ದೇವೇಂದ್ರಪ್ಪ ವಿರುದ್ಧ ಮತ್ತೊಂದು ಪ್ರಕರಣ: ಎರಡು ಸ್ಥಳಗಳಲ್ಲಿ ಎಸಿಬಿ ಶೋಧ

ಬೆಂಗಳೂರು: ಕಟ್ಟಡವೊಂದರ ಸ್ವಾಧೀನತಾ ಪ್ರಮಾಣಪತ್ರ ನೀಡಲು ₹ 20 ಲಕ್ಷ ಲಂಚ ಪಡೆಯುತ್ತಿದ್ದಾಗ ಬಂಧಿತರಾಗಿದ್ದ ಬಿಬಿಎಂಪಿ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತೊಂದು ಪ್ರಕರಣ ದಾಖಲಿಸಿದೆ. ಮಂಗಳವಾರ ಬೆಳಿಗ್ಗೆಯಿಂದ ಎರಡು ಕಡೆಗಳಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಅಮೃತನಗರ ಸಿ ಸೆಕ್ಟರ್ ನಲ್ಲಿರುವ ದೇವೇಂದ್ರಪ್ಪ ಅವರ ಮನೆ ಹಾಗೂ ಹಲಸೂರು ಸಮೀಪದ ಗುಪ್ತ ಬಡಾವಣೆಯಲ್ಲಿರುವ ದೇವೇಂದ್ರಪ್ಪ ಅವರ ಆಪ್ತ ಶ್ರೀನಿವಾಸ ಮೂರ್ತಿ ಮನೆಗಳ ಮೇಲೆ ದಾಳಿ ಮಾಡಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರುವರಿ 5ರಂದು ಲಂಚ ಪಡೆಯುತ್ತಿದ್ದಾಗ ದೇವೇಂದ್ರಪ್ಪ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಅವರ ಮನೆಯಲ್ಲಿ ಬಿಬಿಎಂಪಿಯ 480 ಕಡತಗಳು, ವಿವಿಧ ಅಧಿಕಾರಿಗಳ ಹುದ್ದೆಗಳಿಗೆ ಸಂಬಂಧಿಸಿದ 80 ಸೀಲುಗಳು, 120 ಲೀಟರ್ ದುಬಾರಿ ಬೆಲೆಯ ಮದ್ಯ ಪತ್ತೆಯಾಗಿತ್ತು.

ತನಿಖೆ ವೇಳೆ ಲಭ್ಯವಾದ ಮಾಹಿತಿ ಆಧರಿಸಿ ದೇವೇಂದ್ರಪ್ಪ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಪ್ರತ್ಯೇಕ ಮೊಕದ್ದಮೆ ದಾಖಲಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.