ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರಿಗೆ 32 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ: ಬಿ.ಸಿ.ಪಾಟೀಲ

ಇಲಾಖೆಯ ಅಧಿಕಾರಿಗಳ ಜೊತೆ ಸಭೆ
Last Updated 5 ನವೆಂಬರ್ 2020, 7:47 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಸಾಲಿನ (2020-21) ಹಿಂಗಾರು ಹಂಗಾಮಿನಲ್ಲಿ 32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಗುರಿ ತಲುಪಲು ಮತ್ತು ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಕೃಷಿ ಇಲಾಖೆ ಮುಂದಾಗಿದೆ.

ಇಲಾಖೆಯ ಅಧಿಕಾರಿಗಳ ಜೊತೆ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಗುರುವಾರ ಪೂರ್ವಸಿದ್ಧತಾ ಸಭೆ ನಡೆಸಿದರು.

ಈ ಬಾರಿ ಉತ್ತಮ ಮಳೆ ಆಗಿರುವ ಕಾರಣ ಮುಂಗಾರಿನಂತೆ ಹಿಂಗಾರಿನಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗುವ ನಿರೀಕ್ಷೆಯಿದೆ. ಹೀಗಾಗಿ, ಬಿತ್ತನೆಗೆ ಅಗತ್ಯವಾದ ರಸಗೊಬ್ಬರ, ಯೂರಿಯಾ ಪೂರೈಕೆ ಸೇರಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಚಿವರು ಚರ್ಚಿಸಿದರು.

32 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ ಈಗಾಗಲೇ 11.19 ಲಕ್ಷ ಹೆಕ್ಟೇರ್, ಅಂದರೆ ಶೇ 35ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಿಂಗಾರು ಅವಧಿಯಲ್ಲಿ ಜೋಳ ಮತ್ತ ಕಡಲೆ ಪ್ರಮುಖ ಬೆಳೆಗಳು. ಅ. 29ರವರೆಗೆ ದ್ವಿದಳ ಧಾನ್ಯಗಳು 14.28 ಲಕ್ಷ ಹೆಕ್ಟೇರ್ ಗುರಿಯಲ್ಲಿ 5.94 ಲಕ್ಷ ಹೆಕ್ಟೇರ್ ಸಾಧನೆಯಾಗಿದೆ. ಒಟ್ಟು ಆಹಾರ ಧಾನ್ಯಗಳ 27.54 ಲಕ್ಷ ಹೆಕ್ಟೇರ್, ಪೈಕಿ 9.73ರಷ್ಟು ಸಾಧನೆಯಾಗಿದ್ದು, 26.02 ಲಕ್ಷ ಟನ್ ಉತ್ಪಾದನೆಯಾಗಿದೆ.

ಇನ್ನು 3.53ರಷ್ಟು ಎಣ್ಣೆಕಾಳುಗಳ ಗುರಿಯಿದ್ದು, ಈ ಪೈಕಿ 0.89 ಲಕ್ಷ ಹೆಕ್ಟೇರ್ ಸಾಧನೆಯಾಗಿ 2.81 ಲಕ್ಷ ಟನ್ ಉತ್ಪಾದನೆ. 0.48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಗುರಿಯಿದ್ದು, ಇದರಲ್ಲಿ 0.08 ಲಕ್ಷ ಹೆಕ್ಟೇರ್ ಸಾಧನೆ,0.98 ಲಕ್ಷ ಟನ್ ಉತ್ಪಾದನೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಪ್ರಮಾಣಿತ ಬಿತ್ತನೆ ಬೀಜದ ಅಂದಾಜು ಬೇಡಿಕೆ 3.28 ಲಕ್ಷ ಕ್ವಿಂಟಲ್‌ಗಳಷ್ಟಿದೆ. ಈವರೆಗೆ 1,55,989 ಕ್ವಿಂಟಲ್‌ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.

ಹಂಗಾಮಿನಲ್ಲಿ 2.93 ಲಕ್ಷ ಟನ್ ವಿವಿಧ ರಾಸಾಯನಿಕ ರಸಗೊಬ್ಬರಗಳ ಬೇಡಿಕೆ ಅಂದಾಜಿಸಲಾಗಿದ್ದು, ಸಕಾಲದಲ್ಲಿ ಪೂರೈಕೆಗಾಗಿ ಜಿಲ್ಲಾವಾರು, ತಿಂಗಳುವಾರು ಮತ್ತು ಸಂಸ್ಥೆವಾರು ಸರಬರಾಜು ಮಾಡಲು ಸಿದ್ದತೆ ಮಾಡಲಾಗಿದೆ. ಅ. 1 ರಿಂದ 31ರವರೆಗೆ ಹಿಂಗಾರಿಗೆ 9.39 ಲಕ್ಷ ಟನ್ ವಿವಿಧ ರಸಗೊಬ್ಬರ ಸರಬರಾಜಾಗಿದ್ದು. ಸದ್ಯ 9.62 ಲಕ್ಷ ಟನ್ ದಾಸ್ತಾನಿದೆ ಎಂದೂ ಅಧಿಕಾರಿಗಳು ತಿಳಿಸಿದರು.

ಕೃಷಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಖತ್ರಿ, ಕೃಷಿ ನಿರ್ದೇಶಕ ಶ್ರೀನಿವಾಸ್, ಹೆಚ್ಚುವರಿ ನಿರ್ದೇಶಕ ಅಂಥೋನಿ ಮರಿಯಾ ಇಮಾನ್ಯುಲ್ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT