ಶುಕ್ರವಾರ, ಜೂನ್ 18, 2021
24 °C
ಕೆಸಿವಿಟಿ ತಂಡಕ್ಕೆ ಬಿಎಂಸಿ–92 ವೈದ್ಯರ ಪಡೆ ಬೆಂಬಲ

ಆಸ್ಪತ್ರೆಗಳ ಭಾರ ತಗ್ಗಿಸಲು ಬಿಎಂಸಿ–92 ವೈದ್ಯ ಪಡೆಯ ಹೊಸ ಮಾರ್ಗ

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯ ರಾಜಧಾನಿಯ ವ್ಯಾಪ್ತಿಯಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಯಲ್ಲಿ ಆಸ್ಪತ್ರೆಗಳ ಮೇಲಿನ ಭಾರ ತಗ್ಗಿಸಲು ಕರ್ನಾಟಕ ಕೋವಿಡ್‌ ಸ್ವಯಂಸೇವಕರ ತಂಡ (ಕೆಸಿವಿಟಿ) ಮತ್ತು ಬೆಂಗಳೂರು ವೈದ್ಯಕೀಯ ಕಾಲೇಜಿನ 1992ರ ಬ್ಯಾಚ್‌ನ ಪದವೀಧರರ ಗುಂಪು (ಬಿಎಂಸಿ–92) ಸದ್ದಿಲ್ಲದೇ ಪರ್ಯಾಯ ವ್ಯವಸ್ಥೆಯೊಂದನ್ನು ಕಟ್ಟುತ್ತಿವೆ.

ಅಮೆರಿಕ, ಬ್ರಿಟನ್‌ನಲ್ಲಿರುವ ವೈದ್ಯರೂ ಕೈಜೋಡಿಸಿದ್ದು, ವಾರಾಂತ್ಯದೊಳಗೆ ನಿತ್ಯವೂ 5,000 ಸೋಂಕಿತರಿಗೆ ನೆರವು ನೀಡಲು ಶಕ್ತವಾಗಲಿದೆ ಈ ವ್ಯವಸ್ಥೆ.

ಸೋಂಕಿತರಲ್ಲಿ ಭಯ ಕಡಿಮೆ ಮಾಡಿ ಮತ್ತು ಅವರಿಗೆ ದೃಢೀಕೃತ ಮಾಹಿತಿ ರವಾನಿಸುವ ಉದ್ದೇಶದಿಂದ ಸ್ವಯಂಸೇವಕರ ಪಡೆ‌ ಕಟ್ಟುವ ಆಲೋಚನೆಯಲ್ಲಿ ಶುರುವಾದ ಯೋಜನೆ ಈಗ, ಬಿಎಂಸಿ–92 ತಂಡದ ವೈದ್ಯರ ಸಹಾಯದಿಂದ ಆನ್‌ಲೈನ್‌ ಆಸ್ಪತ್ರೆಯ ಸ್ವರೂಪವನ್ನೇ ಪಡೆದುಕೊಂಡಿದೆ.

ಸೋಂಕಿತರ ಚಿಕಿತ್ಸೆಗೆ ತಜ್ಞ ವೈದ್ಯರು, ಆಪ್ತ ಸಮಾಲೋಚಕರು, ಸಹಾಯವಾಣಿ, ಆಮ್ಲಜನಕ ಸಾಂದ್ರಕಗಳು, ಪಲ್ಸ್‌ ಆಕ್ಸಿಮೀಟರ್‌ಗಳು ಸೇರಿದಂತೆ ಎಲ್ಲವೂ ಸಿದ್ಧವಾಗುತ್ತಿವೆ. ಕೋವಿಡ್‌ ರೋಗಿಗಳು ಆಮ್ಲಜನಕದ ಹಾಸಿಗೆಯವರೆಗೂ ಬರುವುದನ್ನು ತಡೆದು ಆಸ್ಪತ್ರೆಗಳ ಭಾರ ಕಡಿಮೆ ಮಾಡುವ ಗುರಿಯೊಂದಿಗೆ ಈ ತಂಡ ಸಕ್ರಿಯವಾಗಿದೆ.

ಕೆಸಿವಿಟಿ ಹೆಸರಿನಲ್ಲಿ ರಾಜ್ಯದಾದ್ಯಂತ ಸ್ವಯಂಸೇವಕರ ತಂಡವೊಂದನ್ನು ಕಟ್ಟವ ಪ್ರಯತ್ನದ ಭಾಗವಾಗಿ ಮೇ 4ರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಆರಂಭವಾಗಿತ್ತು.

ಒಂದು ವಾರದಲ್ಲಿ ಅದರ ಸ್ವರೂಪ ಬದಲಾಗಿದೆ. ಶುಕ್ರವಾರ ಸಂಜೆಯ ವೇಳೆಗೆ 82 ವೈದ್ಯರು, 1,300 ಸ್ವಯಂಸೇವಕರು ಈ ತಂಡವನ್ನು ಸೇರಿಕೊಂಡಿದ್ದಾರೆ.

ಅಮೆರಿಕ, ಬ್ರಿಟನ್‌ನಲ್ಲಿರುವ ಬಿಎಂಸಿ– 92 ಸದಸ್ಯರು ದೇಣಿಗೆ ಸಂಗ್ರಹಿಸಿ 400 ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸುತ್ತಿದ್ದಾರೆ.

‘ಆತಂಕದಲ್ಲಿ ಇರುವವರಿಗೆ ಆಪ್ತ ಸಮಾಲೋಚನೆ ಮತ್ತು ದೃಢೀಕೃತ ಮಾಹಿತಿ ಒದಗಿಸುವ ಸಹಾಯವಾಣಿ ಆರಂಭಿಸುವುದು ನಮ್ಮ ಆಲೋಚನೆಯಾಗಿತ್ತು. ನಾನು ಬಿಎಂಸಿ 1992ರ ಪದವೀಧರನಾಗಿದ್ದು, ಇದನ್ನು ಗೆಳೆಯರ ಗುಂಪಿನಲ್ಲಿ ಹಂಚಿಕೊಂಡೆ. ತಕ್ಷಣದಲ್ಲೇ ಅಮೆರಿಕ, ಬ್ರಿಟನ್‌ನಲ್ಲಿರುವ ವೈದ್ಯ ಗೆಳೆಯರು ಕಾರ್ಯಪ್ರವೃತ್ತರಾದರು. ಬೆಂಗಳೂರು ಸೇರಿದಂತೆ ದೇಶದಲ್ಲಿರುವ ವೈದ್ಯ ಗೆಳೆಯರೂ ಸಹಕಾರ ನೀಡಿದರು. ಇದರಿಂದ ಒಂದು ಪರ್ಯಾಯ ವ್ಯವಸ್ಥೆ ಕಟ್ಟುವ ಯೋಜನೆ ಸಿದ್ಧವಾಯಿತು’ ಎಂದು ಈ ಯೋಜನೆಯನ್ನು ಮುನ್ನಡೆಸುತ್ತಿರುವವರಲ್ಲಿ ಒಬ್ಬರಾದ ಡಾ.ಎಚ್‌.ವಿ. ವಾಸು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಅನುಭವ ಹೊಂದಿರುವವರು, ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿರುವವರು ಸೇರಿದಂತೆ ವಿವಿಧ ಕ್ಷೇತ್ರ ಗಳಲ್ಲಿ ದುಡಿಯುತ್ತಿರುವ ಜನರು ಸ್ವಯಂಸೇವಕರಾಗಿ ಬಂದಿದ್ದಾರೆ. 20 ಮಂದಿ ವೈದ್ಯಕೀಯ ಕ್ಷೇತ್ರದ ತಜ್ಞ ಆಪ್ತ ಸಮಾಲೋಚಕರು, 500 ಮಂದಿ ಕೋವಿಡ್‌ ಸಮಾಲೋಚಕರು ಉಚಿತವಾಗಿ ಸೇವೆ ಒದಗಿಸಲು ಸಜ್ಜಾಗಿದ್ದಾರೆ.

‘ವಿಕ್ರಂ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಉಮೇಶ್‌, ಬ್ರಿಟನ್‌ನಲ್ಲಿರುವ ಅರಿವಳಿಕೆ ತಜ್ಞ ಡಾ. ರವಿ ಸೇರಿದಂತೆ ಹಲವು ಪ್ರಖ್ಯಾತ ವೈದ್ಯರು ಈ ತಂಡ ಸೇರಿಕೊಂಡಿದ್ದಾರೆ. ಬಿಎಂಸಿ–92 ಗುಂಪಿನ ಜತೆಗೆ ಬೇರೆ ವೈದ್ಯರೂ ಕೈಜೋಡಿಸಿದ್ದಾರೆ. ಎಲ್ಲ ವೈದ್ಯರೂ ಕನ್ನಡ ಬಲ್ಲವರೇ ಆಗಿದ್ದಾರೆ’ ಎಂದು ಡಾ.ವಾಸು ಮಾಹಿತಿ ನೀಡಿದರು.

ಈ ತಂಡ ನಾಲ್ಕು ದಿನಗಳಿಂದ 500 ಕೋವಿಡ್‌ ರೋಗಿಗಳಿಗೆ ನೆರವು ಒದಗಿಸಿದೆ. ಮುಂದಿನ ಒಂದು ವಾರದೊಳಗೆ ನಿತ್ಯ 5,000 ಕರೆಗಳನ್ನು ಸ್ವೀಕರಿಸಿ, ನೆರವು ಒದಗಿಸುವ ಗುರಿ ಹೊಂದಿದೆ.

08047166115 ಸಹಾಯವಾಣಿ: ‌ಕೋವಿಡ್‌ ರೋಗಿಗಳಿಗೆ ನೆರವು ನೀಡಲು ಈ ತಂಡ 08047166115 ಸಂಖ್ಯೆಯ ಸಹಾಯವಾಣಿ ಆರಂಭಿಸಿದೆ. ಸಹಾಯವಾಣಿಗೆ ಕರೆ ಬಂದ ತಕ್ಷಣ ವಿವರ ದಾಖಲಿಸಿಕೊಂಡು, ಆಪ್ತ ಸಮಾಲೋಚಕರಿಗೆ ವರ್ಗಾಯಿಸಲಾಗುತ್ತದೆ. ಅಗತ್ಯವಿದ್ದರೆ ರೋಗಿಗಳಿಗೆ ವೈದ್ಯರು ಕರೆಮಾಡಿ, ಮಾರ್ಗದರ್ಶನ ನೀಡುತ್ತಾರೆ ಎಂದು ಡಾ.ವಾಸು ವಿವರಿಸಿದರು. ಮನೆಯಲ್ಲೇ ಪ್ರತ್ಯೇಕವಾಗಿದ್ದು, ಗುಣಮುಖರಾಗಲು ನೆರವು ಒದಗಿಸಲಾಗುವುದು. ಅಗತ್ಯ ಇರುವವರಿಗೆ ದಾನಿಗಳ ನೆರವಿನಲ್ಲಿ ಔಷಧಿ ಕಿಟ್‌ ಕೂಡ ತಲುಪಿಸಲಾಗುವುದು. ರೋಗಿಯೊಬ್ಬ ಕರೆಮಾಡಿದ ದಿನದಿಂದ ಸಂಪೂರ್ಣ ಗುಣಮುಖನಾಗುವವರೆಗೂ ಸಂಪರ್ಕದಲ್ಲಿ ಇದ್ದು, ನೆರವು ನೀಡಲಾಗುವುದು ಎಂದರು.

ಆಮ್ಲಜನಕ ಪೂರೈಕೆ ಅಗತ್ಯವಿರುವವರ ಚಿಕಿತ್ಸೆಗಾಗಿ ಎಚ್‌ಬಿಎಸ್‌ ಆಸ್ಪತ್ರೆ ಮತ್ತು ಮರ್ಸಿ ಮಿಷನ್‌ ಕೋವಿಡ್‌ ಆರೈಕೆ ಕೇಂದ್ರಗಳ ಸಹಭಾಗಿತ್ವ ಪಡೆಯಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅಲ್ಲಿಗೆ ದಾಖಲಿಸಲಾಗುವುದು. ಆಮ್ಲಜನಕ ಪೂರೈಕೆ ಇರುವ ಹಾಸಿಗೆ ಸಿಗದೇ ಇದ್ದರೆ ರೋಗಿಯ ಮನೆಗೆ ಆಮ್ಲಜನಕ ಸಾಂದ್ರಕ ಒದಗಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಗಳಲ್ಲಿ ಮಾಹಿತಿ ಮಾತ್ರ: ಕೆಸಿವಿಟಿ ತಂಡ ಬೆಂಗಳೂರಿನಲ್ಲಿ ಮಾತ್ರ ಕೋವಿಡ್‌ ರೋಗಿಗಳ ಚಿಕಿತ್ಸೆ ಹಾಗೂ ಆರೈಕೆಗೆ ವೈದ್ಯಕೀಯ ನೆರವು ಒದಗಿಸುತ್ತಿದೆ. ಇತರ ಜಿಲ್ಲೆಗಳಲ್ಲಿ ಸಮಾಲೋಚನೆ ಮತ್ತು ದೃಢೀಕೃತ ಮಾಹಿತಿಯನ್ನು ಹಂಚಿಕೊಳ್ಳುವ ಕೆಲಸವನ್ನಷ್ಟೇ ಮಾಡುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು