

‘ರಾಜ್ಯದ 92 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಕಲಬುರಗಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ 11 ಅಭ್ಯರ್ಥಿಗಳ ಪೈಕಿ 8 ಮಂದಿ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.’ ‘ಅಭ್ಯರ್ಥಿಗಳು, ಶಾಲಾ ಸಿಬ್ಬಂದಿ, ವ್ಯವಸ್ಥಾಪಕರು, ಏಜೆಂಟರು ಹಾಗೂ ಇತರರ ಸಹಕಾರದಿಂದ ಪರೀಕ್ಷೆ ಪ್ರಕ್ರಿಯೆಯನ್ನು ಗಣನೀಯವಾಗಿ ದುರ್ಬಲಗೊಳಿಸಿರುವುದು ಸಿಐಡಿ ವಿಚಾರಣೆ ಹಾಗೂ ತನಿಖೆಯಿಂದ ಗೊತ್ತಾಗಿದೆ. ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದ ರೀತಿಯಲ್ಲೇ ಇತರೆ ಪರೀಕ್ಷಾ ಕೇಂದ್ರದಲ್ಲಿ ಅವ್ಯವಹಾರ
ನಡೆದಿರುವುದನ್ನು ತಳ್ಳಿಹಾಕಲಾಗು ವುದಿಲ್ಲ’ ಎಂದೂ ಆದೇಶದಲ್ಲಿ ಹೇಳಲಾಗಿದೆ.

12 ಅಭ್ಯರ್ಥಿಗಳ ಬಂಧನ

ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಎಸಗಿದ್ದ ಆರೋಪದಡಿ 12 ಅಭ್ಯರ್ಥಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

‘ಒಎಂಆರ್ ಪ್ರತಿ ತಿದ್ದಿ ಅಕ್ರಮ ಎಸಗಿದ್ದ ಆರೋಪದಡಿ 22 ಮಂದಿ ವಿರುದ್ದ ಸಿಐಡಿ ಅಧಿಕಾರಿಗಳು ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡು 12 ಮಂದಿ ಯನ್ನು ಬಂಧಿಸಲಾಗಿದೆ. ಇನ್ನೂ 10 ಮಂದಿಯ ಬಂಧನ ಆಗ ಬೇಕಿದೆ. ಈ ಕುರಿತ ತನಿಖೆ ಮುಂದುವರಿದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕಲಬುರಗಿ ಜ್ಞಾನಜ್ಯೋತಿ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ 8 ಅಭ್ಯರ್ಥಿಗಳನ್ನು ಸಿಐಡಿ ಅಧಿಕಾರಿ ಗಳು ಈಗಾಗಲೇ ಬಂಧಿಸಿದ್ದಾರೆ. ಇದೀಗ 12 ಅಭ್ಯರ್ಥಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಪ್ರಕರಣವೂ ಸಿಐಡಿಗೆ ವರ್ಗ ಆಗಲಿದೆ’ ಎಂದೂ ತಿಳಿಸಿವೆ.

ಸಾಕ್ಷ್ಯ ನಾಶ ಮಾಡಲು ಮೊಬೈಲ್‌ ಒಡೆದ ದಿವ್ಯಾ

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಆರೋಪದಡಿ ಬಂಧಿತರಾದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಬಂಧಿಸುವ ಮುನ್ನವೇ ತಮ್ಮ ಮೊಬೈಲ್‌ ಫೋನ್‌ ಒಡೆದು ಹಾಕಿದ್ದಾರೆ. ಅದರಲ್ಲಿಯ ದಾಖಲೆ ಸಿಗಬಾರದು ಎಂಬ ಉದ್ದೇಶ ದಿಂದ ಈ ರೀತಿ ಮಾಡಿರಬಹುದು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ರಾತ್ರಿ ಮಹಾರಾಷ್ಟ್ರದ ಪುಣೆಯ ಬಳಿ ಅವರನ್ನು ಬಂಧಿಸಲು ಸಿಐಡಿ ಅಧಿಕಾರಿಗಳ ತಂಡತೆರಳಿತ್ತು. ದೂರದಿಂದಲೇ ಪೊಲೀಸರನ್ನು ಕಂಡ ದಿವ್ಯಾ, ತಮ್ಮ ಕೈಯಲ್ಲಿದ್ದ ಮೊಬೈಲನ್ನು ಎಸೆದರು. ನೆಲಕ್ಕೆ ಕುಳಿತು ಜೋರಾದ ದನಿಯಲ್ಲಿ ಅಳಲು ಶುರು ಮಾಡಿದರು ಎಂದು ಬಂಧನಕ್ಕೆ ತೆರಳಿದ್ದ ತಂಡದವರು ಮಾಹಿತಿ ನೀಡಿದ್ದಾರೆ. ಆದರೆ, ಎಸೆದ ಮೊಬೈಲ್‌ ಏನಾಯಿತು? ಅದರ ಒಡೆದ ತುಣುಕುಗಳು, ಸಿಮ್‌ಕಾರ್ಡ್‌ ಪೊಲೀಸರಿಗೆ ಸಿಕ್ಕಿವೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

ಬೆಳಿಗ್ಗೆಯಿಂದಲೇ ವಿಚಾರಣೆ: ಸಿಐಡಿ ವಶದಲ್ಲಿರುವ ದಿವ್ಯಾ ಅವರನ್ನು ಶುಕ್ರವಾರ ರಾತ್ರಿ ನಗರದ ಮಹಿಳಾ ನಿಲಯದಲ್ಲಿ ಇರಿಸಲಾಗಿತ್ತು. ಶನಿವಾರ ಸಿಐಡಿ ಅಧಿಕಾರಿಗಳು ಐವಾನ್‌ ಇ ಶಾಹಿ ಅತಿಥಿಗೃಹಕ್ಕೆ ಕರೆತಂದು ವಿಚಾರಣೆ ನಡೆಸಿದರು. ಆದರೆ, ‘ನಾನೇನೂ ತಪ್ಪು ಮಾಡಿಲ್ಲ’ ಎನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ವಿಷಯ ಮಾತನಾಡಿಲ್ಲ ಎನ್ನುವುದು ಅಧಿಕಾರಿಗಳ ಹೇಳಿಕೆ.

ಉಡಾಫೆ: ಇಲ್ಲಿನ ಐವಾನ್‌ ಇ ಶಾಹಿ ಅತಿಥಿಗೃಹದ ಕೋಣೆಯಲ್ಲಿ ನಡೆದ ವಿಚಾರಣೆ ವೇಳೆ, ಶೌಚಕ್ಕಾಗಿ ಪೊಲೀಸ್‌ ಸಿಬ್ಬಂದಿಯೊಂದಿಗೆ ಹೊರಬಂದಿದ್ದ ಆರೋಪಿ ಸುರೇಶ ಕಾಟೇಗಾಂವ, ಹೊರಗೆ ನಿಂತಿದ್ದ ಮಾಧ್ಯಮದವನ್ನು ಕಂಡು ‘ಮಾಡ್ಕೊ ಮಾಡ್ಕೊ ಚೆನ್ನಾಗಿ ಮಾಡ್ಕೊ... (ವಿಡಿಯೊ ಚೆನ್ನಾಗಿ ಮಾಡು)’ ಎಂದು ಲೇವಡಿ ಮಾಡುವ ರೀತಿಯಲ್ಲಿ ಹೇಳಿದರು.

ಎ.ಸಿ ಹಾಕಿಸಿ ಎಂದ ಬೆಂಬಲಿಗರು: ದಿವ್ಯಾ, ಅರ್ಚನಾ, ಸುನಂದಾ ಮತ್ತು ಜ್ಯೋತಿ ಅವರನ್ನು ಶುಕ್ರವಾರ ರಾತ್ರಿ ನಗರದ ಮಹಿಳಾ ನಿಲಯದಲ್ಲಿ ಇರಿಸಲು ಕರೆದೊಯ್ಯಲಾಯಿತು. ಅಷ್ಟೊತ್ತಿಗೆ ಅಲ್ಲಿಗೆ ಬಂದಿದ್ದ ದಿವ್ಯಾ ಅವರ ಕೆಲವು ಬೆಂಬಲಿಗರು, ‘ಈ ನಿಲಯದಲ್ಲಿ ಫ್ಯಾನ್‌ ಮಾತ್ರ ಇದೆ. ಬೇಸಿಗೆಯಲ್ಲಿ ಅವರಿಗೆ ಕಷ್ಟವಾಗುತ್ತದೆ. ಕೂಲರ್‌ ಅಥವಾ ಎ.ಸಿ ವ್ಯವಸ್ಥೆ ಮಾಡಿ’ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ಆಡಳಿತ ಪಕ್ಷದ ನಾಯಕರ ರಕ್ಷಣೆಗೆ ಪ್ರಯತ್ನ: ಡಿಕೆಶಿ

ಬೆಂಗಳೂರು: ‘ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮೊದಲೇ ಪರೀಕ್ಷೆ ರದ್ದು ಮಾಡಿ ಮರುಪರೀಕ್ಷೆಗೆ ಆದೇಶಿಸಿರುವ ಸರ್ಕಾರದ ನಡೆ, ಅಕ್ರಮದಲ್ಲಿ ಭಾಗಿಯಾಗಿರುವ ಆಡಳಿತ ಪಕ್ಷದ ನಾಯಕರ ರಕ್ಷಣೆಯ ಪ್ರಯತ್ನವಾಗಿದೆ. ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾದವರಿಗೆ ಅನ್ಯಾಯವಾಗುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಸರ್ಕಾರದ ಎಲ್ಲ ನೇಮಕಾತಿ ಪ್ರಕ್ರಿಯೆಯಲ್ಲೂ ಭ್ರಷ್ಟಾಚಾರ, ಅಕ್ರಮ, ಹಗರಣಗಳ ಸರಮಾಲೆ ಇದೆ. ಪಿಡಬ್ಲ್ಯೂಡಿ, ಶಿಕ್ಷಣ ಇಲಾಖೆ ಸೇರಿದಂತೆ ಅನೇಕ ಕಡೆಗಳಲ್ಲಿ ಅಕ್ರಮವಾಗಿದೆ. ರಾಜ್ಯದಲ್ಲಿ ಯುವಕರ, ಉದ್ಯೋಗಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಡಲಾಗುತ್ತಿದೆ’ ಎಂದು ದೂರಿದರು.

‘ಪಿಎಸ್‌ಐ ಹಗರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಬಹಿರಂಗವಾಗುವ ಮೊದಲೇ ಈ ಹಿಂದೆ ನಡೆದಿ ರುವ ಪರೀಕ್ಷೆ ರದ್ದು ಮಾಡಿ ಮರುಪರೀಕ್ಷೆಗೆ ಆದೇಶ ನೀಡಿ ರುವುದು ಎಷ್ಟರ ಮಟ್ಟಿಗೆ ಸರಿ? ಇದೊಂದು ಬಿಜೆಪಿ ಅಕ್ರಮವಾಗಿದ್ದು, ಬಿಜೆಪಿ ನಾಯಕರ ರಕ್ಷಣೆಗೆ ಪರೀಕ್ಷೆ ರದ್ದುಪಡಿಸಲಾಗಿದೆ’ ಎಂದರು.

ಮರುಪರೀಕ್ಷೆಗೆ ಕಾರಣ ಹೇಳಿ: ಸಿದ್ದರಾಮಯ್ಯ ಆಗ್ರಹ

ಬೆಂಗಳೂರು/ಮೈಸೂರು: ‘ಪಿಎಸ್‌ಐ ಮರು ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬೆಂಬಲ ಇದೆ. ಅಕ್ರಮ ಎಸಗಿದವರು ಯಾರು? ಪ್ರಾಮಾಣಿಕರು ಯಾರೆಂಬುದು ಗೊತ್ತಾಗುವು
ದಿಲ್ಲ. ಹೀಗಾಗಿ, ಮರು ಪರೀಕ್ಷೆ ಮಾಡುವುದೇ ಸರಿ. ಜತೆಗೆ, ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದರು.

‘ಆದರೆ, ಯಾವ ಆಧಾರದ ಮೇಲೆ ಮರುಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎನ್ನುವುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು. ಅಕ್ರಮ ನಡೆದಿರುವುದು ಸಿಐಡಿ ತನಿಖೆಯಿಂದ ಸಾಬೀತಾಗಿದೆಯೇ? ಹಾಗಿದ್ದರೆ ಆ ವರದಿ ಬಿಡುಗಡೆ ಮಾಡಿ’ ಎಂದೂ ಅವರು ಒತ್ತಾಯಿಸಿದರು

‘ಮರುಪರೀಕ್ಷೆಯ ನಿರ್ಧಾರ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸುವುದಕ್ಕೋ ಅಥವಾ ಹಗರಣವನ್ನು ಮುಚ್ಚಿಹಾಕಿ ದೊಡ್ಡ ತಲೆಗಳನ್ನು ಉಳಿಸಲಿಕ್ಕಾಗಿಯೇ? ಹಗರಣದ ಸೂತ್ರಧಾರಿ ದಿವ್ಯಾ ಹಾಗರಗಿ ಬಂಧನದ ತಕ್ಷಣ ಮರುಪರೀಕ್ಷೆ ನಿರ್ಧಾರದ ಹಿಂದಿನ‌ ರಹಸ್ಯವೇನು. ಆಕೆಯ ಹೇಳಿಕೆಯಲ್ಲಿ ಅಂಥ ಸ್ಫೋಟಕ ಸಂಗತಿ ಏನಿದೆ’ ಎಂದು ಪ್ರಶ್ನಿಸಿದ್ದಾರೆ.

‘ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಆರೋಪಿ ಅಧಿಕಾರಿ ಗಳಿಗೆ ರಕ್ಷಣೆ ನೀಡುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ತಕ್ಷಣ ವಜಾಗೊಳಿಸಬೇಕು’ ಎಂದೂ ‌ಆಗ್ರಹಿಸಿದ್ದಾರೆ.

‘ರಾಜ್ಯ ಸರ್ಕಾರವೇ ಅಡಿಯಿಂದ ಮುಡಿವರೆಗೆ ಭ್ರಷ್ಟಗೊಂಡಿರುವಾಗ ಪಿಎಸ್‌ಐ ನೇಮಕಾತಿ ಹಗರಣದ ಸಿಐಡಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಾರದು. ಹೈಕೋರ್ಟ್ ನ್ಯಾಯಮೂರ್ತಿಯ ಮೇಲುಸ್ತುವಾರಿಯ ತನಿಖೆಯೊಂದೇ ಪರಿಹಾರ’ ಎಂದು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT