ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಕ್ರೀಡಾ ಸಚಿವರ ಸಾಧನೆ

Last Updated 2 ಅಕ್ಟೋಬರ್ 2021, 16:15 IST
ಅಕ್ಷರ ಗಾತ್ರ

‘ಹೊಸ ಕ್ರೀಡಾ ನೀತಿ ನನ್ನದೇ’
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎರಡು ವರ್ಷ ಕ್ರೀಡಾ ಸಚಿವನಾಗಿದ್ದೆ. ರಾಜ್ಯದ ಕ್ರೀಡಾ ಇತಿಹಾಸದಲ್ಲಿ ನನ್ನ ಅವಧಿಯಲ್ಲಿ ಹೊಸ ಕ್ರೀಡಾ ನೀತಿ ರೂಪಿಸಿದ್ದೆ.

ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಅರಣ್ಯ, ಪೊಲೀಸ್‌, ಅಬಕಾರಿ, ಸಾರಿಗೆ ಇಲಾಖೆ ನೇಮಕಾತಿಗಳಲ್ಲಿ ಶೇ 2 ಮೀಸಲಾತಿಗೆ ಅವಕಾಶ ಕಲ್ಪಿಸಿದ್ದೆ. ಗ್ರಾಮೀಣ ಭಾಗದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲು ‘ಯುವ ಚೈತನ್ಯ’ ಎಂಬ ಕಾರ್ಯಕ್ರಮದ ಮೂಲಕ ₹ 20 ಕೋಟಿ ವೆಚ್ಚದಲ್ಲಿ 4 ಸಾವಿರ ಕಿಟ್‌ಗಳನ್ನು ರಾಜ್ಯದಾದ್ಯಂತ ವಿತರಿಸಿದ್ದೆ. ಕ್ರೀಡಾ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ನಿತ್ಯದ ಆಹಾರಕ್ಕೆ ಸರ್ಕಾರ ನೀಡುತ್ತಿದ್ದ ತಲಾ ₹ 200 ಏಜೆನ್ಸಿಗಳ ಪಾಲಾಗುತ್ತಿತ್ತು. ಅದನ್ನು ತಡೆಯಲು ಇಲಾಖೆ ಮೂಲಕವೇ ಆಹಾರ ವಿತರಿಸಲು ಕ್ರಮ ತೆಗೆದುಕೊಂಡಿದ್ದೆ.

ಬಜೆಟ್‌ನಲ್ಲಿ ಕ್ರೀಡಾ ಇಲಾಖೆಗೆ ವಾರ್ಷಿಕ ₹ 140 ಕೋಟಿ ಮೀಸಲಿಟ್ಟಿದ್ದ ಅನುದಾನವನ್ನು ₹ 240 ಕೋಟಿಗೆ ಏರಿಸಿದ್ದೆ.


-ಪ್ರಮೋದ್‌ ಮಧ್ವರಾಜ್‌, ಮಾಜಿ ಕ್ರೀಡಾ ಸಚಿವ

***

‘₹ 46 ಸಾವಿರ ಕೋಟಿ ಮೌಲ್ಯದ ಆಸ್ತಿ ಉಳಿಸಿದೆ’
ಕಂಠೀರವ ಕ್ರೀಡಾಂಗಣದ ಅಭಿವೃದ್ಧಿ ಸೇರಿ ಸಾಕಷ್ಟು ಕೆಲಸಗಳನ್ನು ನನ್ನ ಅವಧಿಯಲ್ಲಿ ಮಾಡಿದ್ದೇನೆ. ಕ್ರೀಡಾ ಇಲಾಖೆಗೆ ಸೇರಿದ ಸುಮಾರು ₹ 46 ಸಾವಿರ ಕೋಟಿ ಮೌಲ್ಯದ ಆಸ್ತಿ ಉಳಿಸುವ ಕೆಲಸ ಮಾಡಿದ್ದೇನೆ. ಅಲ್ಲದೆ, ಇಲಾಖೆಗೆ ಸೇರಿದ ಆಸ್ತಿಯ ಶೇ 80ರಷ್ಟು ಸಮೀಕ್ಷೆ ನನ್ನ ಅವಧಿಯಲ್ಲಿ ಪೂರ್ಣಗೊಂಡಿತ್ತು.

ಕ್ರೀಡಾ ಕ್ಷೇತ್ರದಲ್ಲಿ ನಡೆಯುವ ಭ್ರಷ್ಟಾಚಾರ ತಡೆಗಟ್ಟಲು ಪರಿಣಾಮಕಾರಿ ಕ್ರಮ ತೆಗೆದುಕೊಂಡಿದ್ದೆ. ಕ್ರೀಡಾ ಪ್ರಶಸ್ತಿಗಳಿಗೆ ಅರ್ಹರ ಆಯ್ಕೆಗೂ ಪಾರದರ್ಶಕ ನೀತಿ ಜಾರಿಗೊಳಿಸಿದ್ದೆ.


-ಎಂ.ಪಿ. ಅಪ್ಪಚ್ಚು ರಂಜನ್‌, ಮಾಜಿ ಕ್ರೀಡಾ ಸಚಿವ

***

‘ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣಕ್ಕೆ ಒತ್ತು ನೀಡಿದೆ’
ಕ್ರೀಡೆ ಮತ್ತು ಯುವಜನ ಸೇವೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ತವರು ಜಿಲ್ಲೆ ಚಿತ್ರದುರ್ಗ ಒಳಗೊಂಡಂತೆ ರಾಜ್ಯದವಿವಿಧೆಡೆ ಸಿಂಥೆಟಿಕ್‌ ಅಥ್ಲೆಟಿಕ್‌ ಟ್ರ್ಯಾಕ್‌ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿದೆ.

ಈ ಹಿಂದೆ ಕಂಠೀರವ ಕ್ರೀಡಾಂಗಣದಲ್ಲಿ ಮಾತ್ರ ಸಿಂಥೆಟಿಕ್‌ ಅಥ್ಲೆಟಿಕ್‌ ಟ್ರ್ಯಾಕ್‌ ಇತ್ತು. ನಾನು ಬೆಳಗಾವಿ, ಗದಗ, ಚಿತ್ರದುರ್ಗ, ಮಡಿಕೇರಿ ಸೇರಿದಂತೆ 6–7 ಕಡೆಗಳಲ್ಲಿ ಸಿಂಥೆಟಿಕ್‌ ಅಥ್ಲೆಟಿಕ್‌ ಟ್ರ್ಯಾಕ್‌ ನಿರ್ಮಾಣ ಮಾಡಿಸಿದೆ. ಹಾಸನ, ಚಿತ್ರದುರ್ಗ, ಹೊಸದುರ್ಗ, ಚಿಕ್ಕಬಳ್ಳಾಪುರ, ರಾಮನಗರ, ಕಲಬುರ್ಗಿಯಲ್ಲಿ ಒಳಾಂಗಣ ಈಜುಕೊಳ ನಿರ್ಮಾಣಕ್ಕೆ ಆದ್ಯತೆ ನೀಡಿದೆ.

ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಗೆ ವಾರ್ಷಿಕ ಬಜೆಟ್ ಕೇವಲ ₹ 2 ಲಕ್ಷ ಇತ್ತು. ಅದಕ್ಕೆ ₹ 2 ಕೋಟಿ ನೀಡಿ ಪುನಶ್ಚೇತನಗೊಳಿಸಿದೆ.


-ಗೂಳಿಹಟ್ಟಿ ಶೇಖರ್‌, ಮಾಜಿ ಕ್ರೀಡಾ ಸಚಿವ

***

‘ಸೀಮಿತ ಬಜೆಟ್‌ ಸಮರ್ಪಕವಾಗಿ ಬಳಸಿದ್ದೇನೆ’
ಇಡೀ ರಾಜ್ಯದಲ್ಲಿ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆ ಕ್ರೀಡಾಪಟುಗಳನ್ನು ಸೃಷ್ಟಿಸುವ ಕೇಂದ್ರ. ಮೂಡುಬಿದಿರೆ ನನ್ನ ಕ್ಷೇತ್ರವೂ ಆಗಿದ್ದರಿಂದ ಅಲ್ಲಿ 28 ಎಕರೆ ಜಾಗವನ್ನು ಕ್ರೀಡಾಂಗಣಕ್ಕೆ ಮಂಜೂರು ಮಾಡಿಸಿಕೊಂಡು ಸಿಂಥೆಟಿಕ್‌ ಅಥ್ಲೆಟಿಕ್‌ ಟ್ರ್ಯಾಕ್‌ ಮಾಡಿದ್ದೇನೆ.

₹ 7 ಕೋಟಿ ವೆಚ್ಚದಲ್ಲಿ ಜಿಮ್‌, ಕುಸ್ತಿ ಅಖಾಡ ಸಿದ್ಧಪಡಿಸಿದ್ದೆ. ಜೊತೆಗೆ ಈಜುಕೊಳ, ಸ್ಕೇಟಿಂಗ್‌ ಯಾರ್ಡ್‌ ಕೂಡ ಮಾಡಿದ್ದೇನೆ.

ಉಡುಪಿಯಲ್ಲಿದ್ದ ಕ್ರೀಡಾಂಗಣದ ಒಳಾಂಗಣ ಸಂಪೂರ್ಣ ಹಾಳಾಗಿತ್ತು. ಅದನ್ನು ದುರಸ್ತಿಗೊಳಿಸಿದ್ದೆ. ₹ 1 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣದಲ್ಲಿ ಗ್ಯಾಲರಿ ನಿರ್ಮಿಸಿದ್ದೆ. ವಿಜಯಪುರಲ್ಲಿ ₹ 8 ಕೋಟಿ ವೆಚ್ಚದಲ್ಲಿ ಸೈಕ್ಲಿಂಗ್‌ ವೆಲೋಡ್ರೋಂ, ಮಂಗಳೂರಿನಲ್ಲಿ ₹ 6 ಕೋಟಿ ವೆಚ್ಚದಲ್ಲಿ ಈಜುಕೊಳಕ್ಕೆ ಅನುದಾನ ಮೀಸಲಿಟ್ಟಿದ್ದರೂ ಯೋಜನೆ ಕಾರ್ಯಗತಗೊಂಡಿಲ್ಲವೆಂಬ ನೋವಿದೆ.


-ಕೆ. ಅಭಯಚಂದ್ರ ಜೈನ್‌, ಮಾಜಿ ಕ್ರೀಡಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT