ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಎಂಐಎಂ ಅನ್ನು ‘ಬಿಜೆಪಿಯ ಬಿ ಟೀಂ’ ಎಂದ ಕಾಂಗ್ರೆಸ್-ಟಿಎಂಸಿ ವಿರುದ್ಧ ಓವೈಸಿ ಕಿಡಿ

Last Updated 31 ಜನವರಿ 2021, 6:25 IST
ಅಕ್ಷರ ಗಾತ್ರ

ಕಲಬುರ್ಗಿ: ತಮ್ಮ ಪಕ್ಷ ಆಲ್‌ ಇಂಡಿಯಾ ಮಜ್ಲೀಸ್‌–ಇ–ಇತ್ತೇಹಾದುಲ್‌ ಮುಸ್ಲಿಮಿನ್‌ (ಎಐಎಂಐಎಂ) ಅನ್ನು ‘ಬಿಜೆಪಿಯ ಬಿ ಟೀಂ’ ಎಂದು ಕರೆದಿರುವ ಕಾಂಗ್ರೆಸ್‌ ಹಾಗೂ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ವಿರುದ್ಧ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.

ಶನಿವಾರ ನಗರದಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಮಾತನಾಡಿದ ಎಐಎಂಐಎಂ ಮುಖ್ಯಸ್ಥ, ‘ಪಕ್ಷದ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಲಾಗಿದೆ. ನಾವು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ, ಒಂದು ಕಾಲದಲ್ಲಿ ಕಾಂಗ್ರೆಸ್‌ ಎಂದು ಕರೆಯಲಾಗುತ್ತಿದ್ದ ‘ಬ್ಯಾಂಡ್‌ ಪಕ್ಷ’ (ಟಿಎಂಸಿ) ನಮ್ಮನ್ನು ‘ಬಿಜೆಪಿಯ ಬಿ ಟೀಂ’ ಎನ್ನಲಾರಂಭಿಸಿದೆ. ಈ ಮಾತನ್ನು ಮಮತಾ ಬ್ಯಾನರ್ಜಿ ಅವರೂ ಹೇಳಲಾರಂಭಿಸಿದ್ದಾರೆ. ನಾನು ಯಾರಿಗೂ ಸೇರಿದವನಲ್ಲ ಬದಲಾಗಿ ಸಾರ್ವಜನಿಕರಿಗೆ ಸೇರಿದವ’ ಎಂದು ಹೇಳಿದ್ದಾರೆ.

‘ನೀವು ಕರ್ನಾಟಕದಲ್ಲಿ ಮಾಡಿದ್ದೇನು? ಕಾಂಗ್ರೆಸ್‌ ಶಾಸಕರು ಪಕ್ಷ ಬದಲಿಸಿ ಬಿಜೆಪಿಗೆ ಸೇರಿಕೊಂಡಿದ್ದಾರೆ. ಅದಕ್ಕೂ ಮೊದಲು ಅವರೆಲ್ಲ ನನ್ನನ್ನು ಕೇಳಿ ಬಿಜೆಪಿ ಸೇರಿದರೇ? ಅವರೆಲ್ಲ ಈಗ ಮಂತ್ರಿಗಳಾಗಿದ್ದಾರೆ. ಮಮತಾ ಅಥವಾ ಕಾಂಗ್ರೆಸ್‌ ಈ ಬಗ್ಗೆ ಮಾತನಾಡುವುದಿಲ್ಲ. ಆದರೆ ಎಐಎಂಐಎಂ ನಲ್ಲಿ ಹೀಗಾದರೆ, ‘ಬಿಜೆಪಿಯ ಬಿ ಟೀಂ’ ಎಂದು ಆರೋಪಿಸುತ್ತಾರೆ. ಅದೇ ಅವರ ಪಕ್ಷದ ವಿಚಾರ ಬಂದಾಗ ‘ನಮ್ಮ ಶಾಸಕರನ್ನು ದಾರಿ ತಪ್ಪಿಸಲಾಗಿದೆ’ ಎಂದು ಹೇಳಿಕೊಳ್ಳುತ್ತಾರೆ’ ಎಂದು ಆರೋಪಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಎಐಎಂಐಎಂ ಪಕ್ಷ ಇತ್ತೀಚೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ, ಕಳೆದ ಚುನಾವಣೆಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಚುನಾವಣೆಗೂ ಮೊದಲು ಕಾಂಗ್ರೆಸ್‌ ಮತ್ತು ಟಿಎಂಸಿ ಎಐಎಂಐಎಂ ಅನ್ನು ‘ಬಿಜೆಪಿಯ ಬಿ ಟೀಂ’ ಎಂದು ಕರೆದಿದ್ದವು. ಚುನಾವಣೆ ಬಳಿಕ ಮಾತನಾಡಿದ್ದ ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒವೈಸಿ ನೇತೃತ್ವದ ಎಐಎಂಐಎಂ ಪಕ್ಷವು ‘ಬಿಜೆಪಿಯ ಬಿ ಟೀಂ’ ಎಂಬುದು ಬಹಿರಂಗಗೊಂಡಿದೆ ಎಂದು ಹೇಳಿದ್ದರು.

ಮಹಾತ್ಮಾ ಗಾಂಧಿಯವರನ್ನು ಹತ್ಯೆಮಾಡಿದ್ದ ನಾಥುರಾಮ್‌ ಗೋಡ್ಸೆ ವಿರುದ್ಧವೂರ‍್ಯಾಲಿ ವೇಳೆಕಿಡಿಕಾರಿರುವ ಓವೈಸಿ, ‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ’ ಎಂದು ಜರಿದಿದ್ದಾರೆ.

‘ಮಹಾತ್ಮ ಗಾಂಧಿ ಅವರನ್ನು 1948ರ ಜನವರಿ 30ರಂದು ಹತ್ಯೆ ಮಾಡಲಾಗಿತ್ತು. ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥುರಾಮ್‌ ಗೋಡ್ಸೆ. ಬಿಜೆಪಿಯವರಿಗೆ ಗಾಂಧಿಯವರಲ್ಲಿ, ಅಂಬೇಡ್ಕರ್‌ ಅವರಲ್ಲಿ ಅಥವಾ ಸುಭಾಷ್‌ ಚಂದ್ರ ಬೋಸ್ಅವರಲ್ಲಿ ನಂಬಿಕೆ ಇಲ್ಲ. ಅವರು ಗೋಡ್ಸೆಯನ್ನು ಹಿಂಬಾಲಿಸುತ್ತಾರೆ. ಒಂದು ಕಡೆ ಗಾಂಧೀಜಿ ಅವರಿಗೆ ಗೌರವ ಸಲ್ಲಿಸುತ್ತಾರೆ. ಇನ್ನೊಂದು ಕಡೆ ಗಾಂಧಿ ಹತ್ಯೆಯ ಸಂಚುಕೋರ ಸಾವರ್ಕರ್‌ ಅವರನ್ನು ಆರಾಧಿಸುತ್ತಾರೆ’ ಎಂದು ಬಿಜೆಪಿ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

‘ನಾನು ಸಾವರ್ಕರ್‌ ಅವರ ಹೆಸರನ್ನು ಏಕೆ ಹೇಳುತ್ತಿದ್ದೇನೆಂದರೆ, ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಸಂಚುಕೋರ ಎಂದು ನ್ಯಾ. ಕಪೂರ್‌ ಆಯೋಗದ ವರದಿ ಹೇಳಿದೆ. ಕಾಂಗ್ರೆಸ್‌ (ಆಗ ಅಧಿಕಾರದಲ್ಲಿದ್ದ) ಸರ್ಕಾರ ಸರಿಯಾಗಿ ತನಿಖೆ ಮಾಡಿದ್ದಿದ್ದರೆ, ಆರ್‌ಎಸ್‌ಎಸ್‌ ನಾಯಕ ಬಂಧನಕ್ಕೊಳಗಾಗುತ್ತಿದ್ದರು. ಆದರೆ ಕಾಂಗ್ರೆಸ್‌ ಸರಿಯಾಗಿ ತನಿಖೆ ನಡೆಸಲಿಲ್ಲ’ ಎಂದೂ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT