ಸೋಮವಾರ, ಸೆಪ್ಟೆಂಬರ್ 26, 2022
22 °C
ಅಂಗನವಾಡಿ ನೌಕರರ 8ನೇ ರಾಜ್ಯ ಸಮ್ಮೇಳನದಲ್ಲಿ ನಿರ್ಣಯ

ಕಾರ್ಯಕರ್ತೆಗೆ ಶಿಕ್ಷಕಿ ಪದನಾಮ ಕೊಡಿ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ‘ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯ ಪದನಾಮ ಶಿಕ್ಷಕಿ ಎಂದು ಬದಲಿಸಿ ಆದೇಶ ಹೊರಡಿಸಬೇಕು. ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಗ್ರ್ಯಾಚುಯಿಟಿ ಸೌಲಭ್ಯ ಕೊಡಬೇಕು. ಎಲ್‌.ಕೆ.ಜಿ, ಯು.ಕೆ.ಜಿ ಶಿಕ್ಷಣ ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಸಬೇಕು. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ(ಐ.ಸಿ.ಡಿ.ಎಸ್‌) ಆಗುವ ಹಾನಿಕಾರಕ ವಿಷಯಗಳನ್ನು ಕೈಬಿಡಬೇಕು’ 

ಸಿ.ಐ.ಟಿ.ಯು. ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸಹಭಾಗಿತ್ವದಲ್ಲಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂಗನವಾಡಿ ನೌಕರರ 8ನೇ ರಾಜ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳಿವು.

‘ಬರುವ ಜನವರಿಯೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಶಕ್ತಿ ಏನೆಂಬುದು ಸರ್ಕಾರಕ್ಕೆ ತೋರಿಸುತ್ತೇವೆ’ ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಎಚ್ಚರಿಕೆ ನೀಡಿದರು.

‘ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಯಿಟಿ ಸೌಲಭ್ಯ ಕೊಡುವ ಸಂಬಂಧ ಮೂರು ತಿಂಗಳೊಳಗೆ ನಿಯಮಗಳನ್ನು ರೂಪಿಸಬೇಕೆಂದು ಸುಪ್ರೀಂಕೋರ್ಟ್‌ ಗಡುವು ನೀಡಿದೆ. ಆದರೆ, ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಈ ಕುರಿತಂತೆ ಸಭೆಯೂ ನಡೆಸಿಲ್ಲ. ಆರು ಸೇವೆಗಳನ್ನಷ್ಟೇ ಅಂಗನವಾಡಿ ಕಾರ್ಯಕರ್ತೆಯರಿಂದ ಮಾಡಿಸಬೇಕು. ಆಗ ರಾಜ್ಯದಲ್ಲಿ ಅಕ್ಷರ ಕ್ರಾಂತಿ ಆಗುತ್ತದೆ’ ಎಂದು ಹೇಳಿದರು.

ಸಂಘದ ಅಖಿಲ ಭಾರತ ಅಧ್ಯಕ್ಷೆ ಎ.ಆರ್‌.ಸಿಂಧು ಮಾತನಾಡಿ, ‘ಐ.ಸಿ.ಡಿ.ಎಸ್‌. ಯೋಜನೆ ಅಪೌಷ್ಟಿಕತೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಸರ್ಕಾರ ಅದರ ಅನುದಾನ ಕಡಿತಗೊಳಿಸಿದೆ. ಈ ಸಂಬಂಧ ದೇಶದ ಎಲ್ಲ ಸಂಸದರಿಗೆ ಪತ್ರ ಬರೆದು ಉತ್ತರ ಕೇಳುವ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ’ ಎಂದರು.

ಬಹಿರಂಗ ಸಭೆಗೂ ಮುನ್ನ, ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಅಂಗನವಾಡಿ ಕಾರ್ಯಕರ್ತೆಯರು ನಗರದಲ್ಲಿ ರ್‍ಯಾಲಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು