ಬೆಂಗಳೂರು: ಬೀದರ್ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕಈಶ್ವರಖಂಡ್ರೆಅವರ ಆಯ್ಕೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.ಈ ಕುರಿತಂತೆ ಬಿಜೆಪಿಯ ಪರಾಜಿತ ಅಭ್ಯರ್ಥಿ ಭಾಲ್ಕಿ ತಾಲ್ಲೂಕಿನ ಕೇಸರ ಜಾವಳಗಾ ಗ್ರಾಮದ ಡಿ.ಕೆ.ಸಿದ್ರಾಮ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.
‘ಈಶ್ವರಖಂಡ್ರೆಚುನಾವಣೆಯಲ್ಲಿ ಭಾರಿ ಅಕ್ರಮಗಳನ್ನು ಎಸಗಿದ್ದಾರೆ. ಆದ್ದರಿಂದ, ಪ್ರಜಾಪ್ರತಿನಿಧಿ ಕಾಯ್ದೆ–1951ರ ಕಲಂ 123ರ ಅನುಸಾರ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ನನ್ನನ್ನು ವಿಜೇತ ಎಂದು ಘೋಷಿಸಬೇಕು’ ಎಂದು ಸಿದ್ರಾಮ ಅವರು ಈ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಪೀಠ,‘ಅರ್ಜಿದಾರರ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.
‘ನಾಮಪತ್ರ ಘೋಷಣೆ ವೇಳೆ ಆಸ್ತಿ ವಿವರ ಘೋಷಿಸುವಾಗ ಸರಿಯಾದ ಮಾಹಿತಿ ನೀಡಿಲ್ಲ, ಸಚಿವರೂ ಆಗಿದ್ದಈಶ್ವರಖಂಡ್ರೆಹಲವಾರು ಸ್ಥಿರ ಮತ್ತು ಚರಾಸ್ತಿಗಳ ಮಾಲೀಕರು. ಶಾಸಕರ ವೇತನ ಪಡೆಯುತ್ತಿದ್ದವರು. ಆದರೆ, ತೆರಿಗೆ ಪಾವತಿದಾರ ಅಲ್ಲ ಎಂದು ಹೇಳಿಕೊಂಡಿದ್ದಾರೆ, ಮತದಾನ ನಡೆದ ಸಂಜೆ ಆರು ಗಂಟೆಗೆ ಭಾಲ್ಕಿ ಮತಕ್ಷೇತ್ರದಿಂದ ಹೊರಟು ಬೀದರ್ ಜಿಲ್ಲಾ ಖಜಾನೆಗೆ ಸೇರಬೇಕಾದ ಮತಪೆಟ್ಟಿಗೆಗಳು 17 ಗಂಟೆ ತಡವಾಗಿ ಖಜಾನೆ ಸ್ಥಳ ತಲುಪಿವೆ ಮತ್ತು ಚುನಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಎಸಗಲಾಗಿದೆ' ಎಂಬ ಗುರುತರ ಆರೋಪಗಳನ್ನು ಅರ್ಜಿದಾರರು ಮಾಡಿದ್ದರು.2018ರ ಮೇ 12ರಂದು ಚುನಾವಣೆ ಹಾಗೂ ಮೇ 15ರಂದು ಮತ ಎಣಿಕೆ ನಡೆದಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.