ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ಮಸೂದೆಗೆ ‘ಕೈ’ ಕಿಡಿ: ಕಾರ್ಯಸೂಚಿ ಪಟ್ಟಿ ಹರಿದೆಸೆದ ಡಿಕೆಶಿ

ಬಿಜೆಪಿ–ಕಾಂಗ್ರೆಸ್ ಜಟಾಪಟಿ
Last Updated 22 ಡಿಸೆಂಬರ್ 2021, 4:11 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ವಿರೋಧಪಕ್ಷಗಳ ತೀವ್ರ ವಿರೋಧ, ಆಕ್ರೋಶ ಭರಿತ ಮಾತುಗಳ ಮಧ್ಯೆಯೇ ಮತಾಂತರವನ್ನು ನಿಷೇಧಿಸುವ ಮಸೂದೆಯನ್ನು ಸರ್ಕಾರ ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿತು.

ಭೋಜನ ವಿರಾಮದ ಬಳಿಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಚ್ಚುವರಿ ಕಾರ್ಯಸೂಚಿ ಅಡಿ ಮಸೂದೆ ಮಂಡಿಸುವುದಾಗಿ ಹೇಳಿ, ಧ್ವನಿಮತದ ಮೂಲಕ ಮಂಡನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಅವಕಾಶ ನೀಡಿದರು. ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ 2021’ ಅನ್ನು ಜ್ಞಾನೇಂದ್ರ ಮಂಡಿಸಿದರು.

ಆದರೆ, ಆ ವೇಳೆಯಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ನ ಪ್ರಮುಖ ನಾಯಕರು ಸದನದ ಒಳಗೆ ಇರಲಿಲ್ಲ. ಮಸೂದೆ ಮಂಡನೆ ಆಗುತ್ತಿರುವ ಮಾಹಿತಿ ಸಿಗುತ್ತಿದ್ದಂತೆ ಅವರು ಒಳಗೆ ದೌಡಾಯಿಸಿದರು. ಆ ವೇಳೆಗಾಗಲೇ ಮಸೂದೆ ಮಂಡನೆ ಆಗಿತ್ತು.

ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್‌ ಸದಸ್ಯರು ಸಭಾಧ್ಯಕ್ಷರು ಮತ್ತು ಸರ್ಕಾರದ ವಿರುದ್ಧ ಹರಿಹಾಯ್ದರು.

‘ಮಸೂದೆ ಮಂಡನೆಗೇ ನಮ್ಮ ವಿರೋಧವಿದೆ. ನಮ್ಮ ಗಮನಕ್ಕೆ ತಾರದೇ ಹೇಗೆ ಮಂಡಿಸುತ್ತೀರಿ? ಇದು, ಕರಾಳ ಮಸೂದೆ, ಸಂವಿಧಾನ ವಿರೋಧಿಯಾಗಿದೆ. ವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ’ ಎಂದು ಸಿದ್ದರಾಮಯ್ಯ ಗುಡುಗಿದರು. ಕಾಂಗ್ರೆಸ್‌ ಸದಸ್ಯರು ಧ್ವನಿಗೂಡಿಸಿದರು.

ಇದೇ ವೇಳೆ ಡಿ.ಕೆ.ಶಿವಕುಮಾರ್‌ ಅವರು, ‘ಕದ್ದು ಮುಚ್ಚಿ ಮಸೂದೆ ಮಂಡಿಸಲಾಗಿದೆ, ಇದು ಜನವಿರೋಧಿ ಮಸೂದೆ’ ಎಂದು ಕಾರ್ಯಸೂಚಿ ಪಟ್ಟಿಯನ್ನು ಹರಿದು ಎಸೆದರು. ಇದನ್ನು ಕಾಗೇರಿ ಕಟುವಾಗಿ ಟೀಕಿಸಿದರು.

‘ಮಸೂದೆ ಮಂಡನೆಯ ಬಗ್ಗೆ ನಿಮ್ಮ ವಿಪ್‌ ಅವರ ಗಮನಕ್ಕೆ ತರಲಾಗಿದೆ. ಕದ್ದುಮುಚ್ಚಿ ಮಂಡಿಸಿಲ್ಲ. ನಿಮ್ಮ ಆರೋಪವನ್ನು ಹಿಂದಕ್ಕೆ ಪಡೆಯಬೇಕು. ಸದನದಲ್ಲಿ ಕೋರಂ ಆದ ತಕ್ಷಣವೇ ಕಲಾಪ ಆರಂಭಿಸಲಾಗಿದೆ. ಮಸೂದೆಯನ್ನು ಮಂಡಿಸಲಾಗಿದೆ. ಇದರಲ್ಲಿ ಲೋಪವಾಗಿಲ್ಲ, ಕಲಾಪ ಆರಂಭವಾಗುವಾಗ ನೀವು ಹಾಜರಿರಬೇಕಿತ್ತು. ಆ ಬಳಿಕ ಬಂದು ತಕರಾರು ಎತ್ತಿದ್ದು ಸರಿಯಲ್ಲ. ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡು ರೈಲೇ ಸಿಕ್ಕಿಲ್ಲ ಎಂದು ಹೇಳುವವರ ರೀತಿ ವರ್ತಿಸುತ್ತಿದ್ದೀರಿ. ಮಸೂದೆಯ ಬಗ್ಗೆ ಇವತ್ತು ಚರ್ಚೆ ನಡೆಯುವುದಿಲ್ಲ. ಬುಧವಾರ ಚರ್ಚೆ ನಡೆಸಿ ಪರ್ಯಾಲೋಚನೆಗೆ ತೆಗೆದುಕೊಳ್ಳಲಾಗುವುದು. ಮಸೂದೆ ಅಧ್ಯಯನ ಮಾಡಿಕೊಂಡು ಬಂದು ನಾಳೆ ಮಾತನಾಡಿ’ ಎಂದು ಸಭಾಧ್ಯಕ್ಷ ಕಾಗೇರಿ ಕಾಂಗ್ರೆಸ್ ಸದಸ್ಯರಿಗೆ ಹೇಳಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಮಧ್ಯ ಪ್ರವೇಶಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ‘ಇವತ್ತೇ ಪರ್ಯಾಲೋಚನೆಗೆ ತರುವುದಿಲ್ಲ. ಮಸೂದೆಯನ್ನು ಓದಿಕೊಂಡು ಬನ್ನಿ. ನಾಳೆಗೆ ಚರ್ಚೆಗೆ ತೆಗೆದುಕೊಳ್ಳುತ್ತೇವೆ’ ಎಂದರು.

ಇದರಿಂದ ಸಮಾಧಾನಗೊಳ್ಳದ ಸಿದ್ದರಾಮಯ್ಯ, ‘ಸದನವನ್ನು ನೀವು ಬುಲ್ಡೋಜ್‌ ಮಾಡಿ ಜನವಿರೋಧಿ ಮಸೂದೆಯನ್ನು ತರಬೇಕಿತ್ತಾ? ಇಂತಹ ಕೆಟ್ಟ ಸರ್ಕಾರ ಇತಿಹಾಸದಲ್ಲೇ ಇರಲಿಲ್ಲ, ನಾಚಿಕೆ ಆಗಬೇಕು’ ಎಂದು ಹರಿಹಾಯ್ದರು.

‘ಯಾವುದೇ ಧರ್ಮದ ವಿರುದ್ಧವಾದ ಮಸೂದೆಯಲ್ಲ. ಹಿಂದೂ, ಕ್ರೈಸ್ತ, ಮುಸ್ಲಿಂ ಹೆಸರು ಬಳಸಲಿಲ್ಲ. ಮಸೂದೆಯನ್ನು ಚೆನ್ನಾಗಿ ಓದಿಕೊಂಡು ಚರ್ಚೆಗೆ ಬನ್ನಿ’ ಎಂದು ಮಾಧುಸ್ವಾಮಿ ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದರು.

ಇಷ್ಟಕ್ಕೆ ಕಾಂಗ್ರೆಸ್‌ ಸದಸ್ಯರು ಸುಮ್ಮನಾಗಿದ್ದರಿಂದ ಅತಿವೃಷ್ಟಿ ಮೇಲಿನ ಚರ್ಚೆಗೆ ಉತ್ತರ ನೀಡಲು ಕಂದಾಯ ಸಚಿವ ಅಶೋಕ ಅವರಿಗೆ ಸಭಾಧ್ಯಕ್ಷರು ಅವಕಾಶ ನೀಡಿದರು.

ಆದರೆ, ಕಾಂಗ್ರೆಸ್‌ನ ಇತರ ಸದಸ್ಯರಾದ ಡಿ.ಕೆ.ಶಿವಕುಮಾರ್‌, ಕೆ.ಜೆ.ಜಾರ್ಜ್‌ ಅವರು ಇದರಿಂದ ಅಸಮಾಧಾನಗೊಂಡು ಸಿದ್ದರಾಮಯ್ಯ ಅವರ ಜತೆ ಸಮಾಲೋಚನೆ ನಡೆಸಿದರು. ಮತ್ತೆ ಎದ್ದು ನಿಂತ ಸಿದ್ದರಾಮಯ್ಯ, ‘ಸರ್ಕಾರ ತರಾತುರಿಯಲ್ಲಿ ಮಸೂದೆ ಮಂಡಿಸಿದ್ದು, ಸಂವಿಧಾನ ಬಾಹಿರ ಕ್ರಮ’ ಎಂದು ಸಭಾತ್ಯಾಗ ನಡೆಸಿದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರರ ವಿರುದ್ಧ ಧಿಕ್ಕಾರ ಮತ್ತು ತಮ್ಮ ಪಕ್ಷದ ಪರವಾಗಿ ಜೈಕಾರ ಕೂಗಿದರು.

‘ಕಳ್ಳತನದಲ್ಲಿ ಮಂಡನೆ’
‘ಕಳ್ಳತನದಿಂದ ಮಸೂದೆ ಮಂಡನೆ ಮಾಡಿದ್ದೀರಿ. ನಿಮ್ಮ ಕ್ರಮವನ್ನು ನಾವು ಒಪ್ಪುವುದಿಲ್ಲ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹರಿಹಾಯ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಕಾಗೇರಿ,‘ಸರ್ಕಾರ ಕಳ್ಳತನದಿಂದ ಮಸೂದೆ ಮಂಡಿಸಿದೆಯೇ’ ಎಂದು ಮಧುಸ್ವಾಮಿ ಅವರತ್ತ ನೋಡಿ ಪ್ರಶ್ನಿಸಿದರು.

‘ನಿನ್ನೆ ರಾತ್ರಿ ಮಸೂದೆಯ ಪ್ರತಿಗಳು ಸಿದ್ಧವಾಗಿರಲಿಲ್ಲ. ಇವತ್ತು ಬೆಳಿಗ್ಗೆ ಮಸೂದೆ ಪ್ರತಿಗಳು ಸಿದ್ಧವಾಗಿವೆ ಎಂದು ಹೇಳಿದ್ದರಿಂದ, ಹೆಚ್ಚುವರಿ ಅಜೆಂಡಾ ತರಲಾಯಿತು. ಹೀಗಾಗಿ ತಂದಿದ್ದೇವೆ’ ಎಂದು ಕಾಗೇರಿ ಹೇಳಿದರು.

‘ಕದ್ದು ಮುಚ್ಚಿ ಮಾಡಿಲ್ಲ. ಮಸೂದೆಯನ್ನು ಬೀದಿಯಲ್ಲಿ ಮಂಡಿಸಿಲ್ಲ. ಸಭಾಧ್ಯಕ್ಷರು, ಶಾಸಕರ ಮಧ್ಯೆ ರಾಜಾರೋಷವಾಗಿಯೇ ಮಂಡಿಸಿದ್ದೇವೆ’ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ಈಶ್ವರಪ್ಪ–ಎಚ್‌ಡಿಕೆ ಮಧ್ಯೆ ವಾಗ್ವಾದ: ‘ಮತಾಂತರ ನಿಷೇಧ ಕಾಯ್ದೆಯನ್ನು ತರದೇ ಇದ್ದರೆ, ಭಾರತವು ಪಾಕಿಸ್ತಾನದಂತೆ ಆಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಜತೆಗೆ ವಾಗ್ವಾದಕ್ಕೆ ಕಾರಣವಾಯಿತು.

‘ಪಾಕಿಸ್ತಾನದಲ್ಲಿ ಶೇ 24 ರಷ್ಟು ಇದ್ದ ಹಿಂದೂಗಳ ಸಂಖ್ಯೆ ಈಗ ಶೇ 3 ಕ್ಕೆ ಇಳಿದಿದೆ. ಭಾರತವನ್ನು ಪಾಕಿಸ್ತಾನ ಆಗಲು ಬಿಡುವುದಿಲ್ಲ. ಹಿಂದೂಗಳು ಅಲ್ಪಸಂಖ್ಯಾತರಾಗಲು ಬಿಡುವುದಿಲ್ಲ. ಭಾರತದಲ್ಲಿ ಹಿಂದೂ ಧರ್ಮ ಉಳಿಯಬೇಕು’ ಎಂದು ಏರಿದ ಧ್ವನಿಯಲ್ಲಿ ಹೇಳಿದರು.

ಇದಕ್ಕೆ ತಿರುಗೇಟು ನೀಡಿದ ಎಚ್‌.ಡಿ.ಕುಮಾರಸ್ವಾಮಿ, ನೀವು ಈ ರೀತಿ ಸುಳ್ಳು ಹೇಳಬೇಡಿ. ಭಾರತ ಆ ರೀತಿ ಆಗುವುದಕ್ಕೆ ಸಾಧ್ಯವಿಲ್ಲ. ಈ ಮಣ್ಣಿಗೆ ಅಂತಹ ಶಕ್ತಿ ಇದೆ ಎಂದರು.

‘ಈ ದೇಶದಲ್ಲಿ ಕ್ರೈಸ್ತರಾಗಿ, ಮುಸ್ಲಿಮರಾಗಿ ಮತಾಂತರವಾಗಲು ಕಾರಣ ಯಾರು? ಶೂದ್ರರನ್ನು ಬದುಕಲು ಬಿಟ್ಟಿರಲಿಲ್ಲ, ಹೀಗಾಗಿ ಮತಾಂತರಗೊಂಡಿದ್ದಾರೆ. ಅಂಬೇಡ್ಕರ್‌ ಅವರು ಬೌದ್ಧ ಮತಕ್ಕೆ ಮತಾಂತರವಾಗಲಿಲ್ಲವೆ? ಹಿಂದೂ ಧರ್ಮದ ಹೆಸರು ಹೇಳಿ ಎಷ್ಟು ವರ್ಷ ರಾಜಕೀಯ ಮಾಡುತ್ತೀರಿ’ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.

‘ನಾವು ಮಸೂದೆ ತಂದೇ ತರುತ್ತೇವೆ. ಮತಾಂತರ ತಡೆಯುತ್ತೇವೆ’ ಎಂದು ಈಶ್ವರಪ್ಪ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT