ಶುಕ್ರವಾರ, ಆಗಸ್ಟ್ 19, 2022
22 °C

ಕೋವಿಡ್ ಪ್ರಕರಣ ಏರಿಕೆ: ಹೊಸ ವರ್ಷಾಚರಣೆಗೆ ಕಡಿವಾಣ, ಬಹಿರಂಗ ಸಂಭ್ರಮಕ್ಕೆ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ (ಸುವರ್ಣ ವಿಧಾನಸೌಧ): ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವ ಕಾರಣದಿಂದ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯದಾದ್ಯಂತ ಬಹಿರಂಗ ಸಂಭ್ರಮಾಚರಣೆ ಮತ್ತು ಡಿ.ಜೆ. ಧ್ವನಿವರ್ಧಕ ಬಳಸಿ ಮೋಜು ಕೂಟಗಳನ್ನು ನಡೆಸುವುದನ್ನು ನಿಷೇಧಿಸುವ ತೀರ್ಮಾನವನ್ನು ಕೈಗೊಂಡಿದೆ. 

ಆರೋಗ್ಯ ಹಾಗೂ ಉನ್ನತ ಶಿಕ್ಷಣ ಸಚಿವರು ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೋವಿಡ್‌ ನಿಯಂತ್ರಣ ಕುರಿತು ಚರ್ಚಿಸಿದರು. ವಿಡಿಯೊ ಕಾನ್ಫರೆನ್ಸಿಂಗ್‌ ಮೂಲಕ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜತೆಗೂ ಸಮಾಲೋಚಿಸಿ, ಈ ನಿರ್ಧಾರಗಳನ್ನು ಕೈಗೊಂಡರು. ಹೊಸ ನಿರ್ಬಂಧಗಳನ್ನು ವಿಧಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಸಂಜೆಯೇ ಆದೇಶ ಹೊರಡಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ‘ಸೋಂಕು ನಿಯಂತ್ರಣ ಮತ್ತು ಓಮೈಕ್ರಾನ್‌ ವೈರಾಣುವಿನ ಹರಡುವಿಕೆ ಕುರಿತು ಚರ್ಚಿಸಲಾಯಿತು. ಹೊಸ ವರ್ಷದಲ್ಲಿ ರಾಜ್ಯದ ಯಾವುದೇ ಭಾಗದಲ್ಲೂ ಬಹಿರಂಗ ಸಂಭ್ರಮಾಚರಣೆಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ’ ಎಂದರು.

‘ವರ್ಷಾಚರಣೆ ಹೆಸರಿನಲ್ಲಿ ಜನರು ಗುಂಪು ಸೇರುವಂತಿಲ್ಲ. ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲೂ ಅಂತಹ ಆಚರಣೆಗೆ ಅವಕಾಶವಿಲ್ಲ. ಡಿ. 30ರಿಂದ ಜ.2ರವರೆಗೂ ರಾಜ್ಯದಾದ್ಯಂತ ಈ ನಿಷೇಧ ಜಾರಿಯಲ್ಲಿರಲಿದೆ’ ಎಂದು ತಿಳಿಸಿದರು.

ಶೇ 50ರಷ್ಟು ಭರ್ತಿಗೆ ಅವಕಾಶ: ಹೊಸ ವರ್ಷಾಚರಣೆ ವೇಳೆ ಬಾರ್‌, ರೆಸ್ಟೋರಂಟ್‌ಗ, ಹೋಟೆಲ್, ಕ್ಲಬ್, ಪಬ್‌ಗಳಲ್ಲಿ ಸಾಮರ್ಥ್ಯದ ಶೇ 50ರಷ್ಟು ಜನರಿಗೆ ಪ್ರವೇಶ ನೀಡಬಹುದು. ಡಿ.ಜೆ. ಧ್ವನಿವರ್ಧಕಗಳ ಬಳಕೆ, ವಿಶೇಷ ಕಾರ್ಯಕ್ರಮಗಳ ಆಯೋಜನೆಗೆ ಅವಕಾಶ ಇರುವುದಿಲ್ಲ ಎಂದು ಸಿ.ಎಂ ಹೇಳಿದರು.

ಅಪಾರ್ಟ್‌ಮೆಂಟ್‌ಗಳಿಗೂ ಈ ನಿರ್ಬಂಧ ಅನ್ವಯವಾಗುತ್ತದೆ. ಕೋವಿಡ್‌ ಮಾರ್ಗಸೂಚಿ ಮತ್ತು ನಿರ್ಬಂಧಗಳನ್ನು ಪಾಲಿಸುವ ಹೊಣೆಯನ್ನು ಆಯಾ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳ ಸಂಘಗಳಿಗೇ ವಹಿಸಲಾಗುವುದು ಎಂದರು.

ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ನಡೆಸುವಂತಿಲ್ಲ. ಗುಂಪು ನೃತ್ಯ, ಸಂಗೀತ ಕಾರ್ಯಕ್ರಮ ಹೋಟೆಲ್, ಪಬ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರೂ ಎರಡು ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕ್ರಿಸ್‌ಮಸ್‌ಗೆ ಅಡ್ಡಿ ಇಲ್ಲ: ‘ಹೊಸ ವರ್ಷಾಚರಣೆಗೆ ವಿಧಿಸುತ್ತಿರುವ ನಿರ್ಬಂಧಗಳು ಕ್ರಿಸ್‌ಮಸ್‌ ಹಬ್ಬದ ಆಚರಣೆಗೆ ಅಡ್ಡಿಯುಂಟು ಮಾಡುವುದಿಲ್ಲ. ಕ್ರಿಸ್‌ಮಸ್‌ ವೇಳೆ ಯಾವುದೇ ರೀತಿಯ ಬಹಿರಂಗ ಕೂಟಗಳು ಇರುವುದಿಲ್ಲ. ಚರ್ಚ್‌ಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಅದು ಮುಂದುವರಿಯಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು