ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ | ನಕಲಿ ದಾಖಲೆ, ಅನುಕಂಪದ ನೇಮಕಾತಿ: ಎಸ್‌ಇ ಸೇರಿ 8 ಮಂದಿ ಸೆರೆ

Last Updated 20 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಧಿಕಾರಿಗಳೊಂದಿಗೆಶಾಮೀಲಾಗುವ ಮೂಲಕ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ)ಯಲ್ಲಿ ಅನುಕಂಪದ ಆಧಾರದ ನೇಮಕಾತಿ ಹೊಂದಿದ ಹಗರಣವೊಂದನ್ನುಬಯಲಿಗೆ ಎಳೆದಿರುವ ಕೋಟೆ ಠಾಣೆ
ಪೊಲೀಸರು, ಅಧೀಕ್ಷಕ ಎಂಜಿನಿಯರ್‌ (ಎಸ್‌ಇ) ಸೇರಿ ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರತಿ ಹುದ್ದೆಗೆ ₹35ರಿಂದ ₹ 40 ಲಕ್ಷ ವಸೂಲಿ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.

ಬೆಸ್ಕಾಂ ದಕ್ಷಿಣ ವಲಯದ ಅಧೀಕ್ಷಕ ಎಂಜಿನಿಯರ್‌ ಎಸ್‌.ಟಿ. ಶಾಂತಮಲ್ಲಪ್ಪ, ಸಹಾಯಕ ಅಧಿಕಾರಿ ಎಲ್‌.ರವಿ, ಕಚೇರಿ ಸಹಾಯಕ ಎಚ್‌.ಸಿ. ಪ್ರೇಮಕುಮಾರ್‌, ಅನುಕಂಪದ ಆಧಾರದಲ್ಲಿ ನೌಕರಿ ಪಡೆದಿದ್ದ ವಿ.ವೀರೇಶ್‌, ಸಿ.ರಘುಕಿರಣ್‌, ಹರೀಶ್‌, ಎಂ.ಆರ್.ಶಿವಪ್ರಸಾದ್‌ ಹಾಗೂ ನೌಕರಿಗೆ ಅರ್ಜಿ ಸಲ್ಲಿಸಿದ್ದ ಸಿ.ಕೆ. ಫೈಜಾನ್‌ ಮುಜಾಹಿದ್‌ ಬಂಧಿತರು.

ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಜೆ.ರಕ್ಷಿತ್‌ ಮತ್ತು ಓ.ಕಾರ್ತಿಕ್‌ ಎಂಬುವವರು ತಲೆ ಮರೆಸಿಕೊಂಡಿದ್ದಾರೆ.

‘ಅನುಕಂಪದ ಆಧಾರದ ಮೇರೆಗೆ ನೌಕರಿ ನೀಡುವಂತೆ ಸಿ.ಕೆ. ಫೈಜಾನ್‌ ಮುಜಾಹಿದ್‌ ಬೆಸ್ಕಾಂಗೆ ಮನವಿ ಸಲ್ಲಿಸಿದ್ದ. ಸಹಾಯಕ ಮಾರ್ಗದಾಳು ಆಗಿದ್ದ ಸಹೋದರ ಸಿ.ಕೆ. ಮಹಮ್ಮದ್‌ ಷೇಕ್‌ ವಿದ್ಯುತ್‌ ಅಪಘಾತದಿಂದ ಮೃತಪಟ್ಟಿರುವುದಾಗಿ ದಾಖಲೆ ಒದಗಿಸಿದ್ದ. ಅನುಕಂಪದ ಆಧಾರದ ಉದ್ಯೋಗಕ್ಕೆ ಜಿಲ್ಲೆಯಿಂದ ಹೆಚ್ಚು ಪ್ರಸ್ತಾವಗಳು ಸಲ್ಲಿಕೆ ಆಗುತ್ತಿರುವುದರಿಂದ ಬೆಸ್ಕಾಂ ಉಪ ಲೆಕ್ಕಾಧಿಕಾರಿಯವರು ಅನುಮಾನದಿಂದ ಪರಿಶೀಲನೆ ನಡೆಸಿದಾಗ ಪ್ರಕರಣ ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಮಂಗಳವಾರ ಮಾಹಿತಿ ನೀಡಿದರು.

‘ಸಿ.ಕೆ. ಮಹಮ್ಮದ್‌ ಷೇಕ್‌ ಎಂಬುವವರು ಚಿತ್ರದುರ್ಗ ಉಪವಿಭಾಗದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಬೆಸ್ಕಾಂ ಅಧಿಕಾರಿಗಳು, ಮುಜಾಹಿದ್‌ವಿರುದ್ಧ ದೂರುದಾಖಲಿಸಿದರು.ಆರೋಪಿಯನ್ನುವಶಕ್ಕೆ ಪಡೆದುವಿಚಾರಣೆ ನಡೆಸಿದಾಗ ಭಾರಿ ಹಗರಣವೊಂದು ಬೆಳಕಿಗೆ ಬಂದಿದೆ. ಎರಡು ವರ್ಷದಲ್ಲಿ ಆರು ಜನರು ನೌಕರಿ ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಅವರು ವಿವರಿಸಿದರು.

ಪ್ರತಿ ಹುದ್ದೆಗೆ ₹ 40 ಲಕ್ಷ ನಿಗದಿ!

ಬೆಸ್ಕಾಂನಲ್ಲಿ ಕಾರ್ಯ ನಿರ್ವಹಿಸದೇ ಇರುವವರನ್ನು ‘ಉದ್ಯೋಗಿ’ ಎಂಬಂತೆ ಬಿಂಬಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ, ನೌಕರಿ ನೀಡುತ್ತಿದ್ದ ಜಾಲ ಬರೋಬ್ಬರಿ ₹ 35ಲಕ್ಷದಿಂದ ₹ 40 ಲಕ್ಷ ಹಣ ಪಡೆಯುತ್ತಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ.

‘ಕಚೇರಿಯ ಸಹಾಯಕ ಅಧಿಕಾರಿ ಎಲ್‌.ರವಿ ಪ್ರಕರಣದ ಪ್ರಮುಖ ರೂವಾರಿ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಯುವಕರಿಂದ ಅರ್ಜಿ ಹಾಕಿಸುತ್ತಿದ್ದರು. ಬೆಸ್ಕಾಂ ನೌಕರ ಎಚ್‌.ಸಿ. ಪ್ರೇಮ್‌ಕುಮಾರ್‌ ಈ ಪ್ರಸ್ತಾವ ಅನುಮೋದನೆ ಆಗುವಂತೆ ನೋಡಿಕೊಳ್ಳುತ್ತಿದ್ದರು. ಅಧೀಕ್ಷಕ ಎಂಜಿನಿಯರ್‌ ಶಾಂತಮಲ್ಲಪ್ಪ ನೇಮಕಾತಿ ಆದೇಶ ನೀಡುತ್ತಿದ್ದರು. ಕಿರಿಯ ಎಂಜಿನಿಯರ್ ಸೇರಿ ಹಲವು ಹುದ್ದೆಗಳಿಗೆ ಇದೇ ರೀತಿ ನೇಮಕಾತಿ ಮಾಡಿಕೊಂಡಿದ್ದರು’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಪರಶುರಾಮ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT