ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರನ್ನು ಆಕರ್ಷಿಸಲು ಏರೊ ಇಂಡಿಯಾ ಸಹಕಾರಿ: ರಾಜನಾಥ್‌ ಸಿಂಗ್

Last Updated 2 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕವು ಹೂಡಿಕೆದಾರರ ಪಾಲಿನ ಗಮ್ಯಸ್ಥಾನವೆಂದೇ ಕರೆಯಲ್ಪಡುತ್ತದೆ. ಮತ್ತಷ್ಟು ವಿದೇಶಿ ಹಾಗೂ ಸ್ವದೇಶಿ ಕಂಪನಿಗಳು ರಾಜ್ಯದತ್ತ ಮುಖ ಮಾಡಲು ‘ಏರೊ ಇಂಡಿಯಾ–2021’ ಸಹಕಾರಿಯಾಗಲಿದೆ’ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

‘ಏರೊ ಇಂಡಿಯಾ ಕರ್ಟನ್‌ ರೈಸರ್‌’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಏರೊ ಇಂಡಿಯಾ–2021’ರಲ್ಲಿ ವಿದೇಶದ 80 ಕಂಪನಿಗಳು ಸೇರಿದಂತೆ ಒಟ್ಟು 600 ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ. ಎಚ್‌ಎಎಲ್‌, ಡಿಆರ್‌ಡಿಒ ಹೀಗೆ ಅನೇಕ ಸಂಸ್ಥೆಗಳು ತಮ್ಮ ಸಾಧನೆಗಳನ್ನು ಜನರ ಮುಂದಿಡಲು ಸಜ್ಜಾಗಿವೆ’ ಎಂದರು.

‘ಭಾರತವು ಹೂಡಿಕೆ, ನಾವೀನ್ಯತೆ ಹಾಗೂ ರಕ್ಷಣಾ ವಲಯದ ಉತ್ಪಾದನಾ ಕೇಂದ್ರ ಎಂದು ಗುರುತಿಸಿಕೊಳ್ಳಲು, ವಿಶ್ವದ ಅತ್ಯಂತ ಬಲಿಷ್ಠ ರಕ್ಷಣಾ ಆರ್ಥಿಕತೆಯನ್ನು ಹೊಂದಿದ ರಾಷ್ಟ್ರವಾಗಿ ರೂಪಾಂತರಗೊಳ್ಳಲು ಏರೊ ಇಂಡಿಯಾ ನೆರವಾಗಲಿದೆ’ ಎಂದೂ ಅಭಿಪ್ರಾಯಪಟ್ಟರು.

‘ಫೆಬ್ರುವರಿ 4ರಂದು ‘ಇಂಡಿಯನ್‌ ಓಷಿಯನ್‌ ರೀಜನಲ್‌ ಡಿಫೆನ್ಸ್‌ ಮಿನಿಸ್ಟರ್ಸ್‌ ಕನ್ಕ್ಲೇವ್‌’ ನಿಗದಿಯಾಗಿದೆ. ಈ ಸಭೆಯು ಮಿತ್ರ ರಾಷ್ಟ್ರಗಳೊಂದಿಗಿನ ವ್ಯಾಪಾರ ಹಾಗೂ ಸಹಕಾರ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಅನುವಾಗಲಿದೆ. ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ನಾವೆಲ್ಲರೂ ಒಗ್ಗಟ್ಟಾಗಿ ‘ಏರೊ ಇಂಡಿಯಾ–2021’ ಆಯೋಜಿಸಿದ್ದೇವೆ. ಇದು ಹಿಂದೆಂದಿಗಿಂತಲೂ ಹೆಚ್ಚು ಯಶಸ್ಸು ಕಾಣಲಿದೆ’ ಎಂದು ತಿಳಿಸಿದರು.

‘ಕೋವಿಡ್‌ ಸಂಕಟದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದು ವಿಶ್ವದ ಮೊದಲ ‘ಹೈಬ್ರಿಡ್‌’ ವೈಮಾನಿಕ ಪ್ರದರ್ಶನವಾಗಿದೆ. ಈ ಆವೃತ್ತಿಯು ಸಂಪೂರ್ಣವಾಗಿ ವಾಣಿಜ್ಯ ಉದ್ದೇಶವನ್ನೊಳಗೊಂಡಿದೆ. ಕೋವಿಡ್‌ ಕಾರಣ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ’ ಎಂದರು.

28 ರಾಷ್ಟ್ರಗಳ ರಕ್ಷಣಾ ಸಚಿವರಿಗೆ ಆಹ್ವಾನ

ಫೆಬ್ರುವರಿ 4ರಂದು ನಿಗದಿಯಾಗಿರುವ ‘ಇಂಡಿಯನ್‌ ಓಷಿಯನ್‌ ರೀಜನಲ್‌ ಡಿಫೆನ್ಸ್‌ ಮಿನಿಸ್ಟರ್ಸ್‌ ಕನ್ಕ್ಲೇವ್‌’ನಲ್ಲಿ ಭಾಗಿಯಾಗುವಂತೆ ಒಟ್ಟು 28 ರಾಷ್ಟ್ರಗಳ ರಕ್ಷಣಾ ಸಚಿವರಿಗೆ ಆಹ್ವಾನ ನೀಡಲಾಗಿದೆ. ಇರಾನ್‌ ಸೇರಿದಂತೆ ಒಟ್ಟು 18 ರಾಷ್ಟ್ರಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಮ್ಮತಿಸಿದ್ದಾರೆ. 8 ದೇಶಗಳ ಪ್ರತಿನಿಧಿಗಳು ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT