ಮಂಗಳವಾರ, ಜೂನ್ 28, 2022
20 °C
ಲಸಿಕೆಗಳ ಸಂಬಂಧ ಎಪಿಸಿಆರ್‌ಐ ಸಲಹೆ

‘ಸೋಂಕಿತರು ಸಾಕು ಪ್ರಾಣಿಗಳಿಂದ ದೂರ ಇರಿ’–ಎಪಿಸಿಆರ್‌ಐ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಕು ನಾಯಿಯ ಮುದ್ದಾಟ–ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್‌ನಿಂದ ಸೋಂಕಿತರಾಗಿ ಮನೆಯಲ್ಲಿ ಪ್ರತ್ಯೇಕ ವಾಸ ಇರುವವರು ಹತ್ತು ದಿನಗಳ ಕಾಲ ಸಾಕು ಪ್ರಾಣಿಗಳಿಂದ ದೂರವಿರಬೇಕು ಎಂದು ‘ಅಸೋಸಿಯೇಷನ್‌ ಫಾರ್‌ ಪ್ರಿವೆನ್ಷನ್ ಅಂಡ್‌ ಕಂಟ್ರೋಲ್ ಆಫ್ ರೇಬೀಸ್‌ ಇನ್‌ ಇಂಡಿಯಾ’ (ಎಪಿಸಿಆರ್‌ಐ) ಹೇಳಿದೆ.

ನಾಯಿ ಮತ್ತು ಬೆಕ್ಕುಗಳೂ ಕೂಡ ಕೋವಿಡ್‌ನಿಂದ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ವಿದೇಶದಲ್ಲಿ ಈ ಅಂಶ ಸಾಬೀತಾಗಿದೆ. ಆದರೆ, ಭಾರತದಲ್ಲಿ ಇದಕ್ಕೆ ಪುರಾವೆ ಸಿಕ್ಕಿಲ್ಲ ಎಂದು ಎಪಿಸಿಆರ್‌ಐ ಅಧ್ಯಕ್ಷ ಡಾ.ಡಿ.ಎಚ್‌.ಅಶ್ವತ್ಥನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋವಿಡ್‌ ರೋಗಿಗಳಲ್ಲಿರುವ ವೈರಾಣುಗಳು ಸಾಕು ಪ್ರಾಣಿಗಳಿಗೂ ದಾಟುತ್ತವೆ. ಆದರೆ, ಪ್ರಾಣಿಗಳಿಂದ ಮನುಷ್ಯರಿಗೆ ವೈರಾಣುಗಳು ಬರುತ್ತಿರುವುದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದಿದ್ದಾರೆ.

ಲಸಿಕೆ ಪಡೆದ ವ್ಯಕ್ತಿಗೆ ಬೀದಿ ನಾಯಿ ಅಥವಾ ಇತರ ಪ್ರಾಣಿಗಳು ಕಚ್ಚಿದರೆ ರೇಬೀಸ್‌ ನಿರೋಧಕ ಲಸಿಕೆ ಮತ್ತು ರೇಬಿಸ್‌ ಇಮ್ಯುನೊಗ್ಲೋಬಿನ್‌ ಪಡೆಯಬೇಕು. ಸಾಕು ಪ್ರಾಣಿಗಳು ಸೇರಿದಂತೆ ಯಾವುದೇ ಪ್ರಾಣಿಗಳ ಕಡಿತಕ್ಕೆ ಅದರಲ್ಲೂ ಪೋಸ್‌ ಎಕ್ಸ್‌ಪೋಶರ್‌ ಪ್ರೊಫಿಲಾಕ್ಸಿಸ್‌ (ಪಿಇಪಿ) ಜೀವ ರಕ್ಷಕವಾಗಿದ್ದು, ಕೋವಿಡ್‌ ಲಸಿಕೆ ಪಡೆದಿದ್ದರೂ ಕೂಡ ಪಿಇಪಿ ಪಡೆಯಲೇಬೇಕು ಎಂದು ಅವರು ಹೇಳಿದರು.

ಸಾಕು ಪ್ರಾಣಿಗಳಿಗೆ ಲಸಿಕೆ ಹಾಕಿಸಿದ್ದರೂ, ಕೋವಿಡ್‌ ವ್ಯಕ್ತಿಯ ಸಂಪರ್ಕಕ್ಕೆ ಬಂದರೆ ಅವುಗಳ ಮೇಲೆ 10 ದಿನಗಳ ಕಾಲ ನಿಗಾ ಇಡುವುದು ಸೂಕ್ತ. ಒಂದು ವೇಳೆ  ನಾಯಿ ಮತ್ತು ಇತರ ಪ್ರಾಣಿಗಳು ಆರೋಗ್ಯಯುತವಾಗಿ ಕಂಡರೂ, ಅವುಗಳು ಕಚ್ಚಿದರೆ, ತಕ್ಷಣವೇ ಪಿಇಪಿ ತೆಗೆದುಕೊಳ್ಳಬೇಕು ಎಂದೂ ಅವರು ಹೇಳಿದರು.

ಕೋವಿಡ್‌ ಲಸಿಕೆ ಮತ್ತು ಪಿಇಪಿ ಎರಡೂ ಜೀವ ರಕ್ಷಕ ಲಸಿಕೆಗಳು, ಅನಿವಾರ್ಯ ಎನಿಸಿದರೆ ಎರಡನ್ನೂ ಒಂದೇ ದಿನ ತೆಗೆದುಕೊಳ್ಳಬಹುದಾಗಿದೆ. ಲಸಿಕೆಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.

ಪ್ರಾಣಿಗಳ ಕಡಿತಕ್ಕೆ ಒಳಗಾದ ವ್ಯಕ್ತಿ, ಕೋವಿಡ್‌ ಲಸಿಕೆ ತೆಗೆದುಕೊಂಡ ಕೈಗೆ ಪಿಇಪಿ ಲಸಿಕೆ ತೆಗೆದುಕೊಳ್ಳಬಾರದು. ಮತ್ತೊಂದು ಕೈಗೆ ತೆಗೆದುಕೊಳ್ಳಬೇಕು. ಒಂದು ವೇಳೆ ಕೋವಿಡ್‌ ಮೊದಲ ಡೋಸ್‌ ತೆಗೆದುಕೊಂಡ ನಂತರ ಪ್ರಾಣಿಗಳ ಕಡಿತಕ್ಕೆ ಒಳಗಾದರೆ, ರೇಬೀಸ್‌ ಲಸಿಕೆ ಪಡೆದ ಒಂದೆರಡು ವಾರಗಳ ಬಳಿಕ ಲಸಿಕೆ ತೆಗೆದುಕೊಳ್ಳಬಹುದು. ಅಲ್ಲಿಯವರೆಗೆ ಕೋವಿಡ್‌ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು